ಬೆಂಗಳೂರು: ಸತೀಶ್ ಜಾರಕೀಹೊಳಿ, ಅಜಯ್ ಸಿಂಗ್'ಗೆ ಸಚಿವ ಸ್ಥಾನಕ್ಕೆ ಒತ್ತಾಯಿಸಿ ಬೆಂಬಲಿಗರಿಂದ ಬೃಹತ್ ಪ್ರತಿಭಟನೆ
ರಾಜ್ಯ
ಸತೀಶ್ ಜಾರಕೀಹೊಳಿ, ಅಜಯ್ ಸಿಂಗ್'ಗೆ ಸಚಿವ ಸ್ಥಾನಕ್ಕೆ ಒತ್ತಾಯಿಸಿ ಬೆಂಬಲಿಗರಿಂದ ಪ್ರತಿಭಟನೆ
ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಮೊದಲ ಕಂತಿನಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲು ಕ್ಷಣಗಣನೆ ಆರಂಭವಾಗಿದ್ದರೆ, ಮತ್ತೊಂದೆಡೆ ತಮ್ಮ ನಾಯಕರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಹಲವೆಡೆ ಬೆಂಬಲಿಸಲು ಪ್ರತಿಭಟನೆಗಳನ್ನು ನಡೆಸಲು ಆರಂಭಿಸಿದ್ದಾರೆ...
ಬೆಂಗಳೂರು: ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಮೊದಲ ಕಂತಿನಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲು ಕ್ಷಣಗಣನೆ ಆರಂಭವಾಗಿದ್ದರೆ, ಮತ್ತೊಂದೆಡೆ ತಮ್ಮ ನಾಯಕರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಹಲವೆಡೆ ಬೆಂಬಲಿಸಲು ಪ್ರತಿಭಟನೆಗಳನ್ನು ನಡೆಸಲು ಆರಂಭಿಸಿದ್ದಾರೆ.
ಸಚಿವ ಸ್ಥಾನ ಆಕಾಂಕ್ಷಿಗಳಾಗಿದ್ದ ಹಲವರು ನಾಯಕರು ಅವಕಾಶ ವಂಚಿತರಾಗಿದ್ದಾರೆ. ಆದರೆ, ಯಾರೊಬ್ಬರೂ ಬಹಿರಂಗವಾಗಿ ಅಸಮಾಧಾನವನ್ನು ಹೊರ ಹಾಕಿಲ್ಲ. ಈ ನಡುವಲ್ಲೇ ನಾಯಕರ ಬೆಂಬಲಿಗರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.
ಯಮಕನ ಮರಡಿ ಕಾಂಗ್ರೆಸ್ ಶಾಸಕರಾಗಿರುವ ಸತೀಶ್ ಜಾರಕೀಹೊಳಿ ಅವರ ನೂರಾರು ಬೆಂಬಲಿಗರು ಶಕ್ತಿಸೌಧ ವಿಧಾನಸೌಧದ ಹಿಂಭಾಗದಲ್ಲಿ ಧರಣಿ ಕುಳಿತಿದ್ದು, ಜಾರಕೀಹೊಳಿಯವರಿಗೆ ಸಚಿವ ಸ್ಥಾನ ನೀಡುವಂತೆ ಘೋಷಣೆಗಲನ್ನು ಕೂಗುತ್ತಿದ್ದಾರೆ. ಪ್ರತಿಭಟನೆ ಆರಂಭವಾಗುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರತಿಭಟನಾ ನಿರತರನ್ನು ವಶಕ್ಕೆ ಪಡೆದು ಸ್ಥಳದಿಂದ ಬಸ್ ನಲ್ಲಿ ಕರೆದೊಯ್ದಿದ್ದಾರೆಂದು ತಿಳಿದುಬಂದಿದೆ.
ಇದರಂತೆ ಜೇವರ್ಗಿ ಶಾಸಕ ಡಾ.ಅಜಯ್ ಸಿಂಗ್ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿ ಅವರ ಬೆಂಬಲಿಗರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಜೇವರ್ಗಿ ತಾಲ್ಲೂಕು ಸೊನ್ನಕ್ರಾಸ್ ಬಳಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಇಂದು ಬೆಳಿಗ್ಗೆ ಟೈರ್'ಗೆ ಬೆಂಕಿ ಹಚ್ಚಿದ ಬೆಂಬಲಿಗರು ಆಕ್ರೋಶವನ್ನು ಹೊರಹಾಕಿದ್ದಾರೆ. ಪ್ರತಿಭಟನೆ ಹಿನ್ನಲೆಯಲ್ಲಿ ಜೇವರ್ಗಿ ಮತ್ತು ವಿಜಯಪುರ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯವಸ್ತಗೊಂಡಿದೆ ಎಂದು ವರದಿಗಳು ತಿಳಿಸಿವೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ