ನ್ಯಾಯಾಧೀಶರ ಮಗನೆಂದು ಹೇಳಿಕೊಂಡು ಯುವತಿಯರಿಗೆ 6.9 ಲಕ್ಷ ರೂ. ವಂಚನೆ

ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರ ಪುತ್ರ ಎಂದು ಹೇಳಿಕೊಂಡು 32 ವರ್ಷದ ಯುವಕ ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರ ಪುತ್ರ ಎಂದು ಹೇಳಿಕೊಂಡು 32 ವರ್ಷದ ಯುವಕ ಯುವತಿಯರಿಗೆ ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ 6.90 ಲಕ್ಷ ರೂಪಾಯಿ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ.

ಈ ಸಂಬಂಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಸಿ ಎಸ್ ಸಂಜಯ್ ಕಿರಣ್, ಹೆಚ್ ಎಸ್ ಆರ್ ಲೇ ಔಟ್ ನಿವಾಸಿಯಾಗಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿದ್ದನು. ಆದರೆ ನ್ಯಾಯಾಲಯ ಜಾಮೀನು ನಿರಾಕರಿಸಿದೆ. ಆರೋಪಿ ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರ ವ್ಯಕ್ತಿತ್ವಕ್ಕೆ ಮಸಿ ಬಳೆಯಲು ಯತ್ನಿಸಿದ್ದ ಎಂದು ವಿಚಾರಣೆ ನಡೆಸಿದ ನ್ಯಾಯಾಧೀಶರು ಹೇಳಿದ್ದಾರೆ.

ಕಳೆದ 22ರಂದು ಪ್ರಕರಣದ ವಿಚಾರಣೆ ನಡೆಸಿ ತೀರ್ಪು ನೀಡಿದ ಅಡಿಷನಲ್ ಸಿಟಿ ಸಿವಿಲ್ ಕೋರ್ಟ್ ಮತ್ತು ಸೆಷನ್ಸ್ ಕೋರ್ಟ್ ನ ನ್ಯಾಯಾಧೀಶ ಬಿ ಬಿ ಜಾಕಟಿ, ದೂರಿನಲ್ಲಿ ಮಾಡಿರುವ ಆರೋಪ ಪ್ರಕಾರ ಆರೋಪಿ ಹೈಕೋರ್ಟ್ ನ ನ್ಯಾಯಾಧೀಶರೊಬ್ಬರ ಪುತ್ರ ಎಂದು ಹೇಳಿಕೊಂಡು ರಕ್ಷಿತಾ ಮತ್ತು ಸುನಿತಾ ಎಂಬುವವರಿಗೆ ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ತಲಾ 3.40 ಲಕ್ಷ ರೂಪಾಯಿ ನೀಡುವಂತೆ ಒತ್ತಾಯಿಸಿದ್ದ ಎಂದಿದ್ದಾರೆ.

ಕೆಲಸ ಸಿಗುವ ನಂಬಿಕೆಯಲ್ಲಿ ರಕ್ಷಿತಾ ಮತ್ತು ಸುನಿತಾ ಒಟ್ಟಾಗಿ 6.20 ಲಕ್ಷ ರೂಪಾಯಿ ನೀಡಿದ್ದರು. ನಂತರ ಅವರಿಗೆ ಈತ ಮೋಸ ಮಾಡುತ್ತಿದ್ದಾನೆ ಎಂದು ಗೊತ್ತಾಯಿತು. ಈ ಸಂಬಂಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಮೇ 26ರಂದು ದೂರು ದಾಖಲಿಸಿದ್ದರು. ಅದು ವಿಚಾರಣೆ ಹಂತದಲ್ಲಿದೆ.

ಈ ಮಧ್ಯೆ ತನಿಖೆ ನಡೆಸಿದ ಹೈಕೋರ್ಟ್ ನ್ಯಾಯಾಧೀಶರ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಯತ್ನಿಸಿದ ಗಂಭೀರ ಪ್ರಕರಣವಿದು. ಆತನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದರೆ ಸಾಕ್ಷ್ಯಗಳನ್ನು ನಾಶಪಡಿಸಿ ತನಿಖೆಗೆ ಸಹಕರಿಸುವ ಸಾಧ್ಯತೆಗಳಿಲ್ಲ. ಹೀಗಾಗಿ ಜಾಮೀನು ನೀಡಬಾರದು ಎಂದು ಹೇಳಿ ನಿರಾಕರಿಸಿದರು.

ಪ್ರಥಮ ದರ್ಜೆ ಸಹಾಯಕರ ಹುದ್ದೆ ಕೆಲಸವನ್ನು ಪ್ರಶಾಂತ್ ಎಂಬುವವನಿಗೆ ನೀಡುವುದಾಗಿ ನಂಬಿಸಿ ಕಳೆದ ಜನವರಿಯಲ್ಲಿ ಸಂಜಯ್ ಕಿರಣ್ ವಿಧಾನಸೌಧದ ಪಕ್ಕದಲ್ಲಿರುವ ಶಾಸಕರ ಭವನದಲ್ಲಿ 70,000 ರೂಪಾಯಿ ಪಡೆದಿದ್ದ. ನಂತರ ಆತನ ಸ್ನೇಹಿತೆ ಸುನಿತಾ ಮತ್ತು ಆಕೆಯ ಸ್ನೇಹಿತೆ ರಕ್ಷಿತಾ ಎಂಬುವವರಿಗೆ ದ್ವಿತೀಯ ದರ್ಜೆ ಸಹಾಯಕರ ಹುದ್ದೆ ಕೆಲಸ ಕೊಡಿಸುವುದಾಗಿ ನಂಬಿಸಿ 6.20 ಲಕ್ಷ ರೂಪಾಯಿಗಳನ್ನು ಪಡೆದಿದ್ದ. ಆದರೆ ಕೆಲಸ ಕೊಡಿಸಿರಲಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com