ಷರತ್ತು ಇಲ್ಲದೆ ಎಲ್ಲಾ ಸಾಲಮನ್ನಾ ಮಾಡುವಂತೆ ಆಗ್ರಹಿಸಿ ರೈತರ ಪ್ರತಿಭಟನೆ

ರಾಜ್ಯ ಬಜೆಟ್ ನಲ್ಲಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರ ಸಾಲಮನ್ನಾ ಘೋಷಣೆಯಿಂದ ತೃಪ್ತಿಗೊಳ್ಳದ ರೈತರು ಇಂದು ರಾಜಧಾನಿಗೆ ಲಗ್ಗೆ ಇಟ್ಟು, ಯಾವುದೇ ಷರತ್ತು ಇಲ್ಲದೆ ಎಲ್ಲಾ ರೀತಿಯ ಸಾಲಮನ್ನಾ ಮಾಡಬೇಕೆಂದು ಪ್ರತಿಭಟನೆ ನಡೆಸಿದರು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯ ಬಜೆಟ್ ನಲ್ಲಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರ ಸಾಲಮನ್ನಾ ಘೋಷಣೆಯಿಂದ ತೃಪ್ತಿಗೊಳ್ಳದ ರೈತರು ಇಂದು ರಾಜಧಾನಿಗೆ ಲಗ್ಗೆ ಇಟ್ಟು, ಯಾವುದೇ ಷರತ್ತು ಇಲ್ಲದೆ ಎಲ್ಲಾ ರೀತಿಯ ಸಾಲಮನ್ನಾ ಮಾಡಬೇಕೆಂದು  ಪ್ರತಿಭಟನೆ ನಡೆಸಿದರು.

 ರಾಜ್ಯ ರೈತ ಸಂಘದ ನೇತೃತ್ವದಲ್ಲಿ  ಆನಂದ್ ರಾವ್ ವೃತ್ತದಿಂದ  ಸ್ವಾತಂತ್ರ್ಯ ಉದ್ಯಾನದವರೆಗೂ  ಪ್ರತಿಭಟನಾ ಮೆರೆವಣಿಗೆ ನಡೆಸಿ, ಯಾವುದೇ ಷರತ್ತು ಇಲ್ಲದೆ ರೈತರ ಎಲ್ಲಾ ರೀತಿಯ ಸಾಲ ಮನ್ನಾ ಮಾಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

34 ಸಾವಿರ ಕೋಟಿ ರೂಪಾಯಿ ಸಾಲ ಮನ್ನಾದೊಂದಿಗೆ ಕೆಲ ಷರತ್ತುಗಳನ್ನು ವಿಧಿಸಿರುವುದರಿಂದ ಕೆಲ ರೈತರಿಗಷ್ಟೇ ಪ್ರಯೋಜನವಾಗಲಿದ್ದು, ಅನೇಕ ಜನರಿಗೆ ಈ ಸೌಲಭ್ಯ ದೊರಕದಂತಾಗಿದೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.

 ಜೆಡಿಎಸ್ ಚುನಾವಣಾ ಪ್ರಣಾಳಿಕೆಯಲ್ಲಿ 54 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ. ಅಧಿಕಾರಕ್ಕೆ ಬಂದ ನಂತರ  ಷರತ್ತಿನೊಂದಿಗೆ ಕೇವಲ 34 ಸಾವಿರ ಕೋಟಿ ರೂಪಾಯಿ ಸಾಲ ಮನ್ನ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಎಲ್ಲಾ ರೀತಿಯ ಸಾಲಮನ್ನಾ ಮಾಡಬೇಕೆಂಬುದು ತಮ್ಮ ಬೇಡಿಕೆಯಾಗಿದೆ ಎಂದರು.

 ಸಾಲಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಉತ್ತರ ಕರ್ನಾಟಕದ ಹಾವೇರಿಯಲ್ಲಿ  ಜುಲೈ 21 ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಕೋಡಿಹಳ್ಳಿ  ಚಂದ್ರಶೇಖರ್ ಹೇಳಿದರು.  ನಂತರ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿ ಬಿಡುಗಡೆಗೊಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com