ಅಲ್ಪಸಂಖ್ಯಾತ ಸ್ಥಾನಮಾನ ಬೇಡಿಕೆ ಪರಿಗಣಿಸಿರುವ ಅಧಿಕಾರ ಸರ್ಕಾರಕ್ಕಿದೆ: ಕೋರ್ಟ್'ಗೆ ಸರ್ಕಾರದಿಂದ ಪ್ರಮಾಣಪತ್ರ

ಕರ್ನಾಟಕ ಸರ್ಕಾರದ ಅಲ್ಪಸಂಖ್ಯಾತ ಆಯೋಗದ ಅಧಿನಿಯಮದ ಅಡಿಯಲ್ಲಿ ಅಲ್ಪಸಂಖ್ಯಾತ ಸಮುದಾಯವೆಂದು ಪರಿಗಣಿಸಲು ಹಾಗೂ ಸಮುದಾಯಗಳ ಅಲ್ಪಸಂಖ್ಯಾತ ಬೇಡಿಕೆಗಳನ್ನು ಪರಿಗಣಿಸುವ ಅಧಿಕಾರ ಸರ್ಕಾರಕ್ಕಿದೆ ಎಂದು ಹೈಕೋರ್ಟ್'ಗೆ ರಾಜ್ಯ ಸರ್ಕಾರ ತಿಳಿಸಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಕರ್ನಾಟಕ ಸರ್ಕಾರದ ಅಲ್ಪಸಂಖ್ಯಾತ ಆಯೋಗದ ಅಧಿನಿಯಮದ ಅಡಿಯಲ್ಲಿ ಅಲ್ಪಸಂಖ್ಯಾತ ಸಮುದಾಯವೆಂದು ಪರಿಗಣಿಸಲು ಹಾಗೂ ಸಮುದಾಯಗಳ ಅಲ್ಪಸಂಖ್ಯಾತ ಬೇಡಿಕೆಗಳನ್ನು ಪರಿಗಣಿಸುವ ಅಧಿಕಾರ ಸರ್ಕಾರಕ್ಕಿದೆ ಎಂದು ಹೈಕೋರ್ಟ್'ಗೆ ರಾಜ್ಯ ಸರ್ಕಾರ ತಿಳಿಸಿದೆ. 
ರಾಜ್ಯ ಅಲ್ಪಸಂಖ್ಯಾತ ಆಯೋಗವು ಲಿಂಗಾಯತ ಸ್ವತಂತ್ರ ಧರ್ಮ ಬೇಡಿಕೆ ಬಗ್ಗೆ ಪರಿಶೀಲನೆ ನಡೆಸಲು ಈ ಹಿಂದೆ ತಜ್ಞರ ಸಮಿತಿಯನ್ನು ನೇಮಕ ಮಾಡಿತ್ತು. ಸಮಿತಿ ನೇಮಕ ಮಾಡಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ನಾಲ್ಕು ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಹಾಗೂ ನ್ಯಾಯಮೂರ್ತಿ ಬಿ.ಎಂ.ಶ್ಯಾಮ್ ಪ್ರಸಾದ್ ಅವರಿದ್ದ ವಿಭಾಗೀಯ ಪೀಠ ನಿನ್ನೆ ವಿಚಾರಣೆ ನಡೆಸಿತು. 
ವಿಚಾರಣೆ ವೇಳೆ ನ್ಯಾಯಪೀಠಕ್ಕೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಕ್ರಂ ಭಾಷಾ ಅವರು ಪ್ರಮಾಣಪತ್ರ ಸಲ್ಲಿಸಿದರು.
ಪ್ರಮಾಣಪತ್ರದಲ್ಲಿ ಲಿಂಗಾಯತ ಸಮುದಾಯಕ್ಕೆ ಅಲ್ಪಸಂಖ್ಯಾತರ ಸ್ಥಾನಮಾನ ನೀಡುವ ಸಂಬಂಧ ನ್ಯಾ.ನಾಗಮೋಹನ್ ದಾಸ್ ಸಮಿತಿ ಸಲ್ಲಿಸಿರುವ ವರದಿ ಸರ್ಕಾರದ ಪರಿಗಣನೆಯಲ್ಲಿದೆ. ಈ ಬಗ್ಗೆ ಇನ್ನು ಯಾವುದೇ ರೀತಿಯ ತೀರ್ಮಾನಗಳನ್ನು ಕೈಗೊಂಡಿಲ್ಲ. ಲಿಂಗಾಯತ ಸಮುದಾಯ ಸಲ್ಲಿಸಿದ ಮನವಿ ಬಗ್ಗೆ ಪರಿಶೀಲಿಸಲು ಆಯೋಗವು ತಜ್ಞರ ಸಮಿತಿಯನ್ನು ರಚನೆ ಮಾಡಿದೆ. ಈ ಸಮಿತಿ ರಚನೆಯಿಂದ ಅರ್ಜಿ ದಾರರ ಯಾವುದೇ ಹಕ್ಕು ಚ್ಯುತಿಯಾಗಿಲ್ಲ ಹೀಗಾಗಿ ಅರ್ಜಿ ವಜಾಗೊಳಿಸಬೇಕೆಂದು ಕೋರಿದರು. 
ವಿಚಾರಣೆ ವೇಳೆ ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲ ಅಸೋಕ ಹಾರನಹಳ್ಳಿ ಅವರು, ಪ್ರಮಾಣಪತ್ರದಲ್ಲಿ ಲಿಂಗಾಯತರು ಇಷ್ಟಲಿಂಗ ಪೂಜಿಸುತ್ತಾರೆ. ವೇದಗಳನ್ನು ಅನುಸರಿಸುವುದಿಲ್ಲ ಎಂದೆಲ್ಲಾ ಬರೆದಿದ್ದಾರೆ. ಅಕ್ರಂ ಬಾಷಾ ಅವರು ಅಲ್ಪಸಂಖ್ಯಾತ ಸಮುದಾಯದವರು. ಅಂತಹವುರ ಲಿಂಗಾಯತರು ಪೂಜಾ ವಿಧಾನಗಳ ಬಗ್ಗೆ ಹೇಗೆ ಬರೆಯಲು ಸಾಧ್ಯ? ಅವರಿಗೆ ಹಿಂದೂ ಧರ್ಮದ ಬಗ್ಗೆ ಎಷ್ಟು ತಿಳಿದಿದೆ? ಎಂದು ಪ್ರಶ್ನಿಸಿದರು. 
ಬಳಿಕ ನ್ಯಾಯಾಧೀಶರು ಎಲ್ಲಾ ಪ್ರತಿವಾದಿಗಳು ತಮ್ಮ ಆಕ್ಷೇಪಣೆ ಸಲ್ಲಿಸಲಿ. ತದನಂತರ ವಿಚಾರಣೆ ನಡೆಸೋಣ ಎಂದು ತಿಳಿಸಿ, ಏ.3ಕ್ಕೆ ವಿಚಾರಣೆಯನ್ನು ಮುಂದೂಡಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com