ಮೊದಲ ಬಾರಿಗೆ ಈಶಾನ್ಯ ಭಾರತ ಚುನಾವಣೆಯತ್ತ ಇಡೀ ದೇಶ ಆಸಕ್ತಿ ತೋರಿದೆ: ಪ್ರಧಾನಿ ಮೋದಿ

ಇದೇ ಮೊಟ್ಟ ಮೊದಲ ಬಾರಿಗೆ ಇಡೀ ದೇಶ ಈಶಾನ್ಯ ಭಾರತ ವಿಧಾನಸಭಾ ಚುನಾವಣೆಯತ್ತ ಆಸಕ್ತಿ ತೋರುವಂತೆ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಪ್ರಧಾನಿ ಮೋದಿ
ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಪ್ರಧಾನಿ ಮೋದಿ
ತುಮಕೂರು: ಇದೇ ಮೊಟ್ಟ ಮೊದಲ ಬಾರಿಗೆ ಇಡೀ ದೇಶ ಈಶಾನ್ಯ ಭಾರತ ವಿಧಾನಸಭಾ ಚುನಾವಣೆಯತ್ತ ಆಸಕ್ತಿ ತೋರುವಂತೆ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ತುಮಕೂರಿನ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ನಡೆದ ರಾಮಕೃಷ್ಣ-ವಿವೇಕಾನಂದ ಆಶ್ರಮದ ಬೆಳ್ಳಿಹಬ್ಬ ರಜತಯಾನದ ಸಮಾರೋಪ ಸಮಾರಂಭದಲ್ಲಿ ದೆಹಲಿಯಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಪ್ರಧಾನಿ ಮೋದಿ, ತ್ರಿಪುರ ಚುನಾವಣಾ ಫಲಿತಾಂಶ ವಾಸ್ತವವಾಗಿ ಒಂದು ಐತಿಹಾಸಿಕವಾದದ್ದು. ಎಡಪಂಥೀಯರ ಕೋಟೆಯು ಅಭೇದ್ಯ ಎನ್ನಲಾಗುತ್ತಿತ್ತು. ಆ ಕೋಟೆಯನ್ನು ಯುವಶಕ್ತಿ, ನಾರಿ ಶಕ್ತಿ ಕೂಡಿ ಧೂಳೀಪಟಗೊಳಿಸಿದೆ. ತ್ರಿಪುರಾದಲ್ಲಿ ಇದೀಗ ಭಾರತೀಯ ಜನತಾ ಪಕ್ಷದ ನೇತೃತ್ವದಲ್ಲಿ ದೇಶದ ಯುವ ಸರ್ಕಾರ ನಿರ್ಮಾಣವಾಗುತ್ತಿದೆ ಎಂದು ಹೇಳಿದರು.
ಇದೇ ಮೊದಲ ಬಾರಿಗೆ ಈಶಾನ್ಯ ಭಾರತದ ಚುನಾವಣೆಯನ್ನು ಇಡೀ ದೇಶ ಆಸ್ತಕ್ತಿಯಿಂದ ನೋಡುತ್ತಿದೆ. ಕಾರಣ ಈಶಾನ್ಯ ಭಾರತದಲ್ಲಿ ಕಮಲ ಅರಳಿದೆ. ತ್ರಿಪುರಾದ ಯುವಜನಾಂಗ ಅಲ್ಲಿ ಭಯ, ಭ್ರಷ್ಟಾಚಾರ, ಸೇಡು, ವೈಷಮ್ಯ ಮತ್ತು ಭ್ರಮೆಯ ರಾಜಕೀಯ ಇವುಗಳನ್ನು ಪರಾಭವಗೊಳಿಸಿದೆ ಎಂದು ಹೇಳಿದರು.
ಮತ್ತೆ ಕಾಂಗ್ರೆಸ್ ವಿರುದ್ಧ ಮೋದಿ ವಾಗ್ದಾಳಿ
ಇದೇ ವೇಳೆ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಪ್ರಧಾನಿ ಮೋದಿ, "ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಸ್ಕಿಲ್ ಡೆವಲಪ್‍ಮೆಂಟ್‍ನ ಕೆಲಸ 40-50ರಷ್ಟು ಬೇರೆ ಬೇರೆ ಸಚಿವಾಯಲಗಳಲ್ಲೂ ಆಗುತ್ತಿತ್ತು. ಇದೇ ರೀತಿ ಎಲ್ಲಾ ಸಚಿವಾಲಯಗಳೂ ತಮ್ಮ ಕೆಲಸ ಮಾಡುತ್ತಿದ್ದರು. ಆದರೆ ಒಬ್ಬರು ಮತ್ತೊಬ್ಬರಿಗೆ ಸಂಪರ್ಕ ಇರಲಿಲ್ಲ. ಪ್ರತಿ ಸಚಿವಾಲಯ ತಮ್ಮ ದೃಷ್ಟಿಯಿಂದ ಬೇರೆ ಬೇರೆ ವಸ್ತುಗಳನ್ನು ನಿಶ್ಚಯ ಮಾಡುತ್ತಿದ್ದವು. ಯಾವ ಇಂಡಸ್ಟ್ರಿಯಲ್ಲಿ ಯಾವ ಸ್ಕಿಲ್‍ಗಳಿಗೆ ಡಿಮ್ಯಾಂಡ್ ಇದೆ. ಯಾವ ರೀತಿಯ ಸ್ಕಿಲ್ ವರ್ಕ್ ಫೋರ್ಸ್ ಡಿಮ್ಯಾಂಡ್ ಇದೆ ಎಂಬುದರ ಬಗ್ಗೆ ಗಮನ ಕೊಡುತ್ತಿರಲಿಲ್ಲ. ನಮ್ಮ ಸರ್ಕಾರ ಕಳೆದ 4 ವರ್ಷಗಳಿಂದ ಸ್ಕಿಲ್ ಡೆವಲ್‍ಮೆಂಟ್‍ನಿಂದ ಹಿಡಿದು ಸಾಲ ಮತ್ತು ಅವರು ಮಾಡಿದ ಪ್ರಾಡಕ್ಟ್‌ಗಾಗಿ ಮಾರುಕಟ್ಟೆ ಮಾಡುವವರಿಗೆ ಒಂದು ಹೊಸ ವೇದಿಕೆ ಸೃಷ್ಟಿ ಮಾಡಿದೆ. ದೇಶದ ಪ್ರತಿ ಜಿಲ್ಲೆಯಲ್ಲಿ ಸ್ಕಿಲ್ ಡೆವಲಪ್‍ಮೆಂಟ್ ಸೆಂಟರ್ ಪ್ರಾರಂಭಿಸಲಾಗುತ್ತಿದೆ ಎಂದು ಹೇಳಿದರು.
"ಯುವಕರಿಗೆ ಕಾರ್ಖಾನೆಗಳಲ್ಲಿಯ ಅವಶ್ಯಕತೆಗಳನ್ನು ನೋಡುತ್ತಾ ಅಲ್ಪಾವಧಿ ಮತ್ತು ದೀರ್ಘಾವಧಿ ತರಬೇತಿ ಕೊಡಲಾಗುತ್ತಿದೆ. ಯುವಕರು ತಮ್ಮ ಸಾಮರ್ಥ್ಯದ ಮೇಲೆ ತಮ್ಮ ಉದ್ಯಮ ಆರಂಭಿಸ ಹುದು. ಇದಕ್ಕಾಗಿ ಅವರಿಗೆ ಬ್ಯಾಂಕ್ ಗ್ಯಾರಂಟಿಯೂ ಇಲ್ಲದೆ ಸಾಲ ನೀಡಲಾಗುತ್ತದೆ ಎಂದರು, ಪ್ರಧಾನ ಮಂತ್ರಿ ಮುದ್ರಣ ಯೋಜನೆಯಡಿಯಲ್ಲಿ ಇಲ್ಲಿವರೆಗೆ  ದೇಶದಲ್ಲಿ ಸುಮಾರು 11 ಕೋಟಿ ಸಾಲ ನೀಡಲಾಗಿದೆ. ಈ ಪೈಕಿ ಕರ್ನಾಟಕದ ಯುವಕರಿಗಾಗಿ 1 ಕೋಟಿ 14 ಲಕ್ಷಕ್ಕಿಂತ ಹೆಚ್ಚು ಸಾಲ ನೀಡಲಾಗಿದೆ. ನನಗೆ ಯುವಶಕ್ತಿ ದೈವೀ ಸಮಾನ. ವಿದ್ಯಾರ್ಥಿ ಭವತೋ, ಯುವ ಶಕ್ತಿ ಭವತೋ ಎಂದು ಹೇಳುವ ಮೂಲಕ ಯುವಶಕ್ತಿ ದೇಶದ ಪ್ರಗತಿಗೆ ಆಧಾರ ಸ್ತಂಭಗಳು ಎಂಬುದುನ್ನು ಯಾರೂ ಮರೆಯಬಾರದು" ಎಂದರು.
ಸಿದ್ದಗಂಗಾಶ್ರೀ ಸೇವೆ ಸ್ಮರಿಸಿದ ಪ್ರಧಾನಿ
ವಿಡಿಯೋ ಕಾನ್ಫರೆನ್ಸ್‌ನಲ್ಲಿ ತಮ್ಮ ಭಾಷಣ ಆರಂಭಿಸುವುದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು, ಸಿದ್ದಗಂಗಾ ಮಠಾಧ್ಯಕ್ಷರಾದ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರಿಗೆ ಪ್ರಣಾಮಗಳು ಎಂದು ಹೇಳಿ, ಶ್ರೀಗಳಿಗೆ ಇನ್ನು ಆರೋಗ್ಯ, ದೀರ್ಘಾಯುಷ್ಯ ಪ್ರಾಪ್ತವಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದರು. ನಾನು ಈ ಹಿಂದೆ ಡಾ. ಶಿವಕುಮಾರ ಸ್ವಾಮೀಜಿಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆಯಲು ಬಂದಿದ್ದೆ. ಆ ದಿನ ಅವಿಸ್ಮರಣೀಯ ಎಂದರು. ರಾಷ್ಟ್ರ ನಿರ್ಮಾಣದಲ್ಲಿ ತೊಡಗಿರುವ ಶ್ರೀಗಳಿಗೆ ಬಸವೇಶ್ವರರು ಹಾಗೂ ಸ್ವಾಮಿ ವಿವೇಕಾನಂದರೇ ಪ್ರೇರಣೆ ಎಂದು ಹೇಳಿದರು.
ಬಳಿಕ ಮಾತನಾಡಿದ ಮೋದಿ, "ಭಾರತ ದೇಶ ಸಮಗ್ರ ವಿಶ್ವದಲ್ಲಿ ಅತ್ಯಂತ ಶ್ರೇಷ್ಠ ಯುವ ರಾಷ್ಟ್ರವಾಗಿದೆ. ಯುವಶಕ್ತಿ ಈ ಅಪಾರ ಶಕ್ತಿ. ತೇಜಸ್ಸು ದೇಶದ ಅದೃಷ್ಟವನ್ನು ಪರಿವರ್ತನೆ ಮಾಡಬಲ್ಲದು. ನಮ್ಮ ಬಳಿ ಇದನ್ನು ತಪ್ಪಿಸುವ ಯಾವುದೇ ವಿಕಲ್ಪ ಇಲ್ಲವೇ ಇಲ್ಲ. ಈ ಯುವಶಕ್ತಿಯ ಅಪಾರ ಬಲವೇ ದೇಶವನ್ನು 21ನೇ ಶತಮಾನದಲ್ಲಿ ನೂತನ ಎತ್ತರಕ್ಕೆ ಕೊಂಡೊಯ್ಯುತ್ತದೆ. ಜೀವನದಲ್ಲಿ ಬದುಕಲು ಮಹತ್ತರ ಪಾತ್ರ ವಹಿಸಿದವರಲ್ಲಿ ಸ್ವಾಮಿ ವಿವೇಕಾನಂದರೂ ಪ್ರಮುಖರು. ಯಾವ ಗೀತೆ ಕಾಯಕ ಮಾಡುವುದನ್ನು ಕಲಿಸುತ್ತದೆಯೋ, ಮುಕ್ತಿ ಮಾರ್ಗವನ್ನು ತೋರಿಸುತ್ತದೆಯೋ ಅದನ್ನು ಉತ್ತಮ ವಿಧದಲ್ಲಿ ತಿಳಿಯಬೇಕೆಂದರೆ ನಮ್ಮ ಬುದ್ಧಿ, ಶರೀರ ಆರೋಗ್ಯವಾಗಿರಬೇಕು, ಶಕ್ತಿಶಾಲಿಯಾಗಿರಬೇಕು ಎಂದರು.
ಈ ಕಾರ್ಯಕ್ರಮದಲ್ಲಿ ಸ್ವಾಮಿ ಗೌತಮಾನಂದ ಜೀ ಮಹಾರಾಜ್, ಸ್ವಾಮಿ ಜಿತಕಾಮಾನಂದ ಜೀ ಮಹಾರಾಜ್, ಸ್ವಾಮಿ ನಿರ್ಭಯಾನಂದ ಸರಸ್ವತಿ, ಸ್ವಾಮಿ ವೀರೇಶಾನಂದ ಸರಸ್ವತಿ, ಜಿಲ್ಲಾಧಿಕಾರಿ ಕೆ.ಪಿ. ಮೋಹನ್‌ರಾಜ್, ಅಡಿಷನಲ್ ಎಸ್ಪಿ ಡಾ. ಶೋಭರಾಣಿ ಸೇರಿದಂತೆ ದೇಶದ ವಿವಿಧೆಡೆ ಇರುವ ರಾಮಕೃಷ್ಣ ಆಶ್ರಮದ ಶ್ರೀಗಳು ಹಾಗೂ ರಾಜ್ಯದ ವಿವಿಧೆಡೆಯಿಂದ ಸಹಸ್ರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com