ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಕ್ರಮ; ಲೋಕೋಪಯೋಗಿ ಸಚಿವ ರೇವಣ್ಣ

ರಸ್ತೆ ಕಾಮಗಾರಿಯಲ್ಲಿ ಕಳಪೆ ಕಾರ್ಯ ಮಾಡುವ ಹಾಗೂ ಕಾರ್ಯಗಳಲ್ಲಿ ವಿಳಂಬ ನೀತಿ ಅನುಸರಿಸುವ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ರಾಜ್ಯ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಅವರು ಭಾನುವಾರ ಹೇಳಿದ್ದಾರೆ...
ರಾಜ್ಯ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ
ರಾಜ್ಯ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ
ಬೆಂಗಳೂರು; ರಸ್ತೆ ಕಾಮಗಾರಿಯಲ್ಲಿ ಕಳಪೆ ಕಾರ್ಯ ಮಾಡುವ ಹಾಗೂ ಕಾರ್ಯಗಳಲ್ಲಿ ವಿಳಂಬ ನೀತಿ ಅನುಸರಿಸುವ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ರಾಜ್ಯ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಅವರು ಭಾನುವಾರ ಹೇಳಿದ್ದಾರೆ. 
ಹುಬ್ಬಳ್ಳಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿರುವ ಅವರು, ರಸ್ತೆ ಗುಣಮಟ್ಟ ಹಾಗೂ ಇತರೆ ಕೆಲಸಗಳಲ್ಲಿ ಇಲಾಖೆ ಯಾವುದೇ ಕಾರಣಕ್ಕೂ ಸಂಧಾನ ಮಾಡಿಕೊಳ್ಳುವುದಿಲ್ಲ. ನೀಡಿದ ಗುಡುವಿನ ಒಳಗಾಗಿಯೇ ಎಲ್ಲಾ ಕಾರ್ಯಗಳೂ ಪೂರ್ಣಗೊಳ್ಳಬೇಕು. ಕಳಪೆ ಗುಣಮಟ್ಟದ ಕಾರ್ಯ ಹಾಗೂ ಕಾರ್ಯಗಳಲ್ಲಿ ವಿಳಂಬ ನೀತಿ ಅನುಸರಿಸುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ. 
ಮಳೆಗಾಲ ಪೂರ್ಣಗೊಳ್ಳುವವರೆಗೂ ತಮ್ಮ ತಮ್ಮ ಪ್ರಧಾನ ಕಚೇರಿಗಳಿಂದ ಯಾವುದೇ ಅಧಿಕಾರಿಗಳು ಹೊರಗೆ ಹೋಗದಂತೆ ಈಗಾಗಲೇ ಎಲ್ಲಾ ಅಧಿಕಾರಿಗಳಿಗೂ ಸೂಚನೆ ನೀಡಲಾಗಿದೆ. ಮಳೆಯಿಂದಾಗಿ ಈಗಾಗಲೇ ಹಾಳಾಗಿರುವ ರಸ್ತೆಗಳನ್ನು ತಾತ್ಕಾಲಿಕವಾಗಿ ಸರಿಪಡಿಸುವಂತೆ ಸೂಚನೆ ನೀಡಲಾಗಿದೆ. ಮಳೆಗಾಲ ಅಂತಿಮಗೊಂಡ ಬಳಿಕ ಶಾಶ್ವತ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಕೇಂದ್ರ ರಸ್ತೆ ನಿಧಿಯಲ್ಲಿ ಹುಬ್ಬಳ್ಳಿಯಲ್ಲಿ 6 ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಯೋಜನೆಗೆ ರೂ.36 ಕೋಟಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಬೇಕಿದೆ. ರೂ.97 ಕೋಟಿ ವೆಚ್ಚದ 33 ಕಿ.ಮೀ ರಸ್ತೆ ಯೋಜನೆಯನ್ನು ಲೋಕೋಪಯೋಗಿ ಇಲಾಖೆ ಕೈಗೆತ್ತಿಕೊಂಡಿದೆ. 
ಹುಬ್ಬಳ್ಳಿಯಲ್ಲಿ ನಿರ್ಮಿಸಲಾಗುತ್ತಿದ್ದ ನೂತನ ನ್ಯಾಯಾಲಯ ಕಟ್ಟಡದ ಕಾರ್ಯಗಳು ಪೂರ್ಣಗೊಂಡಿವೆ. ಉದ್ಘಾಟನಾ ದಿನಾಂಕ ಘೋಷಣೆಗಾಗಿ ಅಧಿಕಾರಿಗಳು ಕಾಯುತ್ತಿದ್ದಾರೆಂದು ಹೇಳಿದ್ದಾರೆ. 
ಬಳಿಕ ಸರ್ಕಾರದ ಕುರಿತಂತೆ ಮಾತನಾಡಿದ ಅವರು, ಮುಂದಿನ 1 ವರ್ಷದ ವರೆಗೆ ಮೈತ್ರಿ ಸರ್ಕಾರಕ್ಕೆ ಯಾವುದೇ ಅಪಾಯಗಳಿರುವುದಿಲ್ಲ. ರಾಜ್ಯದಲ್ಲಿ ಹೊಸ ಬಜೆಟ್ ಮಂಡಿಸುವ ವಿಚಾರ ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ತೀರ್ಮಾನಿಸುತ್ತಾರೆ. ರಾಜ್ಯದಲ್ಲಿ ಇನ್ನು 5 ವರ್ಷಗಳ ಕಾಲ ನಾವೇ ಅಧಿಕಾರ ನಡೆಸುತ್ತೇವೆ. ಇಲ್ಲದ ಊಹಾಪೋಹಗಳಿಗೆ ಧ್ವನಿಗೊಡಬೇಕಿಲ್ಲ ಎಂದಿದ್ದಾರೆ. 
ಉನ್ನತ ಶಿಕ್ಷಣಕ್ಕೆ ಬಸವರಾಜ್ ಹೊರಟ್ಟಿ ಅವರಿಗೆ ಸಚಿವ ಸ್ಥಾನ ಕೊಡುವಂತೆ ದೇವೇಗೌಡರು, ಕುಮಾರಸ್ವಾಮಿ ಅವರಿಗೆ ಕೇಳುತ್ತೇನೆ. ಇನ್ನು ರೈತರ ಬಗ್ಗೆ ಅವಿರತ ಹೋರಾಟದಲ್ಲಿ ಎನ್.ಹೆಚ್.ಕೋನರೆಡ್ಡಿ ಅವರನ್ನು ಮರೆಯಲಾಗದು. ಬಸವರಾಜ ಹೊರಟ್ಟಿ, ಕೋನರೆಡ್ಡಿ ಅವರಿಗೆ ಸ್ಥಾನಮಾನ ನೀಡುವಂತೆ ನಾನು ಸಹ ಮುಖ್ಯಮಂತ್ರಿ ಗಮನಕ್ಕೆ ತರುವೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com