
ಮಂಡ್ಯ: ಬೆಂಕಿ ಪೊಟ್ಟಣದಲ್ಲಿ ಆಟವಾಡುತ್ತಿದ್ದ ಬಾಲಕಿ ಪ್ರಾಣ ಕಳೆದುಕೊಂಡಿರುವ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ಪಟ್ಟಣದ ವಿ ಸಿ ಕಾಲೊನಿಯಲ್ಲಿ ನಡೆದಿದೆ.
ಕಳೆದ ಜೂನ್ 1ರಂದು ಚೆಲುವರಾಜು ಮತ್ತು ಸರ್ವಮಂಗಳ ದಂಪತಿ ಹೊರಗಡೆ ಕೆಲಸಕ್ಕೆ ಹೋಗುವಾಗ ತಮ್ಮ ಆರು ವರ್ಷದ ಮಗಳನ್ನು ಒಬ್ಬಳನ್ನೇ ಮನೆಯಲ್ಲಿ ಬಿಟ್ಟು ಹೋಗಿದ್ದರು. ಬೆಂಕಿಪೊಟ್ಟಣದಲ್ಲಿ ಆಟವಾಡುತ್ತಾ ಕಡ್ಡಿಯನ್ನು ಗೀರಿಕೊಂಡ ಬಾಲಕಿ ಬೆಂಕಿ ಹತ್ತಿ ಉರಿದು ಮೈಯೆಲ್ಲಾ ಹತ್ತಿಕೊಂಡು ತೀವ್ರವಾಗಿ ಸುಟ್ಟುಹೋಗಿದ್ದಳು. ಆಕೆಯನ್ನು ಮೈಸೂರಿನ ಕೆ ಆರ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.
ಪಾಂಡವಪುರದ ಲಾಡ್ಜೊಂದನ್ನು ಸ್ವಚ್ಛ ಮಾಡಿಕೊಡಲೆಂದು ಮಧ್ಯಾಹ್ನ 1.30ರ ಸುಮಾರಿಗೆ ದಂಪತಿಗೆ ಫೋನ್ ಬಂದಿತ್ತು. ಅದಕ್ಕಿಂತಲೂ ಮುಂಚೆ ದಂಪತಿ ತಮ್ಮಿಬ್ಬರು ಮಕ್ಕಳಿಗೆ ಊಟ ಕೊಟ್ಟು ಕೆಲಸಕ್ಕೆ ತೆರಳಿದ್ದರು. ಚಿಕ್ಕ ಮಗು ಪಕ್ಕದಲ್ಲಿದ್ದ ತನ್ನ ತಾತನ ಮನೆಗೆ ಹೋಗಿತ್ತು. ಬಾಲಕಿ ಮಾತ್ರ ಮನೆಯಲ್ಲಿಯೇ ಉಳಿದಿದ್ದಳು. ಮಗಳು ಹೊರಗೆಲ್ಲೂ ಹೋಗಬಾರದೆಂದು ಟಿವಿ ಹಾಕಿ ಕೆಲಸ ಮುಗಿಸಿಕೊಂಡು ಬರುತ್ತೇವೆಂದು ಹೇಳಿ ಮನೆಗೆ ಹೊರಗೆಯಿಂದ ಬಾಗಿಲು ಹಾಕಿ ಹೋಗಿದ್ದರು.
ಅಪರಾಹ್ನ 3.15ರ ಹೊತ್ತಿಗೆ ಬಾಲಕಿಯ ಮಾವನಿಗೆ ಮನೆಯ ಹೊರಗಿನಿಂದ ದೊಡ್ಡದಾಗಿ ಕಿರಿಚಿಕೊಳ್ಳುವ ಶಬ್ದ ಕೇಳಿಸಿತು. ಬಾಗಿಲು ತೆಗೆದು ನೋಡಿದರೆ ಮಗು ಬೆಂಕಿ ಹಿಡಿದು ನೆಲದಲ್ಲಿ ಹೊರಳಾಡುತ್ತಿತ್ತು. ನಂತರ ಬೆಂಕಿಯನ್ನು ಆರಿಸಿ ತಕ್ಷಣವೇ ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ದರು. ಬಾಲಕಿಯ ದೇಹವಿಡೀ ಬೆಂಕಿಯಿಂದ ಬೆಂದುಹೋಗಿತ್ತು.
ವೈದ್ಯರ ಸಲಹೆ ಮೇರೆಗೆ ಬಾಲಕಿಯನ್ನು ಕೆ ಆರ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೊನ್ನೆ 5ರಂದು ಮೃತಪಟ್ಟಿದ್ದಾಳೆ.
Advertisement