

ಬೆಂಗಳೂರು : ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಜಾಲಹಳ್ಳಿ ಅಪಾರ್ಟ್ ಮೆಂಟ್ ನಲ್ಲಿ ಮತದಾರರ ಗುರುತಿನ ಚೀಟಿ ಸಂಗ್ರಹ ಪ್ರಕರಣ ಸಂಬಂಧ ಬಿಜೆಪಿ ಆರೋಪವನ್ನು ಕಾಂಗ್ರೆಸ್ ತಳ್ಳಿಹಾಕಿದೆ.
ಚುನಾವಣೆಯಲ್ಲಿ ನಿಶ್ಚಿತ ಸೋಲಿನ ಭೀತಿಗೆ ಸಿಲುಕಿರುವ ಬಿಜೆಪಿಯು ಜಾಲಹಳ್ಳಿಯ ಅಪಾರ್ಟ್ ಮೆಂಟ್ ನಲ್ಲಿ ಮತದಾರರ ಚೀಟಿ ವಶ ಎಂಬ ನಾಟಕವನ್ನು ಸೃಷ್ಟಿಸಿ ರಾಜ್ಯದ ಜನತೆಯ ಗಮನ ಬೇರೆಡೆ ಸೆಳೆಯಲು ಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲಾ ಆರೋಪಿಸಿದ್ದಾರೆ.
ತಡರಾತ್ರಿ 1 ರ ಸುಮಾರಿಗೆ ಸುದ್ದಿಗೋಷ್ಠಿ ನಡೆಸಿದ ಅವರು, ಇಡೀ ಪ್ರಕರಣ ಬಿಜೆಪಿಯ ಸೃಷ್ಟಿ ಎಂದು ಬಣ್ಣಿಸಿದರು ಹಾಗೂ ತಮ್ಮ ಈ ವಾದಕ್ಕೆ ಎರಡು ಅಂಶಗಳನ್ನು ಮಂಡಿಸಿದರು.
ಜಾಲಹಳ್ಳಿಯ ಎಸ್ ಎಲ್ ವಿ ಪಾರ್ಕ್ ಅಪಾರ್ಟ್ ಮೆಂಟ್ ನ ಫ್ಲಾಟ್ ನಂ-155ರಲ್ಲಿ ಈ ಮತದಾರರ ಗುರುತಿನ ಚೀಟಿ ಪತ್ತೆಯಾಗಿದೆ. ಈ ಫ್ಲಾಟ್ ಬಿಜೆಪಿ ನಾಯಕಿ ಹಾಗೂ ಬಿಬಿಎಂಪಿ ಸದಸ್ಯೆ ಮಂಜಳಾ ನಂಜಾಮರಿ ಅವರಿಗೆ ಸೇರಿದ್ದು, ಈ ಫ್ಲಾಟ್ ನ್ನು ಅವರು ತಮ್ಮ ದತ್ತು ಪುತ್ರ ರಾಕೇಶ್ ಗೆ ಬಾಡಿಗೆಗೆ ನೀಡಿದ್ದಾರೆ. ರಾಕೇಶ್ 2015ರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕಾಂಗ್ರೆಸ್ ವಿರುದ್ಧ ಸೋತಿದ್ದರು ಎಂದು ತಿಳಿಸಿದರು.
ಇನ್ನೂ ಈ ಅಪಾರ್ಟ್ ಮೆಂಟ್ ಮೇಲೆ ಮೊದಲು ದಾಳಿ ಮಾಡಿದ್ದು, ಚುನಾವಣಾ ಆಯೋಗ ಅಲ್ಲ ಅಥವಾ ಪೊಲೀಸರು ಅಲ್ಲ. ಬದಲಾಗಿ ಬಿಜೆಪಿ ಟೋಪಿ ತೊಟ್ಟ ಆ ಪಕ್ಷದ ಕಾರ್ಯಕರ್ತರು, ಅಂದರೆ ಬಿಜೆಪಿ ನಾಯಕಿಗೆ ಸೇರಿದ ಫ್ಲಾಟ್ ನಲ್ಲಿ ಮತದಾರರ ಚೀಟಿ ಇರುತ್ತದೆ. ಅದಕ್ಕೆ ಬಿಜೆಪಿಯ ಕಾರ್ಯಕರ್ತರೇ ದಾಳಿ ಮಾಡಿ ಚೀಟಿಗಳನ್ನು ವಶಪಡಿಸಿಕೊಂಡು ಚುನಾವಣಾ ಆಯೋಗಕ್ಕೆ ನೀಡುತ್ತಾರೆ.
ಆದಾಗ್ಯೂ, ಬಿಜೆಪಿ ನಾಯಕರಾದ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್, ಅನಂತ್ ಕುಮಾರ್, ಸದಾನಂದಗೌಡ ಮೊದಲಾದವರು, ಇಡೀ ಪ್ರಕರಣವನ್ನು ರಾಜರಾಜೇಶ್ವರಿ ನಗರ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಹೆಗಲಿಗೆ ಹೊರಿಸುವ ಹಾಗೂ ಕಾಂಗ್ರೆಸ್ ಪಕ್ಷವೇ ಅಕ್ರಮ ನಡೆಸಿದೆ ಎಂದು ಬಿಂಬಿಸುವ ಪ್ರಯತ್ನವನ್ನು ನಡೆಸಿದ್ದಾರೆ ಎಂದು ಆರೋಪಿಸಿದರು.
ಕೂಡಲೇ ಫ್ಲಾಟ್ ಮಾಲೀಕರಾದ ಮಂಜುಳಾ ನಂಜಾಮರಿ ಹಾಗೂ ರಾಕೇಶ್ ಮೇಲೆ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕೆಂದು ರಣದೀಪ್ ಸಿಂಗ್ ಸುರ್ಜೆವಾಲಾ ಒತ್ತಾಯಿಸಿದರು.
Advertisement