ಬೇರೆಯವರ ಪಿತೂರಿಗೆ ನಾನು ಬಲಿಪಶು ಆಗಿದ್ದೇನೆ: ಪೋಷಕರ ಬಳಿ ಅಳಲು ತೋಡಿಕೊಂಡ ವಾಗ್ಮೋರೆ

ಹಿರಿಯ ಪತ್ರಕರ್ತೆ ಹಾಗೂ ಪ್ರಗತಿಪರ ಚಿಂತಕಿ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಪರಶುರಾಮ್ ವಾಗ್ಮೋರೆ ಪೋಷಕರ ಬಳಿ ತನ್ನ ಅಳಲನ್ನು ತೋಡಿಕೊಂಡಿದ್ದು, ಇತರರ ಪಿತೂರಿಗಳಲ್ಲಿ ನನ್ನನ್ನು ಬಲಿಪಶುವನ್ನಾಗಿ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಹಿರಿಯ ಪತ್ರಕರ್ತೆ ಹಾಗೂ ಪ್ರಗತಿಪರ ಚಿಂತಕಿ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಪರಶುರಾಮ್ ವಾಗ್ಮೋರೆ ಪೋಷಕರ ಬಳಿ ತನ್ನ ಅಳಲನ್ನು ತೋಡಿಕೊಂಡಿದ್ದು, ಇತರರ ಪಿತೂರಿಗಳಲ್ಲಿ ನನ್ನನ್ನು ಬಲಿಪಶುವನ್ನಾಗಿ ಮಾಡಲಾಗಿದೆ ಎಂದು ಹೇಳಿಕೊಂಡಿದ್ದಾನೆಂದು ತಿಳಿದುಬಂದಿದೆ. 
ನಿನ್ನೆಯಷ್ಟೇ ಪುತ್ರ ವಾಗ್ಮೋರೆಯನ್ನು ಭೇಟಿ ಮಾಡಲು ತಾಯಿಗೆ ಅವಕಾಶ ಮಾಡಿಕೊಡಲಾಗಿತ್ತು. ಭೇಟಿ ಸಂದರ್ಭದಲ್ಲಿ ತಾಯಿಯೊಂದಿಗೆ ತನ್ನ ಅಳಲನ್ನು ತೋಡಿಕೊಂಡಿರುವ ವಾಗ್ಮೋರೆ, ಇತರರು ಪಿತೂರಿಗಳನ್ನು ನಡೆಸಿದ್ದು, ಇದರಲ್ಲಿ ನನ್ನನ್ನು ಬಲಿಪಶುವನ್ನಾಗಿ ಮಾಡಿದ್ದಾರೆಂದು ಹೇಳಿಕೊಂಡಿದ್ದಾರೆಂದು ಹೇಳಲಾಗುತ್ತಿದೆ. 
ವಾಗ್ಮೋರೆ ತಾಯಿ ಜಾನಕಿ ಭಾಯಿ ಮತ್ತು ತಂಡೆ ಅಶೋಕ್ ವಾಗ್ಮೋರೆಯವರು ನಿನ್ನೆಯಷ್ಟೇ ವಿಜಯಪುರದ ಸಿಂಧಗಿಯಿಂದ ಪುತ್ರನನ್ನು ಭೇಟಿ ಮಾಡಲು ನಗರಕ್ಕೆ ಬಂದಿದ್ದರು. 
ಗೌರಿ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳ ಪೋಷಕರಿಗೆ ಪರಶುರಾಮ್'ನನ್ನು ಭೇಟಿ ಮಾಡಲು ಅವಕಾಶ ಮಾಡಿಕೊಟ್ಟಿದ್ದು. 
15 ನಿಮಿಷಗಳ ಕಾಲ ವಾಗ್ಮೋರೆ ಪೋಷಕರೊಂದಿಗೆ ಮಾತುಕತೆ ನಡೆಸಿದ್ದ ಎಂದು ಎಸ್ಐಟಿ ಮೂಲಗಳು ಮಾಹಿತಿ ನೀಡಿವೆ. 
ಮಗನನ್ನು ಕಂಡ ಕೂಡಲೇ ಜಾನಕಿ ಭಾಯಿ ಅವರ ಕಣ್ಣಾಲಿಗಳು ತುಂಬಿದ್ದವು. ಮಾತುಕತೆ ವೇಳೆ ವಾಗ್ಮೋರೆ, ನಾನು ಇತರರ ಕೈಯಲ್ಲಿ ಕೈಗೊಂಬೆಯಾಗಿದ್ದೆ. ಇತರರ ಪಿತೂರಿಗಳಿಗೆ ನಾನು ಬಲಿಪಶುವಾದೆ ಎಂದು ಹೇಳಿಕೊಂಡಿದ್ದಾನೆಂದು ಎಸ್ಐಟಿ ಮೂಲಗಳು ಮಾಹಿತಿ ನೀಡಿವೆ. 
ಮಗನ ಈ ಮಾತಿಗೆ ಪ್ರತಿಕ್ರಿಯೆ ನೀಡಿರುವ ಜಾನಕಿ ಭಾಯಿಯವರು, ಅಪರಾಧ ಎಸಗಿದ್ದರೂ ಸರಿ ಪೊಲೀಸರಿಗೆ ಎಲ್ಲವನ್ನೂ ಹೇಳು ಎಂದಿದ್ದಾರೆ. ಈ ವೇಳೆ ವಾಗ್ಮೋರೆ ತಂದೆಗೆ ತಾಯಿಯನ್ನು ಚೆನ್ನಾಗಿ ನೋಡಿಕೋ, ಶೀಘ್ರದಲ್ಲಿಯೇ ಮನೆಗೆ ಬರುತ್ತೇನೆಂದು ತಿಳಿಸಿದ್ದಾನೆಂದು ಅಧಿಕಾರಿಗಳು ಹೇಳಿದ್ದಾರೆ. 
ಹಲವು ದಿನಗಳ ಬಳಿ ನಾನು ನನ್ನ ಮಗನನ್ನು ನೋಡಿದೆ. ನನ್ನನ್ನು ನೋಡಿದ ಕೂಡಲೇ ಪುತ್ರ ಅಳಲು ಆರಂಭಿಸಿದ್ದ. ನನ್ನ ಮಗ ಮುಗ್ಧ. ಯಾವುದೇ ಸಂಘಟನೆಗೂ ಆತ ಸೇರಿಲ್ಲ. ಪೊಲೀಸರು ಆತನೊಡನೆ ಉತ್ತಮವಾಗಿಯೇ ನಡೆದುಕೊಳ್ಳುತ್ತಿದ್ದಾರೆ. ಮಗನ ನೋಡಿದ ಬಳಿಕ ನನ್ನ ಮನಸ್ಸು ನಿರಾಳವಾಗಿದೆ. ನನ್ನ ಮಗ ಚೆನ್ನಾಗಿದ್ದಾನೆ. ನನ್ನ ಮಗ ಯಾವುದೇ ಅಪರಾಧಗಳಲ್ಲಿಯೂ ಭಾಗಿಯಾಗಿಲ್ಲ ಎಂಬ ನಂಬಿಕೆ ನನಗಿದೆ ಎಂದು ವಾಗ್ಮೋರೆ ತಾಯಿ ಜಾನಕಿ ಭಾಯಿಯವರು ತಿಳಿಸಿದ್ದಾರೆ. 
ಅಶೋಕ್ ವಾಗ್ಮೋರೆ ಮಾತನಾಡಿ, ನನ್ನ ಮಗ ಮುಗ್ಧ. ನಮಗೆ ನ್ಯಾಯ ಸಿಗುವ ವಿಶ್ವಾಸವಿದೆ ಎಂದಿದ್ದಾರೆ. 
ವಾಗ್ಮೋರೆ ನ್ಯಾಯಾಂಗ ಬಂಧನ ಇಂದಿಗೆ ಅಂತ್ಯ
ಪರಶುರಾಮ್ ವಾಗ್ಮೋರೆಯನ್ನು ಎಸ್ಐಟಿ ಅಧಿಕಾರಿಗಳು 14 ದಿನಗಳ ಕಾಲ ವಶಕ್ಕೆ ಪಡೆದುಕೊಂಡಿದ್ದು, 14 ದಿನಗಳ ಪೊಲೀಸರ ವಶ ಇಂದಿಗೆ ಅಂತ್ಯಗೊಳ್ಳುತ್ತಿದೆ. ಇದರಂತೆ ಇಂದು ಸಂಜೆ ವಾಗ್ಮೋರೆಯನ್ನು ಅಧಿಕಾರಿಗಳು ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ. ವಾಗ್ಮೋರೆಗೆ ನ್ಯಾಯಾಂಗ ಬಂಧನ ವಿಧಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com