ಶಿರೂರು ಶ್ರೀಗಳ ಅನುಮಾನಾಸ್ಪದ ಸಾವು; ಅಡುಗೆ ಮನೆ ವಸ್ತುಗಳು, ಆಹಾರ ಪೊಲೀಸರ ವಶಕ್ಕೆ

ಉಡುಪಿ ಅಷ್ಟಮಠಗಳಲ್ಲಿ ಒಂದಾಗಿರುವ ಶಿರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮಿಗಳ ಹಠಾತ್ ನಿಧನ ...
ಶಿರೂರು ಲಕ್ಷ್ಮೀವರ ತೀರ್ಥ ಸ್ವಾಮೀಜಿ(ಸಂಗ್ರಹ ಚಿತ್ರ)
ಶಿರೂರು ಲಕ್ಷ್ಮೀವರ ತೀರ್ಥ ಸ್ವಾಮೀಜಿ(ಸಂಗ್ರಹ ಚಿತ್ರ)

ಉಡುಪಿ: ಉಡುಪಿ ಅಷ್ಟಮಠಗಳಲ್ಲಿ ಒಂದಾಗಿರುವ ಶಿರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮಿಗಳ ಹಠಾತ್ ನಿಧನ ಹಿನ್ನಲೆಯಲ್ಲಿ ಮಠದ ಅಡುಗೆ ಮನೆಯಲ್ಲಿ ಆಹಾರ ತಯಾರಿಸಲು ಬಳಸಿದ ಪದಾರ್ಥಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಅಡುಗೆ ಮನೆಯ ಸಾಧನಗಳು ಮತ್ತು ಶ್ರೀಗಳು ಸೇವಿಸಿದ ಆಹಾರವನ್ನು ಅವರ ಸಾವಿನ ನಂತರ ಎದ್ದಿರುವ ಅನುಮಾನಗಳ ಹಿನ್ನಲೆಯಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಶಿರೂರು ಗ್ರಾಮ ಮತ್ತು ಮಠದ ಸುತ್ತಮುತ್ತ ಅಳವಡಿಸಿರುವ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿರುವ ದೃಶ್ಯಾವಳಿಗಳನ್ನು ಕೂಡ ಪೊಲೀಸರು ಪರಿಶೀಲನೆ ನಡೆಸಲಿದ್ದಾರೆ.
 
ಪಶ್ಚಿಮ ವಲಯದ ಐಜಿಪಿ ಅರುಣ್ ಚಕ್ರವರ್ತಿ ಶಿರೂರು ಮೂಲ ಮಠಕ್ಕೆ ಭೇಟಿ ನೀಡಿ ತನಿಖೆಯ ಉಸ್ತುವಾರಿ ವಹಿಸಿದ್ದಾರೆ. ಉಡುಪಿ ಪೊಲೀಸ್ ವರಿಷ್ಠ ಲಕ್ಷ್ಮಣ್ ನಿಂಬರ್ಗಿ ಕೂಡ ಅವರಿಗೆ ತನಿಖೆಯಲ್ಲಿ ಸಾಥ್ ನೀಡಲಿದ್ದಾರೆ.

ಜಿಲ್ಲಾ ಪೊಲೀಸರು ಶ್ರೀಗಳ ಸಾವಿನ ನಂತರ ಜನರು ಮಠಕ್ಕೆ ಪ್ರವೇಶಿಸುವುದಕ್ಕೆ ತಡೆ ನೀಡಿದ್ದಾರೆ. ಹಿರಿಯಡ್ಕ ಸಮೀಪ ಶಿರೂರು ಮೂಲಮಠದಲ್ಲಿ ಕೂಡ ಇದೇ ರೀತಿಯ ನಿರ್ಬಂಧ ಹೇರಲಾಗಿದೆ. ಈ ನಿರ್ಬಂಧ ಪೊಲೀಸ್ ತನಿಖೆ ಮುಗಿಯುವವರೆಗೆ ಮುಂದುವರಿಯಲಿದೆ. ಮಠದ ಸುತ್ತಮುತ್ತಲಿನ ಚಟುವಟಿಕೆಗಳ ಮೇಲೆ ಜಿಲ್ಲಾ ಪೊಲೀಸರು ನಿಗಾ ಇರಿಸಿದ್ದಾರೆ.

ಶಿರೂರು ಮಠಕ್ಕೆ ಸೂಕ್ತ ಉತ್ತರಾಧಿಕಾರಿ ನೇಮಕಕ್ಕೆ ನಾವು ಹುಡುಕಾಟ ನಡೆಸುತ್ತಿದ್ದೇವೆ ಎಂದು ಸೋದೆ ಮಠದ ವಿಶ್ವವಲಭ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ. ಹಿರಿಯ ಯತಿಗಳ ಮಾರ್ಗದರ್ಶನದಲ್ಲಿ ಸೂಕ್ತ ಉತ್ತರಾಧಿಕಾರಿ ನೇಮಕ ಪ್ರಕ್ರಿಯೆ ಆರಂಭವಾಗಲಿದೆ ಎಂದರು. ಶಿರೂರು ಮಠದ ಆಸ್ತಿಗಳು ಮತ್ತು ದಾಖಲೆಗಳು ದುರುಪಯೋಗವಾಗುವ ಸಾಧ್ಯತೆಯಿರುವುದರಿಂದ ಜಿಲ್ಲಾಡಳಿತ ಅವುಗಳನ್ನು ವಶಪಡಿಸಿಕೊಳ್ಳಬೇಕೆಂದು ಸಾಮಾಜಿಕ ಕಾರ್ಯಕರ್ತ ಅನ್ಸರ್ ಅಹ್ಮದ್ ಒತ್ತಾಯಿಸಿದ್ದಾರೆ.

ಸಚಿವ ಯು ಟಿ ಖಾದರ್ ಪ್ರತಿಕ್ರಿಯಿಸಿ, ಉಡುಪಿ ಜಿಲ್ಲಾಧಿಕಾರಿಗಳು ಶಿರೂರು ಶ್ರೀಗಳ ಸಾವಿನ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆ, ಬೇಡವೇ ಎಂದು ತೀರ್ಮಾನಿಸಬಹುದು ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com