
ಬೆಂಗಳೂರು: ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶಾಲೆ ಆರಂಭವಾಗಿ ಎರಡು ತಿಂಗಳು ಕಳೆದಿದೆ. ಆದರೆ ಉಚಿತ ಸೈಕಲ್ ಫಲಾನುಭವಿ ವಿದ್ಯಾರ್ಥಿಗಳಿಗೆ ಇನ್ನೂ ಸೈಕಲ್ ಸಿಕ್ಕಿಲ್ಲ. ದಸರಾ ರಜೆಯ ನಂತರವಷ್ಟೇ ಸೈಕಲ್ ತಲುಪಲಿದೆ ಎಂದು ಸರ್ಕಾರದಿಂದ ಅಧಿಕೃತ ಮಾಹಿತಿ ಸಿಕ್ಕಿದೆ.
ಸಾರ್ವಜನಿಕ ನಿರ್ದೇಶನ ಇಲಾಖೆಯಿಂದ ಸಿಕ್ಕಿರುವ ಮಾಹಿತಿ ಪ್ರಕಾರ ಸೈಕಲ್ ವಿತರಣೆಗೆ ನೀಡಲಾಗಿರುವ ಟೆಂಡರ್ ಗೆ ಸಂಬಂಧಿಸಿದ ದಾಖಲೆ ಮುಖ್ಯಮಂತ್ರಿಯಿಂದ ಅನುಮೋದನೆಯಾಗಿ ಬರಬೇಕಿದೆ.
ಇಲಾಖೆಯ ಅಧಿಕಾರಿಗಳು ಹೇಳುವ ಪ್ರಕಾರ, ಕಳೆದ ವಿಧಾನಸಭೆ ಚುನಾವಣೆ ಮತ್ತು ವಿಧಾನ ಪರಿಷತ್ ಚುನಾವಣೆ ಹಿನ್ನಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರಿಂದ ಟೆಂಡರ್ ಅಧಿಸೂಚನೆಗೆ ಅನುಮೋದನೆ ಪಡೆಯಲು ವಿಳಂಬವಾಗಿದೆ ಎನ್ನುತ್ತಾರೆ. ಈ ಬಗ್ಗೆ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಕೇಳಿದರೆ, ಚುನಾವಣಾ ನೀತಿ ಸಂಹಿತೆಯಿಂದಾಗಿ ಬಿಡ್ ಗಳು ಆರಂಭವಾಗಿರಲಿಲ್ಲ. ನಂತರ ಹೊಸ ಸರ್ಕಾರ ರಚನೆಯಾದ ನಂತರ ಟೆಂಡರ್ ಸಮಾಲೋಚನೆ ಹಂತದಲ್ಲಿದೆ. ಇದೀಗ ದಾಖಲೆಗಳು ಮುಖ್ಯಮಂತ್ರಿಗಳ ಒಪ್ಪಿಗೆಗಾಗಿ ಕಾದು ಕುಳಿತಿದೆ ಎನ್ನುತ್ತಾರೆ.ಈ ವರ್ಷ ಶಿಕ್ಷಣ ಇಲಾಖೆ ಟೆಂಡರ್ ವಹಿಸಲು ನಾಲ್ಕು ಕಂಪೆನಿಗಳನ್ನು ಅಂತಿಮಗೊಳಿಸಿದೆ.
ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 8ನೇ ತರಗತಿ ಮಕ್ಕಳಿಗೆ ಉಚಿತ ಸೈಕಲನ್ನು ವಿತರಿಸಲು ಒಟ್ಟು 185 ಕೋಟಿ ರೂಪಾಯಿ ವೆಚ್ಚವಾಗುತ್ತಿದೆ. ನಗರ ಪ್ರದೇಶಗಳಲ್ಲಿ ಮತ್ತು ಸರ್ಕಾರಿ ಹಾಸ್ಟೆಲ್ ಗಳಲ್ಲಿ ನೆಲೆಸಿರುವ ಮಕ್ಕಳಿಗೆ ಈ ಸೌಲಭ್ಯಗಳಿಲ್ಲ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಒಟ್ಟು 5,14,585 ಸೈಕಲ್ ಗಳು ಬಾಲಕಿಯರಿಗೆ ಮತ್ತು 2,61,692 ಸೈಕಲ್ ಗಳು ಬಾಲಕರಿಗೆ ಅವಶ್ಯವಾಗಿದೆ.
ಅಕ್ಟೋಬರ್ ವೇಳೆಗೆ ಸೈಕಲ್ ಶಾಲೆಗಳಿಗೆ ತಲುಪಲಿದೆ. ಮುಖ್ಯಮಂತ್ರಿಗಳಿಂದ ಒಪ್ಪಿಗೆ ಸಿಕ್ಕಿದ ಕೂಡಲೇ ಕಂಪೆನಿಗೆ ಟೆಂಡರ್ ನೀಡಿ ಅದು ಉತ್ಪಾದನೆ ಆರಂಭಿಸಿದ ನಂತರ ಶಾಲೆಗಳಿಗೆ ನೇರವಾಗಿ ವಿತರಿಸಲಾಗುವುದು ಎನ್ನುತ್ತಾರೆ ಅಧಿಕಾರಿಗಳು.
ಈ ವರ್ಷ ಸೈಕಲ್ ಗಳ ದರ ಕೂಡ ಹೆಚ್ಚಾಗಿದೆ. ಕಳೆದ ವರ್ಷ ಬಾಲಕರ ಸೈಕಲ್ ಗೆ 3,300 ರೂಪಾಯಿ ಮತ್ತು ಬಾಲಕಿಯರ ಸೈಕಲ್ ಗೆ 3,500 ರೂಪಾಯಿಗಳಿದ್ದವು. ಈ ಬಾರಿ ಅದು ಕ್ರಮವಾಗಿ 3,600 ಮತ್ತು 3,900 ರೂಪಾಯಿಗಳಾಗಿದೆ. ಜಿಎಸ್ ಟಿ, ಇಂಧನ ದರ ಏರಿಕೆ, ವಸ್ತುಗಳ ಬೆಲೆ ಹೆಚ್ಚಳದಿಂದಾಗಿ ಸೈಕಲ್ ಗಳ ದರವನ್ನು ಹೆಚ್ಚಿಸುವ ಅನಿವಾರ್ಯತೆ ನಮಗೆ ಎದುರಾಗಿದೆ ಎನ್ನುತ್ತಾರೆ ಸೈಕಲ್ ತಯಾರಿಸುವ ಕಂಪೆನಿಗಳು.
Advertisement