ಬಜೆಟ್ ಮಂಡಿಸುತ್ತೇನೊ, ಇಲ್ಲವೋ ಗೊತ್ತಿಲ್ಲ: ಹೆಚ್ ಡಿ ಕುಮಾರಸ್ವಾಮಿ

ಜುಲೈ 5ರಂದು ನೂತನ ಸಮ್ಮಿಶ್ರ ಸರ್ಕಾರದ ಬಜೆಟ್ ಮಂಡಿಸುವುದಾಗಿ ಈ ಹಿಂದೆ ಹೇಳಿದ್ದ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಇದೀಗ ತಮ್ಮ ಮಾತುಗಳಿಂದ ....
ವಿಧಾನ ಸೌಧದಲ್ಲಿ ಬ್ಯಾಂಕು ಅಧಿಕಾರಿಗಳೊಂದಿಗೆ ಸಭೆಯಲ್ಲಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ
ವಿಧಾನ ಸೌಧದಲ್ಲಿ ಬ್ಯಾಂಕು ಅಧಿಕಾರಿಗಳೊಂದಿಗೆ ಸಭೆಯಲ್ಲಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ
Updated on: 

ಬೆಂಗಳೂರು: ಜುಲೈ 5ರಂದು ನೂತನ ಸಮ್ಮಿಶ್ರ ಸರ್ಕಾರದ ಬಜೆಟ್ ಮಂಡಿಸುವುದಾಗಿ ಈ ಹಿಂದೆ ಹೇಳಿದ್ದ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಇದೀಗ ತಮ್ಮ ಮಾತುಗಳಿಂದ ಹಿಂದೆ ಸರಿದಿದ್ದಾರೆ.

ಬಜೆಟ್ ಮಂಡಿಸುತ್ತೇನೊ, ಇಲ್ಲವೋ ಗೊತ್ತಿಲ್ಲ ಎಂದು ಇಂದು ಸ್ವತಃ ಮುಖ್ಯಮಂತ್ರಿಯೇ ಹೇಳಿದ್ದಾರೆ. ಬಜೆಟ್ ಮಂಡಿಸಬೇಕೋ ಬೇಡವೋ ಗೊತ್ತಿಲ್ಲ, ಆ ಬಗ್ಗೆ ನನಗೇನೂ ಗೊತ್ತಿಲ್ಲ ಎಂದು ಹೆಚ್ ಡಿ ಕೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಇಂದು ವಿಧಾನಸೌಧದಲ್ಲಿ ಸಾಲ ಮನ್ನಾ ಮತ್ತು ಸಹಕಾರ ಇಲಾಖೆಗೆ ಸಂಬಂಧಪಟ್ಟಂತೆ ರಾಜ್ಯದ ಎಲ್ಲಾ ಜಿಲ್ಲಾ ಸಹಕಾರಿ ಬ್ಯಾಂಕುಗಳ ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರುಗಳು ಹಾಗೂ ಅಪೆಕ್ಸ್ ಬ್ಯಾಂಕ್ ಮತ್ತು ಸಹಕಾರ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಕುರಿತು ಸಭೆ ನಡೆಸುವ ಸಂದರ್ಭದಲ್ಲಿ ಅವರು ಈ ಮಾತುಗಳನ್ನಾಡಿದ್ದಾರೆ.

ಹಿಂದಿನ ಕಾಂಗ್ರೆಸ್ ಸರ್ಕಾರ ಫೆಬ್ರವರಿಯಲ್ಲಿ ಮಂಡಿಸಿದ್ದ ಬಜೆಟ್ ನ್ನು ಮುಂದುವರಿಸಿಕೊಂಡು ಹೋದರೆ ಸಾಕು, ಹೊಸ ಬಜೆಟ್ ಮಂಡಿಸುವ ಅಗತ್ಯವೇನಿದೆ ಮತ್ತು ಮುಂದಿನ ವರ್ಷ ಲೋಕಸಭೆ ಚುನಾವಣೆ ನಂತರ ಹೊಸ ಬಜೆಟ್ ಮಂಡನೆ ಬಗ್ಗೆ ನೋಡಿದರಾಯಿತು ಎಂದು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿರುವ ಹೇಳಿಕೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಇಂದು ಈ ಪ್ರತಿಕ್ರಿಯೆ ನೀಡಿದ್ದಾರೆ.

ಈ ಮೂಲಕ ಬಜೆಟ್ ಮಂಡನೆ ಬಗ್ಗೆ ಹಾಲಿ ಮತ್ತು ಮಾಜಿ ಸಿಎಂಗಳ ನಡುವಿನ ಭಿನ್ನಾಭಿಪ್ರಾಯ ಇದೀಗ ಸಾರ್ವಜನಿಕವಾಗಿ ಹೊರಬಂದಂತಾಗಿದೆ.

ಕಳೆದ ಫೆಬ್ರವರಿಯಲ್ಲಿ ಮಂಡಿಸಿದ್ದ ಬಜೆಟ್ ನ್ನು ಮುಂದುವರಿಸಿಕೊಂಡು ಹೋಗುವುದು ಕಷ್ಟ. ಅಂದು ಅಧಿಕಾರದಲ್ಲಿದ್ದ ಸುಮಾರು 100 ಮಂದಿ ಶಾಸಕರು ಮೊನ್ನೆಯ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದಾರೆ. ಹೀಗಿರುವಾಗ ಅಂದು ಅನುಮೋದಿಸಿದ್ದ ಕಾರ್ಯಕ್ರಮಗಳನ್ನು ಇಂದು ಮುಂದುವರಿಸಿಕೊಂಡು ಹೋಗುವುದು ಕಷ್ಟ ಎಂದು ಹೆಚ್ ಡಿ ಕುಮಾರಸ್ವಾಮಿ ಇಂದಿನ ಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸಾಲಮನ್ನಾ ಮಾಡಲು ಮುಖ್ಯಮಂತ್ರಿ ಹಣ ಎಲ್ಲಿಂದ ತರುತ್ತಾರಂತೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯನವರು ಕೇಳಿರುವ ಬಗ್ಗೆಯೂ ಸಾರ್ವಜನಿಕವಾಗಿ ಟೀಕಿಸಿದ ಸಿಎಂ ಕುಮಾರಸ್ವಾಮಿ ಈ ರಾಜ್ಯದ ರೈತರ ಕಷ್ಟಗಳಿಗೆ ಸ್ಪಂದಿಸಲು ಸಾಲಮನ್ನಾ ಮಾಡುವ ಬಗ್ಗೆ ಮುಂದಾಗಿದ್ದೇನೆಯೇ ಹೊರತು ನನಗೆ ಇದರಿಂದ ಯಾವುದೇ ಕಮಿಷನ್ ಬರುವುದಿಲ್ಲ. ನಾನು ಮುಖ್ಯಮಂತ್ರಿ ಹುದ್ದೆಯನ್ನು ಯಾರಿಂದಲೂ ಭಿಕ್ಷೆ ಬೇಡಿ ಪಡೆದದ್ದಲ್ಲ, ಅಧಿಕಾರ ಅದುವಾಗಿಯೇ ಸಿಕ್ಕಿದ್ದು, ನಾನು ಯಾರ ಹಂಗಿನಲ್ಲಿಯೂ ಇಲ್ಲ ಎಂದು ಅಸಮಾಧಾನ ಹೊರಹಾಕಿದರು.

ರಾಜ್ಯದ ರೈತರ ಹಿತದೃಷ್ಟಿಯಿಂದ ಸಾಲಮನ್ನಾ ಮಾಡಲು ಮುಂದಾಗಿದ್ದೇನೆಯೋ ಹೊರತು ಇದರಿಂದ ನನಗೆ ವೈಯಕ್ತಿಕ ಲಾಭವೇನೂ ಇಲ್ಲ. ಅಧಿಕಾರದ ದರ್ಪದಿಂದ, ಅಹಂಕಾರದಿಂದ ಮಾತನಾಡಿದ ತಕ್ಷಣ ಏನೂ ಸಿಗುವುದಿಲ್ಲ ಎಂದು ಪರೋಕ್ಷವಾಗಿ ಸಿದ್ದರಾಮಯ್ಯನವರಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ.

ಇದರಿಂದ ಸಮ್ಮಿಶ್ರ ಸರ್ಕಾರದಲ್ಲಿ ನಾಯಕರ ಮಧ್ಯೆ ಎಲ್ಲವೂ ಸರಿಯಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com