ಮತ ಚಲಾಯಿಸಿ ಉಚಿತ ದೋಸೆ, ಕಾಫಿ ಸೇವಿಸಿ: ಇದು ಬೆಂಗಳೂರಿನ ಹೊಟೇಲ್ ಆಫರ್!

ಈ ಬಾರಿ ಮತ ಹಾಕಲು ಬಂದ ಯುವ ಮತದಾರರು ನಗರದ ಕೇಂದ್ರ ಭಾಗದಲ್ಲಿರುವ ಮತಕೇಂದ್ರದ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಈ ಬಾರಿ ಮತ ಹಾಕಲು ಬಂದ ಯುವ ಮತದಾರರು ನಗರದ ಕೇಂದ್ರ ಭಾಗದಲ್ಲಿರುವ ಮತಕೇಂದ್ರದ ಪಕ್ಕ ಇರುವ ಹೊಟೇಲ್ ನಲ್ಲಿ ಬಾಯಲ್ಲಿ ನೀರು ಬರಿಸುವ ದೋಸೆ ಮತ್ತು ಬಿಸಿ ಕಾಫಿ ಸವಿಯಬಹುದು. ನೃಪತುಂಗ ರಸ್ತೆಯಲ್ಲಿರುವ ನಿಸರ್ಗ ಗ್ರಾಂಡ್ ಹೊಟೇಲ್ ನಾಳೆಯ ಚುನಾವಣೆಯಲ್ಲಿ ಯುವ ಮತದಾರರನ್ನು ಸೆಳೆಯಲು, ಹೆಚ್ಚೆಚ್ಚು ಮಂದಿ ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡಲು ಈ ಆಲೋಚನೆ ಮಾಡಿದೆ.

ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಪ್ರತಿನಿಧಿಯೊಂದಿಗೆ ಮಾತನಾಡಿದ ಹೊಟೇಲ್ ಮಾಲಿಕ ಕೃಷ್ಣರಾಜ ಎಸ್ ಪಿ, ನಮ್ಮ ಹೊಟೇಲ್ ನಲ್ಲಿ ಯುವ ಮತದಾರರಿಗೆ ಉಚಿತ ದೋಸೆ ಮತ್ತು ಕಾಫಿ ನೀಡಲಾಗುವುದು ಎಂದು ನೊಟೀಸ್ ಹಾಕಿದ್ದೇವೆ ಎಂದರು.

ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಪ್ರತಿ ಚುನಾವಣೆಯಲ್ಲಿ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಕಡಿಮೆ ಮತದಾನವಾಗುತ್ತದೆ. ಈ ಹಿನ್ನೆಲೆಯಲ್ಲಿ ಹೆಚ್ಚೆಚ್ಚು ಯುವ ಮತದಾರರನ್ನು ಸೆಳೆಯಲು ಹೀಗೆ ಮಾಡಿದ್ದೇವೆ. ನಮ್ಮ ಹೊಟೇಲ್ ಗೆ ಪ್ರತಿದಿನ ಕಾಫಿ, ತಿಂಡಿಗೆ ಬರುವ ಯುವಕರ ಗುಂಪೊಂದು ಈ ಐಡಿಯಾ ನೀಡಿದೆ ಎಂದು ತಿಳಿಸಿದರು.

 ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಈ ಯೋಚನೆಯನ್ನು ನನಗೆ ನೀಡಿದರು. ಅವರು ಕಾಫಿ ಕುಡಿಯಲೆಂದು ನಮ್ಮ ಹೊಟೇಲ್ ಗೆ ಬಂದಿದ್ದಾಗ ನಾವು ವೋಟು ಹಾಕುವುದಿಲ್ಲ, ನಮ್ಮ ವೋಟಿನಿಂದ ಏನು ಬದಲಾವಣೆ ಆಗುತ್ತದೆ ಎಂದು ಮಾತನಾಡಿಕೊಳ್ಳುತ್ತಿದ್ದರು. ಆಗ ನಾನು ವೋಟ್ ಹಾಕುವುದರ ಮಹತ್ವದ ಬಗ್ಗೆ ಅವರಿಗೆ ತಿಳಿಸುತ್ತಿದ್ದೆ.  ಆಗ ಆ ಕಾಲೇಜು ಹುಡುಗರು ನೀವು ಮತದಾನ ದಿನ ಉಚಿತವಾಗಿ ದೋಸೆ ಮತ್ತು ಕಾಫಿ ನೀಡುವುದಾದರೆ ವೋಟ್ ಮಾಡುತ್ತೇವೆ ಎಂದರು. ಅದಕ್ಕೆ ನಾನು ಒಪ್ಪಿದೆ ಎನ್ನುತ್ತಾರೆ ಕೃಷ್ಣ ರಾಜ್.

ಹೀಗಾಗಿ ನಾಳೆ ಮತ ಚಲಾಯಿಸಿದ ಯುವ ಮತದಾರರು ಈ ಹೊಟೇಲ್ ಗೆ ಹೋಗಿ ತಮ್ಮ ಬೆರಳಿನಲ್ಲಿ ವೋಟ್ ಹಾಕಿದ ಶಾಯಿ ಗುರುತು ತೋರಿಸಿದರೆ ಉಚಿತವಾಗಿ ದೋಸೆ ಮತ್ತು ಕಾಫಿ ಸಿಗುತ್ತದೆ. ಬೇರೆ ವಯೋಮಾನದ ಮತದಾರರಿಗೆ ಸಹ ಇಲ್ಲಿ ನಾಳೆ ಉಚಿತ ಕಾಫಿ ಸಿಗುತ್ತದೆ.

ನಗರದ ಮಾನ್ಯತಾ ಟೆಕ್ ಪಾರ್ಕ್ ಹತ್ತಿರವಿರುವ ಇನ್ನೊಂದು ಹೊಟೇಲ್ ನಾಳೆ ಗ್ರಾಹಕರ ಬಿಲ್ ನಲ್ಲಿ ಶೇಕಡಾ 10ರಷ್ಟು ವಿನಾಯಿತಿ ನೀಡುತ್ತದೆ. ಈ ಹೊಟೇಲ್ ಗೆ ಹೋಗಿ ತಮ್ಮ ಬೆರಳಿನಲ್ಲಿ ಶಾಯಿ ಗುರುತು ತೋರಿಸಿದರೆ ರಿಯಾಯಿತಿ ನೀಡುತ್ತಾರೆ. ಹಾಗೆಂದು ನಮ್ಮನ್ನು ಗ್ರಾಹಕರು ಮೋಸ ಮಾಡಲು ಸಾಧ್ಯವಿಲ್ಲ. ಮತದಾನದ ಶಾಯಿಯ ಗುರುತು ಬೇರೆ ಶಾಯಿ ಗುರುತಿಗಿಂತ ಸ್ಪಷ್ಟವಾಗಿ ಪ್ರತ್ಯೇಕ ಕಾಣುತ್ತದೆ ಎನ್ನುತ್ತಾರೆ ವಾಟ್ಸನ್ ಅಂಡ್ ಸ್ಲಗ್ ನ ನಿರ್ದೇಶಕ ಅಮಿತ್ ರಾಯ್.



ಯಂಗ್ ಇಂಡಿಯನ್ಸ್ ಸಂಘಟನೆ ಕಾನ್ಫಡರೇಶನ್ ಆಫ್ ಇಂಡಿಯನ್ಸ್ ಇಂಡಸ್ಟ್ರೀಸ್ ಸಹಯೋಗದಲ್ಲಿ ಶೋ ಯುವರ್ ಇಂಕ್ ಅಭಿಯಾನವನ್ನು ಆರಂಭಿಸಿದ್ದು ಅದರ ಭಾಗವಾಗಿ ಈ ಹೊಟೇಲ್ ಶೇಕಡಾ 10ರಷ್ಟು ರಿಯಾಯಿತಿ ನೀಡುತ್ತದೆ. ನಾಳೆ ಈ ಹೊಟೇಲ್ ಮುಚ್ಚಿರುವುದರಿಂದ ಭಾನುವಾರ ಇದು ಅನ್ವಯವಾಗುತ್ತದೆ. ಜನರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಮತದಾನ ಮಾಡುವವರ ಸಂಖ್ಯೆಯನ್ನು ಹೆಚ್ಚಿಸುವುದು ಇದರ ಉದ್ದೇಶ ಎಂದು ಯಂಗ್ ಇಂಡಿಯಾದ ಲಯೀಕ್ ಆಲಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com