

ಮಂಗಳೂರು/ಉಡುಪಿ/ಮಡಿಕೇರಿ: ಕಳೆದ ಮೂರ್ನಾಲ್ಕು ದಿನಗಳಿಂದ ಕರಾವಳಿ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಸತತವಾಗಿ ಸುರಿಯುತ್ತಿದ್ದ ಮಳೆ ಕಡಿಮೆಯಾಗಿದ್ದು ಜನರು ಸಮಾಧಾನದ ನಿಟ್ಟುಸಿರು ಬಿಡುವಂತಾಗಿದೆ. ನಿನ್ನೆ ಬೆಳಗಿನ ಜಾವ ಎಡೆಬಿಡದೆ ಮಳೆ ಸುರಿಯುತ್ತಿದ್ದರೂ ಕೂಡ ಮಧ್ಯಾಹ್ನದ ನಂತರ ಕಡಿಮೆಯಾಗತೊಡಗಿತು. ಕೊಡಗು ಜಿಲ್ಲೆಯಲ್ಲಿ ಮಾತ್ರ ಮಳೆ ಇನ್ನೂ ಕಡಿಮೆಯಾಗಿಲ್ಲ. ರಸ್ತೆ ಸಂಪರ್ಕ ಕಡಿತವಾಗಿದ್ದು ಸಾಮಾನ್ಯ ಜನಜೀವನ ಅಸ್ತವ್ಯಸ್ತವಾಗಿದೆ.
ಉಡುಪಿ ಜಿಲ್ಲೆಯ ಮೂಲ್ಕಿ, ಅಡಿಕಾರಿಬೆಟ್ಟು, ಸೂರಿಂಜೆ, ಕಟೀಲು ಮತ್ತು ಮಂಗಳೂರು ಸುತ್ತಮುತ್ತ ಮಳೆನೀರಿನ ಮಟ್ಟ ಕಡಿಮೆಯಾಗುತ್ತಿದೆ. ಈ ಪ್ರದೇಶಗಳಿಂದ ಗಂಜಿ ಕೇಂದ್ರಗಳಿಗೆ ಸ್ಥಳಾಂತರಗೊಂಡಿದ್ದ ಸುಮಾರು 35 ಕುಟುಂಬದವರು ಮತ್ತೆ ವಾಪಸ್ಸಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಹೆಚ್ಚುವರಿ ಆಯುಕ್ತ ಕುಮಾರ ನಿನ್ನೆ 10ಕ್ಕೂ ಹೆಚ್ಚು ಮಳೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ. ಜಿಲ್ಲೆಯಾದ್ಯಂತ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುತ್ತಿದೆ. ಆದರೆ ಮಳೆ ಮತ್ತೆ ಮರುಕಳಿಸುವ ಸಾಧ್ಯತೆಯಿರುವುದರಿಂದ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಅಧಿಕಾರಿಗಳು ತೀವ್ರ ಮುನ್ನೆಚ್ಚರಿಕೆ ನೀಡಿದ್ದಾರೆ. ಗಂಜಿ ಕೇಂದ್ರಗಳು ಇನ್ನೂ ತೆರೆದಿವೆ.
ನಿನ್ನೆ ಬೆಳಗ್ಗೆ ಬಂಟ್ವಾಳ-ಮಂಗಳೂರು ಹೆದ್ದಾರಿಯಲ್ಲಿ ಸಂಚಾರಕ್ಕೆ ವ್ಯತ್ಯಯ ಉಂಟಾಗಿತ್ತು. ಪುತ್ತೂರು ತಾಲ್ಲೂಕಿನ ಮಿತ್ತೂರಿನಲ್ಲಿ ಭಾರೀ ಮಳೆ ನೆಲಸಮಗೊಂಡಿತ್ತು. ಕಾರಿನಲ್ಲಿ ಹೋಗುತ್ತಿದ್ದಾಗ ಮರದ ಕೊಂಬೆ ಬಿದ್ದು ನಾಲ್ವರು ಅಲ್ಪಸ್ವಲ್ಪ ಗಾಯಗಳಿಂದ ಭಾರೀ ಅನಾಹುತ ತಪ್ಪಿಸಿಕೊಂಡಿದ್ದಾರೆ.
ಜಾರ್ಖಂಡ್ ಗೆ ತೆರಳುತ್ತಿದ್ದ ಸಂಸದ ನಳೀನ್ ಕುಮಾರ್ ಕಟೀಲ್ ಅರ್ಧದಲ್ಲಿಯೇ ತಮ್ಮ ಪ್ರಯಾಣವನ್ನು ಮೊಟಕುಗೊಳಿಸಿ ಮಂಗಳೂರಿಗೆ ಹಿಂತಿರುಗಿದ್ದಾರೆ. ಅವರು ಅನೇಕ ಮಳೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಹಾರ ಕಾರ್ಯಗಳನ್ನು ಶೀಘ್ರವೇ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ 50ಕ್ಕೂ ಹೆಚ್ಚು ಕುಟುಂಬಿಕರು ಉಳಿಯರಗೋಳಿ, ಪಂಗಲ, ಮಲ್ಲಾರ್ ಮತ್ತು ಇತರ ಕಾಪು ಮೊದಲಾದ ಪ್ರದೇಶಗಳ ಪ್ರವಾಹ ಪೀಡಿತ ಪ್ರದೇಶಗಳಿಂದ ಬೇರೆಡೆಗೆ ಹೋಗಿದ್ದವರು ನಿನ್ನೆ ತಮ್ಮ ಮನೆಗಳಿಗೆ ವಾಪಸ್ಸಾಗಿದ್ದಾರೆ. ವಡ್ಡರ್ಸೆ,ಬನ್ನಾಡಿ, ಗಿಳಿಯಾರ್ ಮತ್ತು ಸಾಲಿಗ್ರಾಮಗಳಲ್ಲಿ ನೂರಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿನ ಭತ್ತದ ಬೆಳೆಗೆ ಹಾನಿಯಾಗಿದೆ.
ಕೊಡಗಿನಲ್ಲಿ ಮುಂದುವರಿದ ಮಳೆ: ಕಳೆದೆರಡು ದಿನಗಳಿಂದ ಕೊಡಗು ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ಮುಂದುವರಿದಿದೆ. ಮೊನ್ನೆ ಬೆಳಗ್ಗೆ 8 ಗಂಟೆಯಿಂದ ನಿನ್ನೆ ಬೆಳಗ್ಗೆ 8 ಗಂಟೆಯವರೆಗೆ 73.7 ಮಿುಲಿ ಮೀಟರ್ ಮಳೆ ಜಿಲ್ಲೆಯಲ್ಲಿ ಒಂದೇ ದಿನ ಸುರಿದಿದೆ.