ಬೀದರ್: ತೆಲಂಗಾಣ ಹಾಗೂ ಛತ್ತೀಸ್ ಘಡ ಗಡಿಯಲ್ಲಿ ಇಂದು (ಗುರುವಾರ) ನಡೆದ ನಕ್ಸಲ್ ವಿರುದ್ಧದ ಕಾರ್ಯಾಚರಣೆಯಲ್ಲಿ ಕರ್ನಾಟಕದ ಬೀದರ್ ಮೂಲದ ಯೋಧನೊಬ್ಬ ಮೃತಪಟ್ಟಿದ್ದಾರೆ.
ತೆಲಂಗಾಣ ನಕ್ಸಲ್ ನಿಗ್ರಹ ಪಡೆ ಕಾನ್‌ಸ್ಟೆಬಲ್ ಆಗಿದ್ದ ಬೀದರ್‌ನ ಲಾಡಗೇರಿ ಗ್ರೇಸ್ ಕಾಲೊನಿಯ ಸುಶೀಲಕುಮಾರ ವಿಲ್ಸನ್ (32) ಇಂದಿನ ಕಾರ್ಯಾಚರಣೆಯಲ್ಲಿ ವೀರಮರಣವನ್ನಪ್ಪಿದ್ದಾರೆ.
2001ರಲ್ಲಿ ತೆಲಂಗಾಣದ ಚಂದಾನಗರ ಪೊಲೀಸ್ ಠಾಣೆಗೆ ಕಾನ್‌ಸ್ಟೆಬಲ್ ಆಗಿ ಸೇರಿದ್ದ ಸುಶೀಲಕುಮಾರ ನಂತರದ ದಿನಗಳಲ್ಲಿ ನಕ್ಸಲ್ ನಿಗ್ರಹ ಪಡೆಗೆ ಸೇರ್ಪಡೆಯಾಗಿದ್ದರು. ಅಲ್ಲಿ ಅವರು ಎರವಲು ಸೇವೆಯ ಅಡಿಯಲ್ಲಿ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುತ್ತಿದ್ದರು.
ಬೀದರ್ ನ ಈ ಯೋಧ ತೆಲಂಗಾಣದ ಅಜ್ಜಿ ಮನೆಯಲ್ಲಿಯೇ ಬೆಳೆದಿದ್ದು ಅಲ್ಲಿಯೇ ಶಿಕ್ಷಣ ಪೂರೈಸಿ ಪೋಲೀಸ್ ಸೇವೆಗೆ ದಾಖಲಾಗಿದ್ದರು.
ಮೃತ ಯೋಧ ಪತ್ನಿ, ಮೂರು ವರ್ಷದ ಹೆಣ್ಣು ಮಗುವನ್ನು ಅಗಲಿದ್ದಾರೆ. ಇಂದು ರಾತ್ರಿ ಹತ್ತರ ಸುಮಾರಿಗೆ ಯೋಧನ ಪಾರ್ಥಿವ ಶರೀರ ಬೀದರ್ ಗೆ ಆಆಗಮಿಸಲಿದೆ ಎಂದು ತೆಲಂಗಾಣ ಪೋಲೀಸರು ಹೇಳಿದ್ದಾರೆ.