ಮಗನ ಪ್ರಶ್ನೆಯಿಂದ ಮನಸ್ಥಿತಿ ಬದಲಾಯಿತು: ಉದ್ಯಮಿ ಗಣೇಶ್

ಹಣಕಾಸು ಮುಗ್ಗಟ್ಟಿನಿಂದ ಬೇಸತ್ತು ಪತ್ನಿಯನ್ನು ಕೊಂದು, ಮಕ್ಕಳ ಮೇಲೆ ಗುಂಡು ಹಾರಿಸಿ ಕೊಲೆಗೆ ಯತ್ನಿಸಿದ್ದ ಆರೋಪಿ ಗಣೇಶ್ ಪೊಲೀಸರು ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.
ಆರೋಪಿ ಗಣೇಶ್ ಮತ್ತು ಪತ್ನಿ ಸಹನಾ
ಆರೋಪಿ ಗಣೇಶ್ ಮತ್ತು ಪತ್ನಿ ಸಹನಾ
ಬೆಂಗಳೂರು:  ಹಣಕಾಸು ಮುಗ್ಗಟ್ಟಿನಿಂದ ಬೇಸತ್ತು ಪತ್ನಿಯನ್ನು ಕೊಂದು, ಮಕ್ಕಳ ಮೇಲೆ ಗುಂಡು ಹಾರಿಸಿ ಕೊಲೆಗೆ ಯತ್ನಿಸಿದ್ದ ಆರೋಪಿ ಗಣೇಶ್ ಪೊಲೀಸರು ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. 
ಆರೋಪಿಯನ್ನು ಬಂಧಿಸಿರುವ ಜಯನಗರ ಪೊಲೀಸರು, ಆತನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಅದೇ ವೇಳೆ ಸಾಲದ ಬಗ್ಗೆ ಆತ ಹೇಳಿಕೊಂಡಿದ್ದಾನೆ.ಮೊದಲು ತನ್ನ ಕುಟುಂಬವನ್ನು ಕೊಂದು ನಂತರ ತಾನು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದೆ, ಆದರೆ ನನ್ನ ಮಗ ಸಿದ್ಧಾರ್ಥ್  ಏಕೆ ಅಮ್ಮನನ್ನು ಕೊಂದೆ, ನಮ್ಮನ್ನು ಯಾಕೆ ಸಾಯಸುತ್ತಿರುವೆ ಎಂದು ಪ್ರಶ್ನಿಸಿದಾಗ ಕೊಲ್ಲಬೇಕೆಂಬ ನನ್ನ ಮನಸ್ಥಿತಿ ಬದಲಾಯಿತು, ಅದಾದ ನಂತರ ನಾನು ಮಾಗಡಿಯಲ್ಲಿದ್ದ ನನ್ನ ಸಂಬಂಧಿಕರ ಮನೆಯ ಕಡೆಗೆ ಕಾರು ಚಲಾಯಿಸಿದೆ ಎಂದು ಗಣೇಶ್ ಪೊಲೀಸರಿಗೆ ಹೇಳಿದ್ದಾನೆ,
ಹಣಕಾಸು ಸಮಸ್ಯೆಯಿಂದಾಗಿ ಗಣೇಶ್ ತನ್ನ ಕುಟುಂಬವನ್ನು ಕೊಲ್ಲಲು ನಿರ್ಧರಿಸಿದ್ದ, ತನ್ನ ಹೆಂಡತಿ ಸಹನಾರನ್ನು ಕೊಂದ ನಂತರ, ಕಗ್ಗಲಿಪುರದ ನೆಟ್ಟಿಗೆರೆಯಲ್ಲಿರುವ ವುಡ್ಸ್ ರೆಸಾರ್ಟ್ ಕಡೆಗೆ ಕಾರು ಚಲಾಯಿಸಿಕೊಂಡು ತೆರಳಿದ ಗಣೇಶ್  ಅಲ್ಲಿ ಇಬ್ಬರು ಮಕ್ಕಳಿಗೆ ಗುಂಡು ಹಾರಿಸಿದ್ದಾನೆ, ಸಿದ್ದಾರ್ತ್ ಮತ್ತು ಸಾಕ್ಷಿಗೆ ಗಾಯಗಳಾಗಿವೆ, ಈ ವೇಳೆ ಏಕೆ ನಮ್ಮನ್ನು ಕೊಲ್ಲುತ್ತಿದ್ದೀರಿ ಎಂದು ಮಗ ಸಿದ್ಧಾರ್ಥ್ ಪ್ರಶ್ನಿಸಿದ್ದಾನೆ,  ಆಗ ಮನಸು ಬದಲಾಯಿಸಿದ ಗಣೇಶ್  ಇಬ್ಬರನ್ನು ಹಿಂದಿನ ಸೀಟಿನಲ್ಲಿ ಕೂರಿಸಿ, ತನ್ನ ಅಂಗವಿಕಲ ಮಗ ಸಮಿತ್ ನನ್ನು ತನ್ನ ಪಕ್ಕ ಕೂರುವಂತೆ ಒತ್ತಾಯಿಸಿದ್ದಾನೆ,
ರೆಸಾರ್ಟ್ ನಲ್ಲಿ ಒಬ್ಬರಾದ ಮೇಲೆ ಒಬ್ಬರನ್ನು ಗಣೇಶ್ ಶೂಟ್ ಮಾಡುವಾಗ ಸಮಿತ್ ಮೂಕ ಪ್ರೇಕ್ಷಕನಾಗಿ ಎಲ್ಲವನ್ನೂ ವೀಕ್ಷಿಸುತ್ತಿದ್ದ. ಗಣೇಶ್ ತನ್ನ ದತ್ತು ಮಗಳು ಸಾಕ್ಷಿಯ ಮೇಲೆ ಗುಂಡು ಹಾರಿಸುವಾಗ ಕೂಡಲೇ ಸಿದ್ದಾರ್ಥ್ ಪ್ರಶ್ನಿಸಿದ್ದಾನೆ, ಈ ವೇಳೆ ಅವನ ಕೈಗೂ ಗುಂಡು ತಾಗಿದೆ,  ಸಿದ್ದಾರ್ಥ್ ಪ್ರಶ್ನಿಸದೇ ಹೋಗಿದ್ದರೇ ಗಣೇಶ್ ತನ್ನ ವಿಕಲಾಂಗ ಮಗ ಸಮಿತ್ ನನ್ನು ಕೊಲ್ಲಲು ಯೋಜಿಸಿದ್ದ.
ಬೆಳಗ್ಗೆ 11.50 ರ ವೇಳೆಗೆ ಸಹನಾರನ್ನು ಗಣೇಶ್ ಕೊಂದಿದ್ದಾನೆ, ಈ ವೇಳೆ ಸಮಿತ್ ಮನೆಯಲ್ಲಿದ್ದ. ನಂತರ ಶಾಲೆಗೆ ತೆರಳಿದ ಗಣೇಶ್ ಸಿದ್ದಾರ್ಥ್ ಮತ್ತು ಸಾಕ್ಷಿಯನ್ನು ಕರೆದುಕೊಂಡು ರೆಸಾರ್ಟ್ ಗೆ ಬಂದಿದ್ದಾನೆ. ತನ್ನ ರಕ್ಷಣೆಗಾಗಿ ಆರೋಪಿ, ಪರವಾನಗಿ ಪಡೆದು ಪಿಸ್ತೂಲ್ ಖರೀದಿಸಿದ್ದ. ಅದರಿಂದಲೇ ಆತ ಕೃತ್ಯ ಎಸಗಿದ್ದಾನೆ. ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಸದ್ಯ ಗಣೇಶ್ ಮನಸ್ಥಿತಿ ಸರಿಯಾಗಿಲ್ಲ.  ಆತ ಸರಿಯಾಗಿ ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ,  ಹೀಗಾಗಿ ಸದ್ಯಕ್ಕೆ ಆತನನ್ನು ಕಸ್ಟಡಿಗೆ ತೆಗೆದುಕೊಳ್ಳುವುದಿಲ್ಲ ಎಂದು ತನಿಖಾಧಿಕಾರಿ ಹೇಳಿದ್ದಾರೆ.
ಸಹನಾರ ಮರಣೋತ್ತರ ಪರೀಕ್ಷೆಯನ್ನು ಶುಕ್ರವಾರ ರಾತ್ರಿ ನಡೆಸಿ, ಶವವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು. ಶನಿವಾರ ಅಂತ್ಯಕ್ರಿಯೆ ನಡೆಯಿತು.
ಮಕ್ಕಳು ಅಪಾಯದಿಂದ ಪಾರು: ಗುಂಡು ತಗುಲಿ ಗಾಯಗೊಂಡ ಮಕ್ಕಳಾದ ಸಿದ್ದಾರ್ಥ್‌ ಹಾಗೂ ಸಾಕ್ಷಿಯನ್ನು ಕನಕಪುರ ರಸ್ತೆಯ ಆಸ್ಟ್ರಾಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು, ಅವರಿಬ್ಬರ ದೇಹದಲ್ಲಿದ್ದ ಮೂರು ಗುಂಡುಗಳನ್ನು ಹೊರಗೆ ತೆಗೆದಿದ್ದಾರೆ.
ಸಾಕ್ಷಿಗೆ ಬಿದ್ದಿದ್ದ ಒಂದು ಗುಂಡು ದೇಹ ಸೀಳಿಕೊಂಡು ಹೊರಗೆ ಹೋಗಿದೆ. ಇನ್ನೊಂದು ಗುಂಡು, ಆಕೆಯ ಹೊಟ್ಟೆಯಲ್ಲೇ ಇತ್ತು. ಸಿದ್ಧಾರ್ಥ್ ದೇಹದಲ್ಲಿ ಎರಡು ಗುಂಡುಗಳು ಇದ್ದವು. ಅವುಗಳನ್ನು ಹೊರಗೆ ತೆಗೆಯಲಾಗಿದ್ದು, ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ. ಅವರಿಬ್ಬರನ್ನು ತುರ್ತು ನಿಗಾ ಘಟಕದಲ್ಲಿ (ಐಸಿಯು) ಇರಿಸಲಾಗಿದೆ’ ಎಂದು ವೈದ್ಯರು ತಿಳಿಸಿರುವುದಾಗಿ ಪೊಲೀಸರು ಹೇಳಿದರು.
ಸಹನಾರನ್ನು ಕೊಲೆ ಮಾಡಿದ ಆರೋಪದಡಿ ಜಯನಗರ ಠಾಣೆ, ಮಕ್ಕಳ ಅಕ್ರಮ ಬಂಧನ ಮತ್ತು ಅವರ ಕೊಲೆಗೆ ಯತ್ನಿಸಿದ ಆರೋಪದಡಿ ಕಗ್ಗಲೀಪುರ ಠಾಣೆ ಠಾಣೆಯಲ್ಲಿ ಪ್ರತ್ಯೇಕ ಎಫ್‌ಐಆರ್‌ಗಳು ದಾಖಲಾಗಿವೆ. ನಷ್ಟದಿಂದಾಗಿ ಹಲವು ಕೋಟಿ ರುಪಾಯಿ ಸಾಲ ಮಾಡಿದ್ದ ಗಣೇಶ್ ಮನೆ ಮಾರಲು ನಿರ್ಧರಿಸಿದ್ದ, ಆದರೆ ಇದಕ್ಕೆ ಪತ್ನಿ ಸಹನಾ ತೀವ್ರ ವಿರೋಧ ವ್ಯಕ್ತ ಪಡಿಸಿದ್ದರಿಂದ ಆಕೆಗೆ ಗುಂಡುಹಾರಿಸಿಕೊಂದಿದ್ದಾನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com