ಬೆಂಗಳೂರು: ಮದುವೆಯಾಗುವುದಾಗಿ 48.86 ಲಕ್ಷ ರು. ವಂಚಿಸಿದ ಜೋರ್ಡಾನ್ ವೈದ್ಯ

: ಪ್ರಸಿದ್ದ ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ ಮೂಲಕ 36 ವರ್ಷದ ಮಹಿಳೆಗೆ ಆಪ್ತನಾದ ವ್ಯಕ್ತಿಯೊಬ್ಬ 48.86 ಲಕ್ಷವನ್ನು ತನ್ನ ಖಾತೆಗೆ ಹಾಕಿಸಿಕೊಂಡು ವಂಚಿಸಿದ್ದಾನೆ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಪ್ರಸಿದ್ದ ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ ಮೂಲಕ 36 ವರ್ಷದ ಮಹಿಳೆಗೆ ಆಪ್ತನಾದ ವ್ಯಕ್ತಿಯೊಬ್ಬ  48.86 ಲಕ್ಷವನ್ನು ತನ್ನ ಖಾತೆಗೆ ಹಾಕಿಸಿಕೊಂಡು ವಂಚಿಸಿದ್ದಾನೆ.
ಮೋಸ ಹೋದ ಮಹಿಳೆ ಮಾರ್ಚ್ 19ರಂದು ಸಿಐಡಿ ಕಚೇರಿಗೆ ತೆರಳಿ ದೂರು ಕೊಟ್ಟಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಸೈಬರ್ ಕ್ರೈಂ ಪೊಲೀಸರು, ಮೊಬೈಲ್ ಸಂಖ್ಯೆ ಹಾಗೂ ಬ್ಯಾಂಕ್ ಖಾತೆಗಳ ವಿವರ ಆಧರಿಸಿ ವಂಚಕನ ಪತ್ತೆಗೆ ಬಲೆ ಬೀಸಿದ್ದಾರೆ.
ಸರ್ಕಾರಿ ಉದ್ಯೋಗದಲ್ಲಿರುವ ಆ ಮಹಿಳೆ, ನಗರದ ಅಪಾರ್ಟ್‌ಮೆಂಟ್‌ ಸಮುಚ್ಚಯವೊಂದರಲ್ಲಿ ನೆಲೆಸಿದ್ದಾರೆ. ಇತ್ತೀಚೆಗೆ ಮದುವೆಯಾಗಲು ನಿರ್ಧರಿಸಿದ್ದ ಅವರು, ವೆಬ್‌ಸೈಟ್‌ನಲ್ಲಿ ಪ್ರೊಫೈಲ್ ತೆರೆದು ಸೂಕ್ತ ವರನ ಹುಡುಕಾಟದಲ್ಲಿದ್ದರು. ಈ ವೇಳೆ ಅವರಿಗೆ ಡಾ.ರಾಜೇಶ್ ಅಮಿಶ್ ಗಣೇಶ್ ಹೆಸರಿನ ಪ್ರೊಫೈಲ್ ಕಣ್ಣಿಗೆ ಬಿದ್ದಿತ್ತು. ರಿಕ್ವೆಸ್ಟ್ ಕಳುಹಿಸಿದ್ದರು. ಕೂಡಲೇ ಆ ಕೋರಿಕೆಯನ್ನು ಒಪ್ಪಿಕೊಂಡ ವಂಚಕ, ತನ್ನ ಮೊಬೈಲ್ ಸಂಖ್ಯೆ ಹಾಗೂ ಇ–ಮೇಲ್ ವಿಳಾಸವನ್ನೂ ನೀಡಿದ್ದ. ನಂತರ ಇಬ್ಬರು ಫೋನ್ ಹಾಗೂ ವಾಟ್ಸಾಪ್ ನಲ್ಲಿ ಚಾಟ್ ಮಾಡಿದ್ದರು, 
ಜೋರ್ಡಾನ್‌ನಲ್ಲಿ ವೈದ್ಯನಾಗಿದ್ದೇನೆ. ನನಗೆ ಹೊಂದಿಕೊಂಡು ಹೋಗುವಂತಹ ವಧು ಸಿಗಲಿಲ್ಲ ಎಂಬ ಕಾರಣದಿಂದ ಇನ್ನೂ ಮದುವೆ ಆಗಿಲ್ಲ. ನಿಮ್ಮ ಪ್ರೊಫೈಲ್ ನನಗೆ ಇಷ್ಟವಾಯಿತು’ ಎಂದು ಹೇಳಿದ್ದ. ನಯವಾದ ಮಾತುಗಳನ್ನಾಡಿ ಮಹಿಳೆಯ ವಿಶ್ವಾಸ ಗಿಟ್ಟಿಸಿಕೊಂಡ ಆರೋಪಿ, ನಾನು ಜೋರ್ಡಾನ್ ನಿಂದ ಭಾರತಕ್ಕೆ ಬರಲು ಇಚ್ಚಿಸಿದ್ದೇನೆ ಹೀಗಾಗಿ ಹಣಕಾಸಿನ ಸಹಾಯ ಮಾಡುವಂತೆ ಕೇಳಿದ್ದಾನೆ. 
ಆತನ ಸಂಚನ್ನು ಅರಿಯದ  ಮಹಿಳೆ, ಆರೋಪಿ ನೀಡಿದ್ದ ನಾಲ್ಕು ಬ್ಯಾಂಕ್‌ ಖಾತೆಗಳಿಗೆ ಹಂತ ಹಂತವಾಗಿ 48.86 ಲಕ್ಷ ಹಾಕಿದ್ದರು. ಹಣ ಜಮೆ ಆಗುತ್ತಿದ್ದಂತೆಯೇ ಆರೋಪಿಯ ಮಹಿಳೆಯನ್ನು  ಅವಾಯ್ಡ್ ಮಾಡಿದ್ದಾನೆ, ಅದಾದ ನಂತರ ಮಹಿಳೆ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ, ಅಕ್ಟೋಬರ್ 23 2017 ರಿಂದ ನವೆಂಬರ್ 30 2017 ವರೆಗೆ ಮಹಿಳೆ ರಾಜೇಶ್ ಜೊತೆ ಸಂಪರ್ಕದಲ್ಲಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಇನ್ನೂ ಆತನನ್ನು ಪತ್ತೆ ಹಚ್ಚಲು ಪೊಲೀಸರು ಬಲೆ ಬೀಸಿದ್ದಾರೆ, ಆರೋಪಿ ಈ ಹಿಂದೆಯೂ ಹಲವು ಮಹಿಳೆಯರಿಗೆ ವಂಚಿಸಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com