
ಬೆಂಗಳೂರು: ಪಿಕ್ ಅವರ್ ನಲ್ಲಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ನೇರಳೆ ಮಾರ್ಗದಲ್ಲಿ ಮೊದಲ ಬಾರಿಗೆ ಆರು ಬೋಗಿಯ ನಮ್ಮ ಮೆಟ್ರೋ ರೈಲು ಸಂಚಾರಕ್ಕೆ ವೇದಿಕೆ ಸಿದ್ದಗೊಂಡಿದೆ.
ಪ್ಲಾಟ್ ಫಾರ್ಮ್ ಗಳಲ್ಲಿ ಕಿಕ್ಕಿರಿದು ತುಂಬಿದ್ದ ಜನರನ್ನು ನಿಯಂತ್ರಿಸುವ ಸಲುವಾಗಿ ಆರು ಬೋಗಿಯ ರೈಲು ಸಂಚಾರಕ್ಕೆ ವ್ಯವಸ್ಥೆ ಮಾಡಲಾಗುತ್ತಿದ್ದು, ಈ ರೈಲಿನಲ್ಲಿ 1, 950 ಪ್ರಯಾಣಿಕರು ಸಂಚರಿಸಬಹುದಾಗಿದೆ.
ಮೂರು ಬೋಗಿಯ ರೈಲಿನಲ್ಲಿ ಸಂಚರಿಸುತ್ತಿದ್ದ 975 ಜನರಿಗಿಂತಲೂ ಮೂರು ಪಟ್ಟು ಅಧಿಕ ಪ್ರಯಾಣಿಕರು ಈ ರೈಲಿನಲ್ಲಿ ಸಂಚರಿಸಬಹುದಾಗಿದೆ. ಪ್ರತಿದಿನ ಬೆಳಿಗ್ಗೆ ಮೂರು ಟ್ರಿಪ್ ಹಾಗೂ ಸಂಜೆ ಎರಡು ಟ್ರಿಪ್ ಗಳಲ್ಲಿ ಈ ರೈಲನ್ನು ಓಡಿಸುವ ಪ್ರಾಯೋಗಿಕ ಯೋಚನೆ ಹಾಕಿಕೊಳ್ಳಲಾಗಿದೆ.
ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿದ ಬಿಎಂಆರ್ ಸಿಎಲ್ ಕಾರ್ಯಾಚರಣೆ ಹಾಗೂ ಮೇಲ್ವಿಚಾರಣೆ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಎ.ಎಸ್. ಶಂಕರ್ , ಈ ವಾರದಲ್ಲಿಯೇ ಆರು ಬೋಗಿಗಳ ರೈಲು ಸಂಚಾರಕ್ಕೆ ಆರಂಭಗೊಳ್ಳಲಿದ್ದು, ಬೆಳಿಗ್ಗೆ 8 ರಿಂದ 10-30 ಹಾಗೂ ಸಂಜೆ 5-30 ರಿಂದ ರಾತ್ರಿ 8 ಗಂಟೆಯವೆಗೂ ನಿತ್ಯ ಐದು ಟ್ರಿಪ್ ಗಳಲ್ಲಿ ರೈಲು ಓಡಿಸುವ ಪ್ರಾಯೋಗಿಕ ಯೋಜನೆ ಹಾಕಿಕೊಂಡಿರುವುದಾಗಿ ತಿಳಿಸಿದರು.
ಬೆಳಿಗ್ಗೆ ಟ್ರಿಪ್ ನಲ್ಲಿ ಮೈಸೂರು ರಸ್ತೆಯಿಂದ ಬೈಯಪ್ಪನಹಳ್ಳಿ , ಮೈಸೂರು ರಸ್ತೆಯಿಂದ ಎಂ. ಜಿ. ರಸ್ತೆ ಮತ್ತು ವಿಜಯನಗರದಿಂದ ಬೈಯಪ್ಪನಹಳ್ಳಿವರೆಗೂ ರೈಲು ಸಂಚರಿಸಿದ್ದರೆ, ಸಂಜೆ ಟ್ರಿಪ್ ನಲ್ಲಿ ಬೈಯಪ್ಪನಹಳ್ಳಿಯಿಂದ ಮೈಸೂರು ರಸ್ತೆಯಲ್ಲಿ ಎರಡು ಬಾರಿ ರೈಲು ಸಂಚರಿಸಲಿದೆ. ಸಂಜೆ 5-30 ಗಂಟೆ ಮೊದಲ ಟ್ರಿಪ್, ಸಂಜೆ 6-45ಕ್ಕೆ ಎರಡನೇ ಟ್ರಿಪ್ ಇರಲಿದೆ ಎಂದು ಅವರು ತಿಳಿಸಿದರು.
ರೈಲು ಒಂದು ಸುತ್ತಿನ ಟ್ರಿಪ್ ಮುಗಿಸಲು 70 ನಿಮಿಷ ತೆಗೆದುಕೊಳ್ಳುತ್ತದೆ. ಬೈಯಪ್ಪನಹಳ್ಳಿಯಿಂದ ಮೈಸೂರು ರಸ್ತೆಗೆ ಹೋಗಿ ಬರುವುದಕ್ಕೆ 70 ನಿಮಿಷ ಬೇಕಾಗುತ್ತದೆ ಅದ್ದರಿಂದ ಹೆಚ್ಚಿನ ಟ್ರಿಪ್ ಗಳಲ್ಲಿ ರೈಲನ್ನು ಹಾಕಲು ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದರು.
ಏಪ್ರಿಲ್ 1 ರಂದೇ ಮೆಟ್ರೋ ರೈಲು ಸುರಕ್ಷತಾ ಆಯುಕ್ತರು ಆರು ಬೋಗಿಯ ರೈಲಿನ ಕಾರ್ಯಾಚರಣೆ ಕುರಿತು ತಪಾಸಣೆ ನಡೆಸಿದ್ದಾರೆ. ವಿದ್ಯುತ್ ಕಾಂತೀಯ ಹೊಂದಾಣಿಕೆ ಪರೀಕ್ಷೆ ನಡೆಸಿದ ನಂತರ ಮೇ ಅಂತ್ಯದಲ್ಲಿ ಬಿಎಂಆರ್ ಸಿಲ್ ಲಕ್ನೋದಲ್ಲಿರುವ ರೈಲ್ವೆ ವಿನ್ಯಾಸ ಸಂಶೋಧನೆ ಮತ್ತು ಗುಣಮಟ್ಟದ ಸಂಸ್ಥೆಗೆ ವರದಿ ಸಲ್ಲಿಸಿದೆ. ಇದಕ್ಕೆ ಆರ್ ಡಿಎಸ್ ಒ ಸಮ್ಮತಿ ಸೂಚಿಸಿ ರೈಲ್ವೆ ಮಂಡಳಿಗೆ ರವಾನಿಸಿದೆ ಎಂದು ಎ.ಎಸ್. ಶಂಕರ್ ತಿಳಿಸಿದರು.
Advertisement