ಸಿದ್ದರಾಮಯ್ಯ ಸರ್ಕಾರಕ್ಕೂ ರಾಜರ ಆಳ್ವಿಕೆಗೂ ಹೋಲಿಕೆ ಬೇಡ: ಯದುವೀರ್ ಒಡೆಯರ್

ಸಿಎಂ ಸಿದ್ದರಾಮಯ್ಯನವರ ಸರ್ಕಾರಕ್ಕೂ, ಮೈಸೂರು ಮಹಾರಾಜರ ಆಳ್ವಿಕೆಗೂ ಹೋಲಿಕೆ ಮಾಡುವುದು ಸರಿಯಲ್ಲ ಎಂದು ರಾಜವಂಶಸ್ಥ ಯದುವೀರ್ ಒಡೆಯರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮೈಸೂರು: ಸಿಎಂ ಸಿದ್ದರಾಮಯ್ಯನವರ ಸರ್ಕಾರಕ್ಕೂ, ಮೈಸೂರು ಮಹಾರಾಜರ ಆಳ್ವಿಕೆಗೂ ಹೋಲಿಕೆ ಮಾಡುವುದು ಸರಿಯಲ್ಲ ಎಂದು ರಾಜವಂಶಸ್ಥ ಯದುವೀರ್ ಒಡೆಯರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ಖಾಸಗಿ ಶಾಲಾ ಕಾರ್ಯಕ್ರಮದಲ್ಲಿ ಆಯೋಜಿಸಲಾಗಿದ್ದ ಪಲ್ಸ್ ಪೋಲಿಯೋ ಲಸಿಕೆ ಹಾಕುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಯದುವೀರ್ ಒಡೆಯರ್ ಅವರು, 'ಈ ಕಾಲಕ್ಕೂ ಆಗಿನ ಕಾಲಕ್ಕೂ ಬಹಳ ವ್ಯತ್ಯಾಸವಿದೆ. ಸಿದ್ದರಾಮಯ್ಯನವರು 5 ವರ್ಷದಲ್ಲಿ ಏನು ಮಾಡಿದ್ದಾರೆ ಮತ್ತು ಮೈಸೂರು ಮಹಾರಾಜರು ಏನು ಮಾಡಿದ್ದಾರೆ ಎಂಬುದನ್ನು ಜನರು ನಿರ್ಧರಿಸುತ್ತಾರೆ. ರಾಜರ ಆಳ್ವಿಕೆಗೆ ಸಿದ್ದರಾಮಯ್ಯನವರ ಆಡಳಿತಕ್ಕೂ ಹೋಲಿಕೆ ಮಾಡಬೇಡಿ. ರಾಜರ ಕೊಡುಗೆ ಏನು ಎನ್ನುವುದು ರಾಜ್ಯದ ಜನತೆಗೆ ಗೊತ್ತಿದೆ. ಇದನ್ನೆಲ್ಲ ರಾಜ್ಯದ ಜನರು ಖಂಡಿತವಾಗಿಯೂ ಮರೆತಿಲ್ಲ ಎಂದು ಹೇಳಿದರು.
ಇದೇ ವೇಳೆ ರಾಜ್ಯ ಸರ್ಕಾರ ಹೊಸದಾಗಿ ರೂಪಿಸಿರುವ ನಾಡಧ್ವಜವನ್ನು ನೋಡಿ ಸಂತೋಷವಾಯಿತು. ಮೈಸೂರು ರಾಜರ ಲಾಂಛನವನ್ನು ನಾಡಧ್ವಜದಲ್ಲಿ ಬಳಸಲಾಗಿದೆ. ಇದು ಮೈಸೂರು ರಾಜವಂಶಕ್ಕೆ ಸಿಕ್ಕ ದೊಡ್ಡ ಗೌರವವಾಗಿದೆ. ಸ್ವಾತಂತ್ರ್ಯ ಬರುವುದಕ್ಕೂ ಮುನ್ನ ಕನ್ನಡ ಬಾವುಟದಲ್ಲಿ ಚಾಮುಂಡೇಶ್ವರಿಯ ಲಾಂಛನವನ್ನು ಹಾಕಲಾಗಿತ್ತು. ನಂತರದ ದಿನಗಳಲ್ಲಿ ಸಿಂಹದ ಲಾಂಛನವನ್ನು ಅಳವಡಿಸಿಕೊಳ್ಳಲಾಯಿತು. ಪ್ರತ್ಯೇಕ ನಾಡಧ್ವಜದ ವಿಚಾರದಲ್ಲಿ ರಾಜ್ಯ ಸರ್ಕಾರ ಏನು ತೀರ್ಮಾನ ಕೈಗೊಳ್ಳುತದೆಯೋ ಅದನ್ನು ನಾವು ಸ್ವೀಕರಿಸಬೇಕು ಎಂದರು. 
ರಾಜಕೀಯಕ್ಕೆ ಬರುವುದಿಲ್ಲ
ತಮ್ಮ ರಾಜಕೀಯ ಪ್ರವೇಶದ ಕುರಿತು ಮಾತನಾಡಿದ ಯದುವೀರ್ ಅವರು, ನಾನು ರಾಜಕೀಯಕ್ಕೆ ಬರುವುದಿಲ್ಲ, ಈ ಕುರಿತು ಆಸಕ್ತಿಯೂ ಇಲ್ಲ. ನಾನು ಮುಂದಿನ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಗೂ ಸ್ಪರ್ಧೆ ಮಾಡುವುದಿಲ್ಲ. ಹಿಂದಿನ ರಾಜರು ಜನರ ಸಮಸ್ಯೆಗಳನ್ನು ಬಗೆಹರಿಸಲು ಸದಾ ಮುಂದೆ ಬರುತ್ತಿದ್ದರು. ಅದೇ ರೀತಿ ನಾನು ಅವರ ಮಾರ್ಗದಲ್ಲೇ ಹೋಗುತ್ತಿದ್ದೇನೆ. ಜನರಿಗೆ ಏನಾದರೂ ಕೊಡುಗೆ ನೀಡಲು ಇಷ್ಟಪಡುತ್ತೇನೆಯೇ ಹೊರತು ರಾಜಕೀಯಕ್ಕೆ ಹೋಗುವುದಿಲ್ಲ ಹೇಳಿದರು.
ಈ ಹಿಂದೆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ ಅವರು, ‘ರಾಜರ ನಂತರ ಮೈಸೂರು ಅಭಿವೃದ್ಧಿ ನಮ್ಮ ಕಾಲದಲ್ಲೇ ಆಗಿರುವುದು’ ಎಂದು ಹೇಳಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com