
ಬೆಂಗಳೂರು: ಬೆಂಗಳೂರಿನ ಖಾಸಗಿ ನರ್ಸೀಂಗ್ ಕಾಲೇಜ್ ವೊಂದು ನಕಲಿ ಅಂಕಪಟ್ಟಿ ಸೃಷ್ಟಿ, ದಾಖಲೆ ತಯಾರಿಕೆ ಆರೋಪದ ಮೇಲೆ ರಾಜೀವ್ ಗಾಂಧಿ ಆರೋಗ್ಯ ವಿವಿ ತನಿಖಾ ತಂಡದ ವಿರುದ್ಧ ಕಳ್ಳತನ ಕೇಸ್ ದಾಖಲಿಸಿದೆ.
ನಂದಿನಿ ಲೇಔಟ್ ನಲ್ಲಿರುವ ಬೇಥೆಲ್ ನರ್ಸಿಂಗ್ ಕಾಲೇಜ್ ಇರಾನಿ ವಿದ್ಯಾರ್ಥಿಗಳಿಗೆ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇರಾನ್ ರಾಯಬಾರಿಗಳು ದೂರು ದಾಖಲಿಸಿದ್ದಾರೆ.
ಕಾಲೇಜ್ ಪರಿಶೀಲನೆಗೆಗಾಗಿ ತಂಡವೊಂದನ್ನು ವಿಶ್ವವಿದ್ಯಾಲಯ ನೇಮಿಸಿತ್ತು. ವಿಶ್ವವಿದಾಯಲದ ನಿರ್ದೇಶನದ ಆಧಾರದ ಮೇಲೆ ಈ ತಂಡ ಮಾರ್ಚ್ 7 ರಂದು ಕಾಲೇಜಿಗೆ ಭೇಟಿ ನೀಡಿ, ಹಾರ್ಡ್ ಡಿಸ್ಕ್ ಮತ್ತಿತರ ದಾಖಲೆಗಳನ್ನು ವಶ ಪಡಿಸಿಕೊಂಡಿತ್ತು.
ಈ ತಂಡ ಕಾಲೇಜಿಗೆ ಭೇಟಿ ನೀಡಿದ ವೇಳೆ ಕಾಲೇಜಿನ ದಾಖಲೆಗಳ ಜೊತೆಗೆ 1 ಕೋಟಿ ರೂಪಾಯಿ ತೆಗೆದುಕೊಂಡು ಹೋಗಿದ್ದಾರೆ ಎಂದು ಆರೋಪಿಸಿ ಕಾಲೇಜಿನ ಆಡಳಿತ ಮಂಡಳಿ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ.
ಈ ಸಂಬಂಧ ಪ್ರತಿಕ್ರಿಯಿಸಿರುವ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯಗಳ ಕುಲಪತಿ ಡಾ. ರಮೇಶ್ , ಪರಿಶೀಲನೆ ವೇಳೆ ಕಾಲೇಜ್ ನಲ್ಲಿನ ಅಕ್ರಮಗಳ ಪತ್ತೆಯಾಗಿದೆ. ಈ ಸಂಬಂಧ ಕೆಲ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಕಾಲೇಜ್ ವಿರುದ್ಧ ಕ್ರೀಮಿನಲ್ ಪ್ರಕರಣ ದಾಖಲಿಸುವುದಾಗಿ ಅವರು ಹೇಳಿದ್ದಾರೆ.
ಏನಿದು ಪ್ರಕರಣ
ವಿಶ್ವವಿದ್ಯಾಲಯದ ಪ್ರಕಾರ, ಬೆಥೆಲ್ ನರ್ಸಿಂಗ್ ಕಾಲೇಜ್ ನಕಲಿ ಅಂಕಪಟ್ಟಿ, ದಾಖಲೆಗಳನ್ನು ಪೂರೈಸುತ್ತಿತ್ತು. ಈ ಆರೋಪ ಕೇಳಿಬಂದ ಕೂಡಲೇ ಕುಲಪತಿ ದೂರು ದಾಖಲಿಸಿಕೊಂಡು ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ರವಾನಿಸಿದ್ದಾರೆ.
ಬೆಥೆಲ್ ನರ್ಸಿಂಗ್ ಕಾಲೇಜಿನಲ್ಲಿ ಪಿಜಿಯೋಥೆರಸಿ ಕೋರ್ಸಿನಲ್ಲಿ ವ್ಯಾಸಂಗ ಮಾಡುತ್ತಿರುವ ಇರಾನಿ ವಿದ್ಯಾರ್ಥಿಗಳು ದಾಖಲಿಸಿರುವ ದೂರನ್ನು ಇರಾನ್ ರಾಯಬಾರಿ ಅಧಿಕಾರಿಗಳು ಕಳುಹಿಸಿದ್ದಾರೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಆ ವಿದ್ಯಾರ್ಥಿ ದ್ವಿತೀಯ ಪಿಯುಸಿಯಲ್ಲಿ ವಿಜ್ಞಾನ ವಿಷಯ ಅಧ್ಯಯನ ಮಾಡಿಲ್ಲ. ಅದಕ್ಕಾಗಿ ಆ ಕೋರ್ಸಿಗೆ ಆಕೆ ಅನರ್ಹಳಾಗಿದ್ದು, ವಿಶ್ವವಿದ್ಯಾಲಯ ಪರೀಕ್ಷೆ ಪ್ರವೇಶ ಪತ್ರವನ್ನು ನೀಡಿಲ್ಲ. ಇದರಿಂದಾಗಿ ಆ ವಿದ್ಯಾರ್ಥಿನಿ ಇರಾನ್ ರಾಯಬಾರಿಗಳ ಮೂಲಕ ಪ್ರಧಾನ ಕಾರ್ಯದರ್ಶಿಗಳ ಬಳಿ ದೂರು ದಾಖಲಿಸಿದ್ದಾರೆ. ಇದನ್ನು ವಿಶ್ವವಿದ್ಯಾಲಯಕ್ಕೂ ರವಾನಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸರು ಏನಂತಾರೆ
ಸಾಕ್ಷ್ಯಗಳ ಆಧಾರದ ಮೇಲೆ ತನಿಖೆ ನಡೆಸಲಾಗುತ್ತಿದೆ. ರಾಜೀವ್ ಗಾಂಧಿ ಆರೋಗ್ಯ ವಿವಿ ಪರಿಶೀಲನೆ ಆಧಾರದ ಮೇಲೆ ಕಾಲೇಜಿನ ಮೇಲೆ ಮತ್ತೊಂದು ಪ್ರಕರಣ ದಾಖಲಿಸಿರುವುದಾಗಿ ತಿಳಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಉತ್ತರ ವಿಭಾಗದ ಎಸಿಪಿ ಚೇತನ್ ರಾಥೋರ್ ತಿಳಿಸಿದ್ದಾರೆ.
Advertisement