

ಚಿತ್ರದುರ್ಗ: ನ್ಯಾಯಾಲಯದಲ್ಲಿ ಒಂದು ಪ್ರಕರಣ ದಾಖಲಾದರೆ ಅದು ವಿಚಾರಣೆ ನಡೆಸಿ ತೀರ್ಪು ನೀಡುವ ಹೊತ್ತಿಗೆ ವರ್ಷಗಟ್ಟಲೆ ಆಗುವ ಪ್ರಕರಣಗಳೇ ನಮ್ಮಲ್ಲಿ ಅಧಿಕ.ಆದರೆ ಚಿತ್ರದುರ್ಗ ಜಿಲ್ಲಾ ನ್ಯಾಯಾಧೀಶ ಬಿ ಎಸ್ ವಸ್ತ್ರಮಠ ಇದಕ್ಕೆ ಅಪವಾದ. ಕಳೆದ ವಾರ ಅವರು ಕೇವಲ 11 ದಿನಗಳಲ್ಲಿಯೇ ತೀರ್ಪು ನೀಡಿ ಸುದ್ದಿಯಾಗಿದ್ದರು. ಇದೀಗ ಮತ್ತೆ ಅಂತಹದ್ದೇ ಮತ್ತೊಂದು ಪ್ರಕರಣದಲ್ಲಿ ಕೇವಲ 13 ದಿನಗಳಲ್ಲಿ ತೀರ್ಪು ನೀಡಿ ಸುದ್ದಿಯಾಗಿದ್ದಾರೆ.
ತನ್ನ ಪತ್ನಿಯನ್ನು ಕೊಂದ ಪತಿಗೆ ಕೇವಲ 13 ದಿನಗಳಲ್ಲಿಯೇ ಜೀವಾವಧಿ ಶಿಕ್ಷೆಯನ್ನು ನ್ಯಾಯಾಧೀಶ ಬಿ ಎಸ್ ವಸ್ತ್ರಮಠ ವಿಧಿಸಿದ್ದಾರೆ. ಕಳೆದ ಜೂನ್ 27ರಂದು ಪತ್ನಿ ಸಾಕಮ್ಮಳ ಮೇಲೆ ಶಂಕೆಯಿಂದ ಪತಿ 28 ವರ್ಷದ ಶ್ರೀಧರ್ ಹೊಡೆದು ಸಾಯಿಸಿದ್ದ. ದಂಪತಿಯ ಮೂರೂವರೆ ವರ್ಷದ ಮಗ ನೀಡಿದ ಹೇಳಿಕೆ ಆಧಾರದ ಮೇಲೆ ಪತಿಗೆ ನ್ಯಾಯಾಧೀಶರು ಜೀವಾವಧಿ ಶಿಕ್ಷೆ ನೀಡಿದ್ದಾರೆ.
ಪ್ರಕರಣದ ವಿಚಾರಣೆ ನಡೆಸಿ ತ್ವರಿತ ನ್ಯಾಯ ವಿಲೇವಾರಿ ನೀಡುವುದಕ್ಕೆ ಇಡೀ ಕರ್ನಾಟಕದಲ್ಲಿ ಹೆಸರಾಗಿರುವ ನ್ಯಾಯಾಧೀಶ ವಸ್ತ್ರಮಠ ಮೊನ್ನೆ ಜುಲೈ 7ರಂದು 75 ವರ್ಷದ ವಯೋವೃದ್ಧ ತನ್ನ 65 ವರ್ಷದ ವೃದ್ಧೆ ಪತ್ನಿಯನ್ನು ಹೊಡೆದು ಸಾಯಿಸಿದ್ದ ಪ್ರಕರಣ ವಿಚಾರಣೆ ನಡೆಸಿ ಕೇವಲ 11 ದಿನಗಳಲ್ಲಿ ವೃದ್ಧ ಪತಿಗೆ ಜೀವಾವಧಿ ಶಿಕ್ಷೆ ನೀಡಿದ್ದರು. ಅದು ಸುದ್ದಿಯಾಗಿತ್ತು.
ಕಳೆದ ವರ್ಷ ಚಿತ್ರದುರ್ಗ ಜಿಲ್ಲೆಯ ಮೊಣಕಾಲ್ಮೂರಿನಲ್ಲಿ ಅಪಘಾತವೊಂದರಲ್ಲಿ ಮೃತಪಟ್ಟಿದ್ದ 14 ಮಂದಿಯ ಕುಟುಂಬದವರಿಗೆ 1.14 ಕೋಟಿ ರೂಪಾಯಿ ಪರಿಹಾರ ನೀಡಿ ಕೇವಲ 18 ದಿನಗಳಲ್ಲಿ ತೀರ್ಪು ನೀಡಿದ್ದರು. ಮೋಟಾರು ವಾಹನ ಅಪಘಾತ ಕೇಸಿನಲ್ಲಿ ದೇಶದಲ್ಲಿಯೇ ಇದು ಅತ್ಯಂತ ತ್ವರಿತವಾಗಿ ನಡೆದ ವಿಚಾರಣೆ ಎಂದು ಹೆಸರಾಗಿತ್ತು.
ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಅವರು, ನ್ಯಾಯಾಲಯದಿಂದ ತ್ವರಿತ ನ್ಯಾಯ ವಿಲೇವಾರಿ ಇಂದಿನ ದಿನಗಳಲ್ಲಿ ಅತಿ ಅಗತ್ಯ. ಕ್ರಿಮಿನಲ್ ನ್ಯಾಯ ವಿಲೇವಾರಿಯಲ್ಲಿ ಇದು ಅತ್ಯಂತ ಮುಖ್ಯವಾಗಿದ್ದು ಇದರಿಂದ ಸಾಮಾಜಿಕ ಸಾಮರಸ್ಯವನ್ನು ಕಾಪಾಡಬಹುದು ಎಂದರು.
ತ್ವರಿತ ನ್ಯಾಯ ವಿಲೇವಾರಿ ಮಾತ್ರವಲ್ಲದೆ 54 ವರ್ಷದ ನ್ಯಾಯಾಧೀಶ ವಸ್ತ್ರಮಠ, ಸಾಮಾಜಿಕ ಕಾರ್ಯಗಳಿಗೆ ಕೂಡ ಹೆಸರಾಗಿದ್ದಾರೆ. ಪರಿಸರ ಸಂರಕ್ಷಣೆ ಮತ್ತು ವಿದ್ಯಾರ್ಥಿಗಳ ಅಭಿವೃದ್ಧಿ ಬಗ್ಗೆ ಕೂಡ ಕಾಳಜಿ ವಹಿಸಿದ್ದಾರೆ. ಕೋಲಾರದಲ್ಲಿದ್ದಾಗ ಮಹಿಳೆಯೊಬ್ಬರಿಗೆ ಲೈಂಗಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದ ಮೂವರು ಆರೋಪಿಗಳಿಗೆ ಶಿಕ್ಷೆ ವಿಧಿಸಿದ್ದು ತಮ್ಮ ಇದುವರೆಗಿನ ವೃತ್ತಿ ಬದುಕಿನಲ್ಲಿ ಅತ್ಯಂತ ಸ್ಮರಣೀಯ ಎನ್ನುತ್ತಾರೆ ವಸ್ತ್ರಮಠ.