'ನೋಟಾ'ಗಿಲ್ಲ ಕಿಮ್ಮತ್ತು, ಮತದಾನ ಮಾಡಲು ಕೆಲ ಬೆಂಗಳೂರಿಗರ ನಿರ್ಲಕ್ಷ್ಯ

ಹಾಲಿ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಶೇ.100ರಷ್ಟು ಮತದಾನಕ್ಕೆ ಚುನಾವಣಾ ಆಯೋಗ ಹರಸಾಹಸ ಪಡುತ್ತಿದ್ದರೆ, ಇತ್ತೆ ಕೆಲ ಬೆಂಗಳೂರಿಗರು ಮಾತ್ರ ಮತದಾನಕ್ಕೆ ಮತ್ತೆ ನಿರ್ಲಕ್ಷ್ಯ ತೋರುತ್ತಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಹಾಲಿ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಶೇ.100ರಷ್ಟು ಮತದಾನಕ್ಕೆ ಚುನಾವಣಾ ಆಯೋಗ ಹರಸಾಹಸ ಪಡುತ್ತಿದ್ದರೆ, ಇತ್ತೆ ಕೆಲ ಬೆಂಗಳೂರಿಗರು ಮಾತ್ರ ಮತದಾನಕ್ಕೆ ಮತ್ತೆ ನಿರ್ಲಕ್ಷ್ಯ ತೋರುತ್ತಿದ್ದಾರೆ.
ಪ್ರಮುಖವಾಗಿ ಈ ಬಾರಿ ಮತದಾನ ದಿನಾಂಕ 2ನೇ ಶನಿವಾರದಂದು ಅಂದರೆ ಮೇ 12ರಂದು ನಿಗದಿಯಾಗಿದ್ದು, ರಜೆಯ ಹೊರತಾಗಿಯೂ ತಾವು ಮತದಾನ ಮಾಡುವುದಿಲ್ಲ ಎಂದು ಕೆಲ ಬೆಂಗಳೂರಿಗರು ಪಟ್ಟು ಹಿಡಿದಿದ್ದಾರೆ. ರಜೆ ಎಂಬುದು ಮತದಾನ ನಿರಾಕರಣೆಗೆ ಪ್ರಮುಖ ಕಾರಣವಲ್ಲವಾದರೂ, ಚುನಾವಣಾ ಆಯೋಗದ ನಿರ್ಧಾರ ಕೂಡ ತಾವು ಮತದಾನದಿಂದ ದೂರ ಉಳಿಯಲು ಕಾರಣ ಎಂದು ಹೇಳುತ್ತಿದ್ದಾರೆ.
ಈ ಹಿಂದೆ ಮತದಾನದಲ್ಲಿ ನೋಟಾ ಪರಿಚಯಿಸಿ ಚುನಾವಣಾ ಆಯೋಗ ಪ್ರಮುಖ ಹೆಜ್ಜೆಯನ್ನಿರಿಸಿತ್ತು. ಆದರೆ ಹಾಲಿ ಚುನಾವಣೆಯಲ್ಲಿ ಅಭ್ಯರ್ಥಿಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ನೋಟಾಗೆ ಮತ ಬಿದ್ದರೂ, ಹೆಚ್ಚು ಮತಗಳಿಸಿರುವ ಅಭ್ಯರ್ಥಿ ಗೆಲ್ಲುತ್ತಾನೆ ಎಂದು ಹೇಳುವ ಮೂಲಕ ನೋಟಾಗೆ ಮಹತ್ವವೇ ಇಲ್ಲದಂತೆ ಮಾಡಿದೆ ಎಂಬುದು ಮತದಾರರ ಅಸಮಾಧಾನಕ್ಕೆ ಕಾರಣ.
ಬಹುರಾಷ್ಟ್ರೀಯ ಕಂಪನಿಯ ಉದ್ಯೋಗಿ ಸಾವಿತ್ರಿ ರಂಗರಾಜನ್ ಅವರು ಮಾತನಾಡಿದ್ದು, ನಾನಿರುವ ವಿಧಾನಸಭಾ ಕ್ಷೇತ್ರದಲ್ಲಿ ಯಾವ ಪಕ್ಷದ ಅಭ್ಯರ್ಥಿಯೂ ಸರಿಯಿಲ್ಲ. ಹೀಗಾಗಿ ನಾನು ಯಾರಿಗೂ ಮತನೀಡುವುದಿಲ್ಲ. ನೋಟಾ ಅವಕಾಶವಿದೆಯಾದರೂ, ಅದಕ್ಕೆ ಹೆಚ್ಚು ಮತ ನೀಡಿದರೂ ಪ್ರಯೋಜನವಾಗಲ್ಲ. ಎರಡನೇ ಸ್ಥಾನದಲ್ಲಿರುವ ಅಭ್ಯರ್ಥಿಗೆಲ್ಲುತ್ತಾನೆ. ಹೀಗಿರುವಾಗ ನಾನೇಕೆ ನನ್ನ ಸಮಯವನ್ನು ಮತದಾನಕ್ಕೆ ಮೀಸಲಿಟ್ಟು, ಮತಕ್ಷೇತ್ರಕ್ಕೆ ಹೋಗಿ ಮತದಾನ ಮಾಡಬೇಕು? ಹೀಗಾಗಿ ನಾನು ಮತದಾನದಿಂದ ದೂರ ಉಳಿಯುತ್ತೇನೆ ಎಂದು ಹೇಳಿದ್ದಾರೆ.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಕೇಂದ್ರ ಸರ್ಕಾರಿ ಉದ್ಯೋಗಿ ಬಿಜಿ ರೇಣುಕಾ ಅವರು, ನಾನು ಕಳೆದ ಒಂದು ವರ್ಷದಿಂದ ಬೆಂಗಳೂರಿನಲ್ಲಿದ್ದೇನೆ. ಮುಂದಿನ ವರ್ಷ ಬಿಲಾಸ್ ಪುರಕ್ಕೆ ವರ್ಗಾವಣೆಯಾಗುತ್ತೇನೆ. ಹೀಗಿರುವಾಗ ನಾನು ಇಲ್ಲಿ ವೋಟರ್ ಐಡಿ ಮಾಡಿಸಿಕೊಂಡು ಮತದಾನ ಮಾಡಿದರೆ, ಮುಂದಿನ ವರ್ಷ ಬಿಲಾಸ್ ಪುರಕ್ಕೆ ಹೋಗಿ ನನ್ನ ಮತದಾರ ಗುರುತಿನ ಚೀಟಿಯಲ್ಲಿನ ಬದಲಾವಣೆಗೆ ಅಲೆಯಬೇಕು. ಇಲ್ಲಿ ಮತದಾನ ಮಾಡುವುದರಿಂದ ನನಗೆ ಯಾವುದೇ ರೀತಿಯ ಬದಲಾವಣೆ ಇರುವುದಿಲ್ಲ. ನಾನು ಇಲ್ಲಿನ ಫಲಾನುಭವಿಯೂ ಅಲ್ಲ. ಹೀಗಾಗಿ ನಾನು ಇಲ್ಲಿನ ಮತದಾರ ಗುರುತಿನ ಚೀಟಿ ಹೊಂದಿಲ್ಲ ಎಂದು ಹೇಳಿದ್ದಾರೆ.
ಮತದಾರರ ಈ ಮನಃಸ್ಥಿತಿ ಕುರಿತು ಮಾತನಾಡಿರುವ ರಾಜಕೀಯ ವಿಶ್ಲೇಷಕ ಎನ್ ಕೆ ಮೋಹನ್ ರಾಮ್ ಅವರು, ಮತದಾರರ ಈ ನಡವಳಿಕೆಗೆ ಪ್ರಭಾವಿಗಳು ಮತ್ತು ಶ್ರೀಮಂತರನ್ನು ದೂಷಿಸಬೇಕು ಎಂದು ಹೇಳಿದ್ದಾರೆ. ' ನಿಮ್ಮ ಬಳಿ ಸಾಕಷ್ಟು ಪ್ರಮಾಣದಲ್ಲಿ ದುಡ್ಡಿದ್ದರೆ, ಅಥವಾ ನೀವು ಪ್ರಭಾವಿಗಳಾಗಿದ್ದರೆ ನಿಮ್ಮ ಸಮಸ್ಯೆ ಪರಿಹರಿಸಲು ರಾಜಕಾರಣಿಗಳೇ ನಿಮ್ಮ ಮನೆಗೆ ಬರುತ್ತಾರೆ. ಅದೇ ನೀವು ಬಡವರಾಗಿದ್ದರೆ ಸಮಸ್ಯೆ ನೀಗಿಸಿಕೊಳ್ಳಲು ಸರ್ಕಾರಿ ಕಚೇರಿ, ಸ್ಥಳೀಯ ರಾಜಕಾರಣಿಗಳ ಮನೆಗೆ ಅಲೆದಾಡುತ್ತಿರಬೇಕು. ಉದಾಹರಣೆಗೆ ಹೇಳುತ್ತೇನೆ, ಮಲ್ಲೇಶ್ವರ ದಂತಹ ಪ್ರತಿಷ್ಠಿತ ಪ್ರದೇಶದಲ್ಲಿ ಬಹುತೇಕ ಎಲ್ಲರೂ ಶ್ರೀಮಂತರೆ.. ಇಲ್ಲಿನ ಬಹುತೇಕ ನಿವಾಸಿಗಳು ಶ್ರೀಮಂತರಾಗಿದ್ದು, ಅವರ ಮಕ್ಕಳೆಲ್ಲಾ ವಿದೇಶಗಳಲ್ಲಿ ನೆಲೆಸಿದ್ದಾರೆ. ಅವರೆಲ್ಲರೂ ತಮ್ಮ ತಮ್ಮ ಉದ್ಯಮಗಳು, ಷೇರುಪೇಟೆ, ಡಾಲರ್ ಕುರಿತು ಮಾತನಾಡುತ್ತಾರೆಯೇ ಹೊರತು ಸ್ಥಳೀಯ ಸಮಸ್ಯೆಗಳ ಕುರಿತು ಯಾರೂ ಮಾತನಾಡುವುದಿಲ್ಲ. ಇನ್ನು ಮತದಾನದ ಕುರಿತು ಯಾರು ತಲೆಕೆಡಿಸಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com