ತಮಿಳುನಾಡಿಗೆ ನೀರು ಹರಿಸಬೇಕೆಂಬ ಆದೇಶ: ಕಾವೇರಿ ನದಿ ತೀರದ ರೈತರಲ್ಲಿ ಆತಂಕ

ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಕರ್ನಾಟಕವು ತಮಿಳುನಾಡಿಗೆ 31.24 ಟಿಎಂಸಿ ನೀರನ್ನು...
ಕಾವೇರಿ ನದಿ ನೀರು
ಕಾವೇರಿ ನದಿ ನೀರು

ಮೈಸೂರು: ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಕರ್ನಾಟಕವು ತಮಿಳುನಾಡಿಗೆ 31.24 ಟಿಎಂಸಿ ನೀರನ್ನು ಬಿಡುಗಡೆ ಮಾಡಬೇಕೆಂದು ಆದೇಶ ನೀಡಿರುವುದರಿಂದ ಮೈಸೂರು ಮತ್ತು ಮಂಡ್ಯ ಜಿಲ್ಲೆಯ ಕಾವೇರಿ ನದಿ ತೀರದಲ್ಲಿರುವ ರೈತರಲ್ಲಿ ಆತಂಕ ಮನೆ ಮಾಡಿದೆ.

ಮೈಸೂರು ಜಿಲ್ಲೆಯ ವ್ಯಾಪ್ತಿಗೆ ಬರುವ  ಕೆಆರ್ ಎಸ್ ಮತ್ತು ಕಬಿನಿ ಅಣೆಕಟ್ಟುಗಳಲ್ಲಿ ಈ ವರ್ಷ ನೀರು ತುಂಬಿದ್ದರೂ ಕೂಡ ತಮಿಳುನಾಡಿಗೆ ನೀರು ಹರಿಸಿದರೆ ತಮಗೆ ವ್ಯವಸಾಯಕ್ಕೆ ಹಾಗೂ ಇತರ ಬಳಕೆಗೆ ನೀರಿನ ಕೊರತೆಯುಂಟಾಗಬಹುದು ಎಂಬ ಚಿಂತೆಯಲ್ಲಿ ರೈತರಿದ್ದಾರೆ. ತಮ್ಮ ಜನಪ್ರತಿನಿಧಿಗಳು ಸರ್ಕಾರದ ಮಟ್ಟದಲ್ಲಿ ಏನು ನಿರ್ಧಾರ ಕೈಗೊಳ್ಳುತ್ತಾರೋ ಎಂಬ ಆತಂಕದಲ್ಲಿದ್ದಾರೆ.

ಮಂಡ್ಯ ಜಿಲ್ಲೆಗೆ ಸಿಗುವ ಕೆಆರ್ ಎಸ್ ಜಲಾಶಯದಲ್ಲಿ ನೀರಿನ ಒಳಹರಿವಿನ ಸಾಮರ್ಥ್ಯ 124.80 ಟಿಎಂಸಿಗಳಷ್ಟಿದ್ದು ನಿನ್ನೆ ನೀರಿನ ಒಳಹರಿವು 108.76 ಅಡಿ(30.493 ಟಿಎಂಸಿ)ಯಷ್ಟಾಗಿತ್ತು. ಇಲ್ಲಿ ಜಲಾಶಯದ ಒಳಹರಿವು 6,039 ಕ್ಯೂಸೆಕ್ಸ್ ಮತ್ತು ಹೊರಹರಿವು 3,537 ಕ್ಯೂಸೆಕ್ಸ್ ಆಗಿದೆ. ಕಳೆದ ವರ್ಷ ಇದೇ ಸಮಯದಲ್ಲಿ ಇಲ್ಲಿ ನೀರಿನ ಮಟ್ಟ 74.15 ಅಡಿಯೊಂದಿಗೆ ಒಳಹರಿವು 5,468 ಕ್ಯೂಸೆಕ್ಸ್ ಮತ್ತು ಹೊರಹರಿವು 2,106 ಕ್ಯೂಸೆಕ್ಸ್ ಆಗಿತ್ತು.

ಕೆಆರ್ ಎಸ್ ಜಲಾಶಯದಿಂದ ವಿಶ್ವೇಶ್ವರಯ್ಯ ಕಾಲುವೆಗೆ ನೀರು ಬಿಡುವುದನ್ನು ಹೊರತುಪಡಿಸಿ ಚಿಕ್ಕದೇವರಾಯ ಸಾಗರ ಕಾಲುವೆಗೆ ಇನ್ನೂ ನೀರು ಹರಿಸಬೇಕಷ್ಟೆ.
ಈ ವರ್ಷ ಅವಧಿಗಿಂತ ಮುನ್ನವೇ ಸಾಕಷ್ಟು ಮಳೆ ಬಿದ್ದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದ್ದರೂ ಕೂಡ ಕರ್ನಾಟಕ ಮತ್ತು ತಮಿಳುನಾಡು ಮಧ್ಯೆ ಕಾವೇರಿ ನೀರು ಹಂಚಿಕೆಯ ವಿವಾದದಿಂದಾಗಿ ರೈತರು ಇದೇ ನೀರನ್ನು ವ್ಯವಸಾಯಕ್ಕೆ ನಂಬಿಕೊಂಡಿರುವುದರಿಂದ ಅವರ ಭವಿಷ್ಯ ಅತಂತ್ರ ಸ್ಥಿತಿಯಲ್ಲಿದೆ.

ರಾಗಿ ಬೆಳೆಗೆ ಕಡಿಮೆ ನೀರು ಬೇಕಾಗುವುದರಿಂದ ಕೆಲವು ರೈತರು ಅದರ ಬೆಳೆಯತ್ತ ಮುಖಮಾಡಿದ್ದಾರೆ. ಇನ್ನು ತೆಂಗು ಬೆಳೆಗಾರರು ಇದೇ ಕಾಲುವೆಯ ನೀರನ್ನು ನಂಬಿಕೊಂಡಿದ್ದಾರೆ.

ಕಬಿನಿ ಜಲಾಶಯದಿಂದ ತಮಿಳುನಾಡಿಗೆ ಕಳೆದ ತಿಂಗಳು 14.14 ಟಿಎಂಸಿ ನೀರನ್ನು ಬಿಡುಗಡೆ ಮಾಡಲಾಗಿದೆ. ಈ ಜಲಾಶಯದಲ್ಲಿ ಪ್ರಸ್ತುತ ನೀರಿನ ಒಳಹರಿವು 18.44ಟಿಎಂಸಿ ಅಂದರೆ 4,681 ಕ್ಯೂಸೆಕ್ಸ್ ಮತ್ತು ಹೊರಹರಿವು 5 ಸಾವಿರ ಕ್ಯೂಸೆಕ್ಸ್ ಇದೆ. ಕಳೆದ ವರ್ಷ ಇದೇ ಸಮಯದಲ್ಲಿ ಈ ಜಲಾಶಯದ ಒಳಹರಿವು 3,842 ಕ್ಯೂಸೆಕ್ಸ್ ಮತ್ತು ಹೊರಹರಿವು 2 ಸಾವಿರ ಕ್ಯೂಸೆಕ್ಸ್ ಇದೆ. ಈ ಜಲಾಶಯದ ನೀರು ಮೈಸೂರು ಜಿಲ್ಲೆಯ ಟಿ ನರಸೀಪುರ, ನಂಜನಗೂಡು ತಾಲ್ಲೂಕು, ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ, ಯಳಂದೂರು ಮತ್ತು ಚಾಮರಾಜನರಗ ತಾಲ್ಲೂಕುಗಳ ಭಾಗಗಳ ಒಂದು ಲಕ್ಷಕ್ಕೂ ಅಧಿಕ ಎಕರೆ ಪ್ರದೇಶಕ್ಕೆ ನೀರಾವರಿ ಕಲ್ಪಿಸುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com