ಬೆಳೆ ಸಾಲ ಮನ್ನಾದಿಂದ ತೃಪ್ತರಾಗದ ರೈತರು: ಜು.9ರಂದು ಪ್ರತಿಭಟನೆ

ರಾಜ್ಯದ ರೈತರ ಸುಮಾರು 34 ಸಾವಿರ ಕೋಟಿ ರೂಪಾಯಿ ಸಾಲ ಮನ್ನಾ ಮಾಡುವುದಾಗಿ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯದ ರೈತರ ಸುಮಾರು 34 ಸಾವಿರ ಕೋಟಿ ರೂಪಾಯಿ ಸಾಲ ಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಘೋಷಿಸಿ ಆಗಿದೆ. ಆದರೆ ಇದು ರೈತರ ಮುಖದಲ್ಲಿ ಅಷ್ಟು ಮಂದಹಾಸ ಮೂಡಿಸಿಲ್ಲ.

ಸಂಪೂರ್ಣ ಸಾಲಮನ್ನಾ ಮಾಡುವುದಾಗಿ ಚುನಾವಣೆಗೆ ಮುನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದ ಕುಮಾರಸ್ವಾಮಿ ತನ್ನ ಮಾತುಗಳನ್ನು ಸಂಪೂರ್ಣವಾಗಿ ಈಡೇರಿಸಿಲ್ಲ. ಇದರಿಂದಾಗಿ ಸುಮಾರು 1.2 ಲಕ್ಷ ಕೋಟಿ ರೂಪಾಯಿ ಮೊತ್ತದ ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕೆಂದು ರೈತರು ಒತ್ತಾಯಿಸಿದ್ದಾರೆ.

ಅಸಮಾಧಾನಗೊಂಡಿರುವ ರೈತರ ಕೋಪ ಶಮನ ಮಾಡಲು ಕುಮಾರಸ್ವಾಮಿಯವರು ಯತ್ನಿಸಿದರೂ ಕೂಡ 86 ಸಾವಿರ ಕೋಟಿ ರೂಪಾಯಿ ಸಾಲ ಯಾರು ಮನ್ನಾ ಮಾಡುತ್ತಾರೆ? ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಕ್ಷಣವೇ ಸಾಲಮನ್ನಾ ಮಾಡಬೇಕು ಇಲ್ಲದಿದ್ದರೆ ಸಾಮೂಹಿಕ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡುತ್ತಾರೆ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್.

ಮುಖ್ಯಮಂತ್ರಿ ಕುಮಾರಸ್ವಾಮಿಯವರು ತಮ್ಮ ಚೊಚ್ಚಲ ಬಜೆಟ್ ನಲ್ಲಿ ರೈತರ ಬೆಳೆ ಸಾಲಮನ್ನಾ ಮಾಡುವುದಾಗಿ ಘೋಷಿಸಿದ್ದರ ಬಗ್ಗೆ ಚರ್ಚೆ ನಡೆಸಲು ನಿನ್ನೆ ಸಭೆ ಸೇರಿದ್ದರು. ಎಲ್ಲಾ ರೈತರ ಉಳಿದ ಕೃಷಿ ಸಾಲಗಳನ್ನು ಮನ್ನಾ ಮಾಡುವಂತೆ ಒತ್ತಾಯಿಸಿ ಮೊದಲ ಪ್ರತಿಭಟನೆಯನ್ನು ಇದೇ 9ರಂದು ಬೆಂಗಳೂರಿನಲ್ಲಿ ನಡೆಸಲಿದೆ. ನಂತರ ಇದೇ 21ರಂದು ಹಾವೇರಿಯಲ್ಲಿ ರೈತರು ಬೃಹತ್ ರ್ಯಾಲಿ ನಡೆಸಿ ಸಾಲಮನ್ನಾ ಮಾಡಬೇಕೆಂದು ಒತ್ತಾಯಿಸಲಿದ್ದಾರೆ.

ಸಾಲಮನ್ನಾಗೆ ಹಣ ಒದಗಿಸಲು ಕುಮಾರಸ್ವಾಮಿಯವರು ಈಗಾಗಲೇ ಬಜೆಟ್ ನಲ್ಲಿ ಪೆಟ್ರೋಲ್, ಡೀಸೆಲ್, ವಿದ್ಯುತ್ ಮತ್ತು ಮದ್ಯದ ಬೆಲೆ ಏರಿಕೆ ಮಾಡಿ ಬಜೆಟ್ ನಲ್ಲಿ ಘೋಷಿಸಿದ್ದಾರೆ. ರಾಜ್ಯದ ಅಲ್ಲಲ್ಲಿ ಇನ್ನೂ ಕೂಡ ರೈತರ ಆತ್ಮಹತ್ಯೆಗಳು ನಡೆಯುತ್ತಿವೆ. ಏಕೆಂದರೆ ಅವರಿಗೆ ಸಾಲಮನ್ನಾದ ಪ್ರಯೋಜನ ಸರಿಯಾಗಿ ತಲುಪುತ್ತಿಲ್ಲ. ಈ ನಿಟ್ಟಿನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ರೈತರು ತಮ್ಮ ರಾಜಕೀಯ ಹಿತಾಸಕ್ತಿಯನ್ನು ಬದಿಗಿತ್ತಿ ರಾಜ್ಯದ ರೈತರ ಹಿತಾಸಕ್ತಿಯನ್ನು ಪರಿಗಣಿಸಬೇಕು ಎಂದು ಮನವಿ ಮಾಡಿಕೊಳ್ಳುತ್ತೇವೆ. ಸಾಲಭಾದೆಯಿಂದ ರೈತರನ್ನು ಋಣಮುಕ್ತ ಮಾಡುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಚಂದ್ರಶೇಖರ್ ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com