ಬೆಂಗಳೂರು: ಇತ್ತೀಚಿಗಷ್ಟೇ ನಮ್ಮ ಮೆಟ್ರೊ ನೇರಳೆ ಮಾರ್ಗದಲ್ಲಿ ಆರಂಭವಾದ ಆರು ಬೋಗಿಯ ರೈಲು ಸಂಚಾರದಿಂದಾಗಿ ಬಿಎಂಆರ್ ಸಿಎಲ್ ಗೆ ದಾಖಲೆಯ ಆದಾಯ ಬಂದಿದ್ದು, ಸೋಮವಾರ ಒಂದೇ ದಿನದಲ್ಲಿ ಬರೋಬ್ಬರಿ 1.3 ಕೋಟಿ ರುಪಾಯಿ ಆದಾಯ ಗಳಿಸಿದೆ.
ಬಿಎಂಆರ್ ಸಿಎಲ್ ಕಾರ್ಯನಿರ್ವಾಹಕ ನಿರ್ದೇಶಕ ಎಎಸ್ ಶಂಕರ್ ಅವರ ಪ್ರಕಾರ, ಜುಲೈ 2ರಂದು ಮೆಟ್ರೊದಲ್ಲಿ ಒಟ್ಟು 3,95,356 ಪ್ರಯಾಣಿಕರು ಸಂಚರಿಸಿದ್ದು, ದಾಖಲೆಯ 1,30,61,151 ರುಪಾಯಿ ಆದಾಯ ಸಂಗ್ರಹವಾಗಿದೆ.
ಜ.24ರಂದು 4.11 ಲಕ್ಷ ಪ್ರಯಾಣಿಕರು ಮೆಟ್ರೊದಲ್ಲಿ ಪ್ರಯಾಣಿಸಿರುವುದು ದಾಖಲೆಯಾಗಿದೆ. ಆದರೆ, ಜು.2ರಂದು 3.95 ಲಕ್ಷ ಪ್ರಯಾಣಿಸಿದ್ದರೂ ಕೂಡಾ, ಒಂದು ನಿಲ್ದಾಣದಿಂದ ಮತ್ತೊಂದು ನಿಲ್ದಾಣದ ನಡುವೆ ಹೆಚ್ಚು ಅಂತರ ಇದ್ದ ಕಾರಣ ಆದಾಯ ಹೆಚ್ಚು ದಾಖಲಾಗಿದೆ ಎಂದು ಬಿಎಂಆರ್‌ಸಿಎಲ್ ಸಾರ್ವಜನಿಕ ಸಂಪರ್ಕಾಧಿಕಾರಿ ಯು.ಎ.ವಸಂತ ರಾವ್ ತಿಳಿಸಿದ್ದಾರೆ.
ಆರು ಬೋಗಿಗಳ ಜೋಡಣೆ ಬಳಿಕ ಮೆಟ್ರೊಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಪ್ರಯಾಣಿಕರ ಸಂಖ್ಯೆ ಇನ್ನೂ ಹೆಚ್ಚುವ ನಿರೀಕ್ಷೆ ಇದೆ ಎಂದು ಅವರು ಹೇಳಿದ್ದಾರೆ.