ಫೀಲ್ಡ್ ಮಾರ್ಷಲ್ ಕೆ.ಎಂ. ಕಾರಿಯಪ್ಪ ಕಲಿತ ಕಾಲೇಜಿಗೆ ಇದೆಂಥಾ ದುಸ್ಥಿತಿ?
ಕತ್ತಲೆ ಕೋಣೆಗಳು, ಸೋರುವ ಛಾವಣಿಗಳು, ಪಾಚಿ ಕಟ್ಟಿರುವ ಗೋಡೆಗಳು, ಜಾರುವ ಮಹಡಿ ಮೆಟ್ಟಿಲುಗಳು, ಇಲ್ಲದ ಶೌಚಾಲಯ ಸೌಕರ್ಯ - ಇದು ಮಡಿಕೇರಿಯ ಸರ್ಕಾರಿ ಜೂನಿಯರ್ ಕಾಲೇಜಿನ ಪ್ರಸ್ತುತ ಸ್ಥಿತಿ.
ಫೀಲ್ಡ್ ಮಾರ್ಷಲ್ ಕೆ.ಎಂ. ಕಾರಿಯಪ್ಪ ಕಲಿತ ಕಾಲೇಜಿಗೆ ಇದೆಂಥಾ ದುಸ್ಥಿತಿ?
ಮಡಿಕೇರಿ: ಕತ್ತಲೆ ಕೋಣೆಗಳು, ಸೋರುವ ಛಾವಣಿಗಳು, ಪಾಚಿ ಕಟ್ಟಿರುವ ಗೋಡೆಗಳು, ಜಾರುವ ಮಹಡಿ ಮೆಟ್ಟಿಲುಗಳು, ಇಲ್ಲದ ಶೌಚಾಲಯ ಸೌಕರ್ಯ - ಇದು ಮಡಿಕೇರಿಯ ಸರ್ಕಾರಿ ಜೂನಿಯರ್ ಕಾಲೇಜಿನ ಪ್ರಸ್ತುತ ಸ್ಥಿತಿ. ಪ್ರಖ್ಯಾತ ಫೀಲ್ಡ್ ಮಾರ್ಷಲ್ ಕೆ ಎಮ್ . ಕಾರಿಯಪ್ಪ ಓದಿದ್ದ ಕಾಲೇಜು ಇಂದು ಈ ದುಸ್ಥಿತಿಯಲ್ಲಿದೆ.
ಜಿಲ್ಲೆಯ ಪ್ರಖ್ಯಾತ ಕಾಲೇಜುಗಳಲ್ಲಿ ಒಂದಾದ ಈ ಕಾಲೇಜು ಆವರಣಗಳಲ್ಲಿ ಜಾನುವಾರುಗಳು ಅಡ್ಡಾದಿಡ್ಡಿಯಾಗಿ ತಿರುಗುತ್ತವೆ."ನಾವು ಸೋರುವ ಛಾವಣಿಯಡಿಯಲ್ಲಿ ಒದ್ದೆಯಾದ ನೆಲ, ಬೆಂಚ್ ಮೇಲೆ ಕುಳಿತಿರಬೇಕಾಗಿದೆ.ಕಾಲೇಜು ಆವರಣದಲ್ಲಿ ಎಲ್ಲೆಲ್ಲೂ ಅನೇಕ ಹಸುಗಳು ಅಲೆದಾಡುತ್ತಿವೆ ಮತ್ತು ನಮ್ಮ ಪಾಠದ ಕೋಣೆಗಳು ಸಹ ಅವುಗಳ ಸಗಣಿ ವಾಸನೆಗಳಿಂದ ಹೊರತಾಗಿಲ್ಲ" ದ್ವಿತೀಯ ಪಿಯು ವಾಣಿಜ್ಯ ಶಾಸ್ತ್ರ ವಿಭಾಗದ ವಿದ್ಯಾರ್ಥಿ ಜಯಂತ್ ಹೇಳಿದ್ದಾರೆ.
ಕಾಲೇಜಿಗೆ ವಿಸ್ತಾರವಾದ ಕ್ಯಾಂಪಸ್ ವ್ಯವಸ್ಥೆ ಇದೆ, ಆದರೂ ಇದು ಉತ್ತಮ ಮೂಲಸೌಕರ್ಯವನ್ನು ಹೊಂದಿಲ್ಲ. ಕಾಲೇಜು ಕಟ್ಟಡದ ಗೋಡೆಗಳಲ್ಲಿ ಪಾಚಿ ಬೆಳೆದಿದೆ.ಇದು ಸದಾ ಕಾಲ ಮಳೆ ನೀರಿನಲ್ಲಿ ತೊಯ್ದು ಹೋಗುತ್ತದೆ.ಮಳೆಯಾದಲ್ಲಿ ಛಾವಣಿಗಳು ಸೋರುವುದು. ನೆಲ ಸದಾ ಕಾಲ ನೀರಿನಿಂದ ಆವೃತವಾಗಿರಲಿದೆ. ಪದವಿ ಪೂರ್ವ ಶಿಕ್ಷಣ ಪಡೆಯುವ ಸಲುವಾಗಿ ಇಲ್ಲಿ ಸುಮಾರು 600 ವಿದ್ಯಾರ್ಥಿಗಳು ಸೇರ್ಪಡೆಯಾಗಿದ್ದು ಪಿಯು ಕಾಲೇಜು ಈ ನೂತನ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಕ್ಯಾಂಪಸ್ ನಲ್ಲಿರುವ ಎಲ್ಲಾ ಕಟ್ಟಡಗಳಲ್ಲಿ ಇದು ಅತಿ ಕೆಟ್ಟ ಸ್ಥಿತಿಯಲ್ಲಿದ್ದು ಇದು ಪ್ರಾಣಿಗಳಿಗೆ ಸಹ ವಾಸಯೋಗ್ಯವಲ್ಲ ಎನ್ನಲಾಗುತ್ತಿದೆ.
ಇನ್ನು ಇಲ್ಲಿ ಒಟ್ಟಾರೆ 310 ಕ್ಕಿಂತಲೂ ಹೆಚ್ಚಿನ ವಿದ್ಯಾರ್ಥಿಗಳು ವಿವಿಧ ಪದವಿ ವ್ಯಾಸಂಗ ಮಾಡುತ್ತಿದ್ದು ಪದವಿ ಕಾಲೇಜು ಕ್ಯಾಂಪಸ್ ನಲ್ಲಿರುವ ಹಳೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತದೆ.ಅಲ್ಲಿ ಸಹ ಸರಿಯಾದ ವಿದ್ಯುತ್ ಸೌಲಭ್ಯವಿಲ್ಲ.ಸರಿಯಾದ ಛಾವಣಿಗಳನ್ನು ಹೊಂದಿಲ್ಲ. ಪದವಿ ಕಾಲೇಜು ಸಿಬ್ಬಂದಿ ಕೊಠಡಿಯು ಮೇಲ್ಛಾವಣಿಗಳನ್ನು ನೀಲಿ ಟಾರ್ಫ್ ಗಳಿಂದ ಪ್ಲಾಸ್ಟರ್ ಮಾಡಲಾಗಿದೆ. ಇನ್ನು ಪ್ರಾಂಶುಪಾಲರ ಕಛೇರಿ ಸಹ ಸೋರುವ ಛಾವಣಿ, ಜಾರುವ ನೆಲವನ್ನೇ ಹೊಂದಿದೆ.
ಪದವಿಪೂರ್ವ ಹಾಗೂ ಪದವಿ ವ್ಯಾಸಂಗ ನಡೆಸುವ ಒಟ್ಟು 900 ಕ್ಕೆ ಮೀರಿ ವಿದ್ಯಾರ್ಥಿಗಳಿರುವ ಈ ಕಾಲೇಜಿನಲ್ಲಿ ಒಳ್ಳೆಯ ಶೌಚಾಲಯ ವ್ಯವಸ್ಥೆ ಇಲ್ಲ.
ಖ್ಯಾತನಾಮ ನಾಯಕರು, ಸೇನಾ ಪ್ರಮುಖರು ಕಲಿತ ಈ ಪ್ರಸಿದ್ದ ಕಾಲೇಜು ಕಾಲ ಸರಿದಂತೆ ಕಳೆಗುಂದುತ್ತಾ ಸಾಗಿದೆ. ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಇತ್ತ ಗಮನಹರಿಸಿ ಅಗತ್ಯ ಕ್ರಮ ಜರುಗಿಸದಿದ್ದರೆ ಭವಿಷ್ಯದಲ್ಲಿ ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗಕ್ಕೆ ಬರುವುದು ಅನುಮಾನವೆನ್ನಲಾಗುತ್ತಿದೆ.