ಬೆಂಗಳೂರಿನಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ಆಲಿಕಲ್ಲು ಸಹಿತ ಮಳೆ ಸುರಿಯುವ ಸಾಧ್ಯತೆ

ಇತ್ತೀಚೆಗೆ ಹಠಾತ್ತನೆ ಮೋಡ ಮುಸುಕಿ, ಗುಡುಗು, ಮಿಂಚಿನೊಂದಿಗೆ ಬೆಳಗ್ಗೆ ಅಥವಾ ಸಾಯಂಕಾಲ ...
ಜಯನಗರ 4ನೇ ಬ್ಲಾಕ್ ನಲ್ಲಿ ಧರೆಗುರುಳಿದ ಮರ
ಜಯನಗರ 4ನೇ ಬ್ಲಾಕ್ ನಲ್ಲಿ ಧರೆಗುರುಳಿದ ಮರ

ಬೆಂಗಳೂರು: ಇತ್ತೀಚೆಗೆ ಹಠಾತ್ತನೆ ಮೋಡ ಮುಸುಕಿ, ಗುಡುಗು, ಮಿಂಚಿನೊಂದಿಗೆ ಬೆಳಗ್ಗೆ ಅಥವಾ ಸಾಯಂಕಾಲ ಮಳೆ ಸುರಿಯುವುದು ನಗರದಲ್ಲಿ ಕಂಡುಬರುತ್ತಿದೆ. ಮುಂದಿನ ದಿನಗಳಲ್ಲಿ ಸಹ ಗುಡುಗು ಸಹಿತ ಆಲಿಕಲ್ಲು ಬಿರುಗಾಳಿ ಮಳೆ ಸುರಿಯುವುದನ್ನು ಎದುರಿಸಲು ಸಜ್ಜಾಗಿರಿ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಗುಡುಗು ಆಲಿಕಲ್ಲಿನ ಮಳೆ ಬೆಂಗಳೂರು ನಗರದಲ್ಲಿ ಈ ವರ್ಷ ಕಾಣುತ್ತಿದ್ದು ಬಿಸಿಲಿನ ಬೇಗೆಯಿಂದ ತತ್ತರಿಸಿದವರಿಗೆ ಉಲ್ಲಾಸ ನೀಡುತ್ತದೆ. ಆದರೆ ಪದೇ ಪದೇ ಆಲಿಕಲ್ಲು ಬಿರುಗಾಳಿ ಮಳೆ ಸುರಿಯುವುದರಿಂದ ಹಾನಿ ಸಹ ಉಂಟಾಗಬಹುದು ಎಂದು ಹವಾಮಾನ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಬಿರುಗಾಳಿ ಸಹಿತ ಆಲಿಕಲ್ಲು ಗುಡುಗು ಮಳೆಗೆ ನಗರದಲ್ಲಿ ಇದುವರೆಗೆ ಅಷ್ಟೊಂದು ಭಾರೀ ಹಾನಿಯಾದ ಬಗ್ಗೆ ವರದಿ ಬಂದಿಲ್ಲ. ಕೆಲವು ಕಡೆ ಇಟ್ಟಿಗೆಗಳು, ಗೋಡೆಗಳು ಕುಸಿದ ಫೋಟೋ, ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.

ಬೆಂಗಳೂರಿನ ಜಿಕೆವಿಕೆಯ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಅಗ್ರೊಮೆಟಿರೋಲಜಿ ಕೇಂದ್ರದ ಮುಖ್ಯಸ್ಥ ಪ್ರೊ.ಡಾ. ಎಂ.ಬಿ.ರಾಜೇಗೌಡ ಮಾತನಾಡಿ ಮುಂಗಾರು ಪೂರ್ವ ಮಳೆ ಬೆಂಗಳೂರಿನಲ್ಲಿ ಈಗ ಸುರಿಯುತ್ತಿದೆ. ವಾತಾವರಣದಲ್ಲಿನ ತಾಪಮಾನ ಏರಿಕೆಯಿಂದ ಸಾಂದ್ರತೆಯನ್ನು ಹೆಚ್ಚಿಸಿ ಮೋಡವನ್ನು ಸೃಷ್ಟಿ ಮಾಡಿದೆ. ತಾಪಮಾನದ ಸಂಗ್ರಹ ಮತ್ತು ತಾಪಮಾನದ ಏರಿಕೆಯಿಂದ ವಾತಾವರಣದಲ್ಲಿ ಒತ್ತಡ ಕಡಿಮೆಯಾಗಿ ಒಂದು ಪ್ರದೇಶಕ್ಕೆ ನಿರ್ದಿಷ್ಟವಾಗಿ ಒಂದು ಸಣ್ಣ ಚಂಡಮಾರುತ ತರಹದ ಸ್ಥಿತಿಯನ್ನು ಉಂಟುಮಾಡುತ್ತದೆ ಎಂದು ಹೇಳಿದರು.

ವಾಹನಗಳಿಂದ ಹೊರಸೂಸುವ ಹೊಗೆ, ಧೂಳಿನ ಸಂಗ್ರಹ, ಕ್ಲೋರೊಫ್ಲೋರೊಕಾರ್ಬನ್ ಗಳು (CFC ಗಳು) ಮತ್ತು ಹೈಡ್ರೋಕ್ಲೋರೊಫ್ಲೋರೋಕಾರ್ಬನ್ ಗಳು (HCFC ಗಳು) ತಾಪಮಾನ ಇಳಿಕೆಯಿಂದ ವಾತಾವರಣದಲ್ಲಿ ಮೋಡಕವಿಯುತ್ತದೆ. ಇದರಿಂದ ಮಧ್ಯಾಹ್ನ 2 ಗಂಟೆಯ ನಂತರ ತಾಪಮಾನದಲ್ಲಿ ಇಳಿಕೆಯಾಗಿ ಮೋಡ ಕವಿದು ಮಳೆ ಸುರಿಯುತ್ತದೆ. ಈ ಬಿರುಗಾಳಿಸಹಿತ ಆಲಿಕಲ್ಲು ಮಳೆ ನಗರ ಪ್ರದೇಶಗಳಲ್ಲಿ ಗ್ರಾಮೀಣ ಭಾಗಗಳಿಂದ ಹೆಚ್ಚಾಗಿದೆ.
ನಿನ್ನೆಯ ಮಳೆಗೆ ನಗರದ ಅಲ್ಲಲ್ಲಿ ಸಂಚಾರ ದಟ್ಟಣೆಯುಂಟಾಗಿತ್ತು. ಬಿಬಿಎಂಪಿ ದೂರು ಸಲ್ಲಿಕೆ ಕೇಂದ್ರಕ್ಕೆ 35 ದೂರುಗಳು ಬಂದಿವೆ. ಮರದ ಕೊಂಬೆಗಳು ಮುರಿದು ಬಿದ್ದ 15ಕ್ಕೂ ಹೆಚ್ಚು ದೂರುಗಳು ಬಂದಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com