ಮಳೆ ಮುಗಿದ ಮೇಲೆ ಚರಂಡಿ ಒತ್ತುವರಿಯನ್ನು ತೆರವುಗೊಳಿಸಿ: ಡಿಸಿಎಂ ಅಧಿಕಾರಿಗಳಿಗೆ ಆದೇಶ

ರಾಜಕಾಲುವೆ ಮತ್ತು ಒಳ ಚರಂಡಿ ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಈ ಮಳೆಗಾಲದಲ್ಲಿ ಮತ್ತೆ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜಕಾಲುವೆ ಮತ್ತು ಒಳ ಚರಂಡಿ ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಈ ಮಳೆಗಾಲದಲ್ಲಿ ಮತ್ತೆ ಚಾಟಿ ಬೀಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಜ್ಜಾಗಿದೆ. ನಿನ್ನೆ ಶಾಸಕರು, ವಿಧಾನಪರಿಷತ್ ಸದಸ್ಯರು, ಸಂಸದರು ಮತ್ತು ನಗರ ಪಾಲಿಕೆಗಳ ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ನಡೆದ ಸಭೆಯಲ್ಲಿ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಾ ಜಿ ಪರಮೇಶ್ವರ್ ಒತ್ತುವರಿ ಕಾರ್ಯ ಮರು ಆರಂಭಿಸುವಂತೆ ಆದೇಶ ನೀಡಿದ್ದಾರೆ.

ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಭೆಯಲ್ಲಿ ಭಾಗವಹಿಸಿದ ಸಂಸದರು, ಶಾಸಕರು ಮಳೆಗಾಲದಲ್ಲಿ ನೆರೆ ಪರಿಸ್ಥಿತಿ ಉಂಟಾಗದಂತೆ ತುರ್ತು ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ. ಒಳ ಚರಂಡಿ ಒತ್ತುವರಿ ಮಾಡಿಕೊಂಡು ಅನಧಿಕೃತವಾಗಿ ನಿರ್ಮಿಸಿರುವ ಕಟ್ಟಡಗಳನ್ನು ತೆರವುಗೊಳಿಸುವ ಕಾರ್ಯವನ್ನು ಬಿಬಿಎಂಪಿ ಆರಂಭಿಸಿದೆ ಎಂದರು.

ಈ ಹಿಂದಿನ ಘಟನೆಗಳ ಆಧಾರದ ಮೇಲೆ ನಾವು ಕೆಲಸ ಮಾಡುತ್ತೇವೆ. ಒಳ ಚರಂಡಿಗಳ ತೆರವು ಕಾರ್ಯಾಚರಣೆ ಆರಂಭಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಮಳೆಗಾಲದ ನಂತರ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಲಿದ್ದಾರೆ ಎಂದು ಪರಮೇಶ್ವರ್ ಹೇಳಿದರು.

ನಗರದಲ್ಲಿ ಅತಿಕ್ರಮಣವಾಗಿರುವ ಸುಮಾರು 5,000 ಎಕರೆ ಬಿಡಿಎ ಜಮೀನನ್ನು ವಶಪಡಿಸಿಕೊಳ್ಳಲಾಗುವುದು. ಸುಮಾರು 25 ಸಾವಿರ ಕೋಟಿ ಬೆಲೆಬಾಳುವ ಜಮೀನು ವ್ಯಾಜ್ಯದಲ್ಲಿದೆ. ಕೇಸನ್ನು ತೆರವುಗೊಳಿಸಿ ಭೂಮಿಯನ್ನು ಸಕ್ರಮಗೊಳಿಸಿ ಸರ್ಕಾರ ತೆರಿಗೆ ಪಡೆದುಕೊಳ್ಳುವಂತೆ ಮಾಡಲಾಗುವುದು ಇಲ್ಲವೇ ಅತಿಕ್ರಮಣವನ್ನು ತೆರವುಗೊಳಿಸಿ ಭೂಮಿಯನ್ನು ವಶಪಡಿಸಿಕೊಳ್ಳಲಾಗುವುದು ಎಂದು ಹೇಳಿದರು.

ನಗರದ ನೆರೆ ಪ್ರವಾಹ, ತ್ಯಾಜ್ಯ ನಿರ್ವಹಣೆ, ಕುಡಿಯುವ ನೀರು ಪೂರೈಕೆ, ಸಂಚಾರ ನಿರ್ವಹಣೆ ಮತ್ತು ಮೂಲಭೂತ ಸೌಕರ್ಯಗಳ ಬಗ್ಗೆ ಚರ್ಚೆ ನಡೆಸಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com