ಪೊಲೀಸರೇ ಚಿನ್ನದ ಸರ ಕದ್ದು ಪೇಂಟರ್ ಮೇಲೆ ಆರೋಪ?

ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆಮಾತು ಇದೆ. ಇದು ಕೂಡ ಹಾಗೆಯೇ, ಇಬ್ಬರು ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆಮಾತು ಇದೆ. ಇದು ಕೂಡ ಹಾಗೆಯೇ, ಇಬ್ಬರು ಪೊಲೀಸರು ಚಿನ್ನದ ಸರವನ್ನು ಕದ್ದು ಪೈಂಟರ್ ಮೇಲೆ ಆರೋಪ ಹೊರಿಸಿದ ಪ್ರಕರಣ ಕೆಜಿ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಈ ಸಂಬಂಧ ವಿನೋದ್ ಕುಮಾರ್ ಎಂಬ ಪೈಂಟರ್ ಕೆಜಿ ಹಳ್ಳಿ ಪೊಲೀಸರ ವಿರುದ್ಧ ದೈಹಿಕ ಹಲ್ಲೆ ಮತ್ತು ವಿಚಾರಣೆ ವೇಳೆ ಸುಳ್ಳು ಹೇಳಿಕೆ ನೀಡುವಂತೆ ಹಿಂಸೆ ನೀಡಿದ ಬಗ್ಗೆ ರಾಜ್ಯ ಮಾನವ ಹಕ್ಕುಗಳ ಆಯೋಗ ಮತ್ತು ನಗರ ಪೊಲೀಸ್ ಆಯುಕ್ತ ಟಿ ಸುನಿಲ್ ಕುಮಾರ್ ಅವರಿಗೆ ದೂರು ನೀಡಿದ್ದಾರೆ.

ಘಟನೆ ವಿವರ: ಡಿಜೆ ಹಳ್ಳಿಯ ಆರೋಗ್ಯದಾಸ್ ನಗರದ ನಿವಾಸಿಯಾಗಿರುವ ವಿನೋದ್ ಕುಮಾರ್ ತನಗೆ ಪೊಲೀಸರು ವಿಪರೀತವಾಗಿ ಹೊಡೆದಿದ್ದಾರೆ ಎಂದು ಆರೋಪಿಸಿದ್ದಾರೆ. ಕಳೆದ ತಿಂಗಳು 29ರಂದು ರಾತ್ರಿ 10 ಗಂಟೆ ಸುಮಾರಿಗೆ ಪೈಂಟರ್ ವಿನೋದ್ ಕುಮಾರ್ ತಮ್ಮ ಮನೆಯಲ್ಲಿ ನಿದ್ದೆ ಮಾಡುತ್ತಿದ್ದಾಗ ಆತನ ಸಂಬಂಧಿಕ ನಂದ ಕುಮಾರ್ ಎಂಬುವವರು ಬಂದು ಏನೋ ಕೆಲಸ ಇದೆ ಬನ್ನಿ ಎಂದು ಎಬ್ಬಿಸಿ ಕರೆದುಕೊಂಡು ಹೋದರಂತೆ. ಈ ಹೊತ್ತಿನಲ್ಲಿ ಹೊರಗೆ ಇಬ್ಬರು ಪೊಲೀಸ್ ಕಾನ್ಸ್ಟೇಬಲ್ ಗಳು ಕಾದು ನಿಂತಿದ್ದರು.

ವಿನೋದ್ ಕುಮಾರ್ ನನ್ನು ಆಟೋದಲ್ಲಿ ಒತ್ತಾಯಪೂರ್ವಕವಾಗಿ ಕುಳಿತುಕೊಳ್ಳಲು ಹೇಳಿ ಜ್ಯುವೆಲ್ಲರಿ ಶಾಪ್ ಗೆ ಕರೆದುಕೊಂಡು ಹೋದರು. ಪೊಲೀಸರು ಜ್ಯುವೆಲ್ಲರಿ ಮಾಲಿಕರಿಗೆ ಬೆದರಿಕೆ ಹಾಕಿ ಚಿನ್ನದ ಸರವನ್ನು ಕಿತ್ತುಕೊಂಡರು. ಇದೆಲ್ಲವನ್ನು ನೋಡುತ್ತಿದ್ದ ವಿನೋದ್ ಗೆ ಏನೆಂದೂ ಅರ್ಥವಾಗಲಿಲ್ಲ, ಗಾಬರಿಯಾಯಿತು. ನಂತರ ಪೊಲೀಸ್ ಸ್ಟೇಷನ್ ಗೆ ಕರೆದುಕೊಂಡು ಹೋಗಿ ಹಲ್ಲೆ ನಡೆಸಿ ಚಿನ್ನದ ಸರ ಕದ್ದುಕೊಂಡಿದ್ದಾಗ ತಪ್ಪೊಪ್ಪಿಕೊಳ್ಳುವಂತೆ ಹೇಳಿದರು.

ತಪ್ಪೊಪ್ಪಿಕೊಂಡರೆ 20 ಸಾವಿರ ರೂಪಾಯಿ ನೀಡುವುದಾಗಿ ಕೂಡ ಆಮಿಷವೊಡ್ಡಿದರು. ವಿನೋದ್ ಕುಮಾರ್ ಅದಕ್ಕೊಪ್ಪಲಿಲ್ಲ, ತನ್ನನ್ನು ಬಿಟ್ಟುಬಿಡುವಂತೆ ಹೇಳಿದರು. ಆಗ ಮತ್ತೆ ವಿನೋದ್ ಗೆ ಹೊಡೆಯಲು ಆರಂಭಿಸಿದರು. ವಿನೋದ್ ಒಪ್ಪದಿದ್ದಾಗ ಬೇರೆ ಕೇಸಿನಲ್ಲಿ ಸಿಕ್ಕಿಹಾಕಿಸುವುದಾಗಿ ಹೇಳಿದ್ದಾರೆ. ನಂತರ ವಿನೋದ್ ತಂದೆ ಪೊಲೀಸ್ ಠಾಣೆಗೆ ಬಂದು ಹಣ ಕೊಟ್ಟು ಬಿಡಿಸಿಕೊಂಡು ಬಂದರು.

ವಿನೋದ್ ತಂದೆ ಜಯಮಣಿ  ದೂರಿನಲ್ಲಿ ಈ ಎಲ್ಲಾ ವಿವರಗಳನ್ನು ನೀಡಿದ್ದು, ಪೊಲೀಸರಿಗೆ ಲಂಚ ನೀಡಿ ಮಗನನ್ನು ಬಿಡಿಸಿಕೊಂಡು ಬರಲು 10 ಸಾವಿರ ರೂಪಾಯಿ ನೀಡಿದ್ದೇನೆ. ಇನ್ನೂ 10 ಸಾವಿರ ಕೊಡಬೇಕು, ಇಲ್ಲದಿದ್ದರೆ ನಿಮ್ಮ ಮಗನನ್ನು ಬೇರೆ ಕೇಸಿನಲ್ಲಿ ಸಿಕ್ಕಿಹಾಕಿಸುತ್ತೇವೆ ಎಂದು ಹೆದರಿಸುತ್ತಿದ್ದಾರೆ. ಹೀಗಾಗಿ ನಾವು ಮಾನವ ಹಕ್ಕುಗಳ ಆಯೋಗ ಮತ್ತು ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದೇವೆ ಎಂದು ಹೇಳಿದ್ದಾರೆ.

ಆದರೆ ಈ ಆರೋಪವನ್ನು ಕೆ ಜಿ ಹಳ್ಳಿ ಪೊಲೀಸರು ನಿರಾಕರಿಸಿದ್ದಾರೆ. ವಿನೋದ್ ಮತ್ತು ನಂದ ಕುಮಾರ್ ಮನೆಯೊಂದರ ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದು ಈ ಸಂಬಂಧ ಎಫ್ಐಆರ್ ಕೂಡ ದಾಖಲಾಗಿದೆ ಎಂದು ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com