ಬೆಂಗಳೂರು: ಎಂಜಿ ರಸ್ತೆಯಲ್ಲಿ ಸರಗಳ್ಳನ ದಾಳಿ, ಮಹಿಳೆಯ ಸರ ಕಿತ್ತು ಐವರಿಗೆ ಚಾಕುವಿನಿಂದ ತಿವಿದು ಗಾಯ

ನಿನ್ನೆ ಭಾನುವಾರ ಸಂಜೆ 7.15ರ ಹೊತ್ತಿಗೆ ಬೆಂಗಳೂರಿನ ಜನನಿಬಿಡ ಎಂ ಜಿ ರಸ್ತೆಯಲ್ಲಿ ಆತಂಕದ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ನಿನ್ನೆ ಭಾನುವಾರ ಸಂಜೆ 7.15ರ ಹೊತ್ತಿಗೆ ಬೆಂಗಳೂರಿನ ಜನನಿಬಿಡ ಎಂ ಜಿ ರಸ್ತೆಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಸರಣಿ ಸರಗಳ್ಳ ದಾರಿಹೋಕರಿಗೆ ತಿವಿಯುತ್ತಾ ಹೋಗುತ್ತಿದ್ದ. ಸರಗಳ್ಳ ಸುಮಾರು 35 ವರ್ಷದ ಮಹಿಳೆಯ ಸರವನ್ನು ಕಿತ್ತುಕೊಂಡು ಆಕೆಗೆ ತಿವಿದು ಹೋಗುವಷ್ಟರಲ್ಲಿ ಮತ್ತೆ ನಾಲ್ಕು ಮಂದಿಗೆ ತಿವಿದು ಹೋಗಿದ್ದ. ಅವರಲ್ಲಿ ಇಬ್ಬರು ಪೊಲೀಸ್ ಕಾನ್ಸ್ಟೇಬಲ್ ಗಳು. ಕೊನೆಗೆ ಜನರೆಲ್ಲಾ ಆತನನ್ನು ಅಟ್ಟಿಸಿಕೊಂಡು ಹೋಗಿ ಕೊನೆಗೂ ಹಿಡಿಯುವಲ್ಲಿ ಯಶಸ್ವಿಯಾದರು.

ಅಲಸೂರಿನ ನಿವಾಸಿ ಶೀತಲ್ ಜೈನ್, ಪೊಲೀಸ್ ಕಾನ್ಸ್ಟೇಬಲ್ ಗಳಾದ ಪ್ರತಾಪ್ ಮತ್ತು ಮಹೇಶ್ ಹಾಗೂ ಮತ್ತಿಬ್ಬರು ಗಾಯಗೊಂಡಿದ್ದಾರೆ.

ನಿನ್ನೆ ಭಾನುವಾರವಾಗಿದ್ದರಿಂದ ಶೀತಲ್ ಜೈನ್ ತಮ್ಮ ಮಕ್ಕಳನ್ನು ಕರೆದುಕೊಂಡು ಎಂ ಜಿ ರಸ್ತೆಯ ರಂಗೋಲಿ ಮೆಟ್ರೊ ಆರ್ಟ್ ಗೆ ಬಂದಿದ್ದರು. ಮಕ್ಕಳು ಆಟವಾಡುತ್ತಿರುವಾಗ ಸರಣಿ ಸರಗಳ್ಳ ದಸ್ತಗಿರ್ ಬಂದು ಆಕೆಯ ಕುತ್ತಿಗೆಯಿಂದ ಸರ ಕದ್ದು ಓಡಿಹೋಗತೊಗಿದನು. ಮಹಿಳೆ ಕಿರುಚಿಕೊಂಡಾಗ ಆರೋಪಿ ಆಕೆಯ ಮೂಗು ಮತ್ತು ಬಲ ಮಣಿಕಟ್ಟಿನ ಮೇಲೆ ತಿವಿದು ಪರಾರಿಯಾಗುತ್ತಿದ್ದನು. ಅಷ್ಟರಲ್ಲಿ  ದಾರಿಹೋಕರು ಆತನನ್ನು ಹಿಂಬಾಲಿಸಿ ಹಿಡಿಯಲು ಪ್ರಯತ್ನಿಸಿದರು. ಅವರನ್ನು ಕೂಡ ತಿವಿದು ಬಿಡಿಸಿಕೊಳ್ಳಲು ಯತ್ನಿಸಿದನು.

ವಿಷಯ ತಿಳಿದ ಕಾನ್ಸ್ಟೇಬಲ್ ಗಳಾದ ಪ್ರತಾಪ್ ಮತ್ತು ಮಹೇಶ್ ಕೂಡಲೇ ಸ್ಥಳಕ್ಕೆ ಆಗಮಿಸಿದರು. ಅವರನ್ನು ಕೂಡ ದಸ್ತಗಿರ್ ತಿವಿದಿದ್ದಾನೆ. ಆಗ ಅಲ್ಲಿ ಜನರು ಸೇರಿ ತಡೆದಾಗ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ನಂತರ ಆತನನ್ನು ಪೊಲೀಸರಿಗೆ ಒಪ್ಪಿಸಲಾಯಿತು.

ಗಾಯಗೊಂಡವರನ್ನೆಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು. ಶೀತಲ್ ಜೈನ್ ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತು. ಈ ಕೃತ್ಯ ಎಸಗುವಾಗ ದಸ್ತಗಿರ್ ಮದ್ಯ ಮತ್ತು ಮತ್ತು ಭರಿಸುವ ಪದಾರ್ಥ ಸೇವಿಸಿದ್ದ ಎಂದು ತಿಳಿದುಬಂದಿದೆ.

ಕಬ್ಬನ್ ಪಾರ್ಕ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com