ಶಾಸಕರಿಗೆ ಆಮಿಷ ಆರೋಪ; ರೆಡ್ಡಿ ವಿರುದ್ದ ಕಾಂಗ್ರೆಸ್ ದೂರು

ಕಾಂಗ್ರೆಸ್ ಶಾಸಕರನ್ನು ಬಿಜೆಪಿಗೆ ಸೆಳೆಯಲು ಆಮಿಷವೊಡ್ಡಿದ ಆರೋಪದ ಮೇಲೆ ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿಯವರ ವಿರುದ್ಧ ಕಾಂಗ್ರೆಸ್ ಶನಿವಾರ ದೂರು ದಾಖಲಿಸಿದೆ...
ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ
ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ
Updated on: 
ಬೆಂಗಳೂರು: ಕಾಂಗ್ರೆಸ್ ಶಾಸಕರನ್ನು ಬಿಜೆಪಿಗೆ ಸೆಳೆಯಲು ಆಮಿಷವೊಡ್ಡಿದ ಆರೋಪದ ಮೇಲೆ ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿಯವರ ವಿರುದ್ಧ ಕಾಂಗ್ರೆಸ್ ಶನಿವಾರ ದೂರು ದಾಖಲಿಸಿದೆ. 
ರಾಯಚೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಸನಗೌಡ ದದ್ದಲ ಅವರನ್ನು ಬಿಜೆಪಿಗೆ ಸೆಳೆಯಲು ನೂರಾರು ಕೋಟಿ ಹಣ ಹಾಗೂ ಸಚಿವ ಸ್ಥಾನದ ಆಮಿಷವೊಡ್ಡಿರುವ ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿಯವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪೊಲೀಸ್ ಮಹಾ ನಿರ್ದೇಶಕರಿಗೆ ಕೆಪಿಸಿಸಿ ಕಾನೂನು ಘಟಕ ದೂರು ನೀಡಿದೆ ಎಂದು ತಿಳಿದುಬಂದಿದೆ. 
ವಿಶ್ವಾಸಮತ ಸಾಬೀತಿಗೆ ಗಡುವು ಹತ್ತಿರವಾಗುತ್ತಿರುವಂತೆ ಬಿಜೆಪಿಯು ಕಾಂಗ್ರೆಸ್ ಶಾಸಕರಿಗೆ ವಿಪರೀತಿ ಆಮಿಷವೊಡ್ಡುತ್ತಿದ್ದು, ತಮ್ಮೊಂದಿಗೆ ಕೈಜೋಡಿಸುವ ಶಾಸಕರಿಗೆ ತಲಾ ರೂ.150 ಕೋಟಿ ನೀಡುವುದಾಗಿ ಹೇಳುತ್ತಿದೆ. ಈ ರೀತಿ ಆಮಿಷವೊಡ್ಡುವ ಕಾರ್ಯದಲ್ಲಿ ಮಾಜಿ ಸಚಿವ ಜನಾರ್ದನರೆಡ್ಡಿ ಆದಿಯಾಗಿ ಬಹುತೇಕ ಬಿಜೆಪಿಗರು ಭಾಗಿಯಾಗಿದ್ದಾರೆ. ಅಷ್ಟೇ ಅಲ್ಲ, ಬಿಜೆಪಿ ಅಧ್ಯಕ್ಷ ಅಮಿತ್ ಆವರೂ ಕೂಡ ಕಾಂಗ್ರೆಸ್ ಶಾಸಕರಿಗೆ ಆಮಿಷವೊಡ್ಡುತ್ತಿದ್ದು, ಅದರ ಧ್ವನಿಮುದ್ರಿಕೆಯನ್ನು ಶೀಘ್ರವೇ ಬಹಿರಂಗ ಪಡಿಸುತ್ತೇವೆಂದು ಕಾಂಗ್ರೆಸ್ ನಾಯಕ ವಿ.ಎಸ್ ಉಗ್ರಪ್ಪ ಅವರು ನಿನ್ನೆಯಷ್ಟೇ ಹೊಸ ಬಾಂಬ್ ಸಿಡಿಸಿದ್ದರು.
ತಮ್ಮ ಈಮಾತನ್ನು ನಿರೂಪಿಸುವ ಸಲುವಾಗಿ ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ ಅವರಿಗೆ ಮಾಜಿ ಸಚಿವ ಜನಾರ್ದನ ರೆಡ್ಡಿ ಆಮಿಷ ಒಡ್ಡಿದ್ದಾರೆನ್ನಲಾದ ಧ್ವನಿ ಮುದ್ರಿಕೆಯನ್ನು ಉಗ್ರಪ್ಪ ಅವರು ಬಿಡುಗಡೆ ಮಾಡಿದ್ದಾರೆ. 
ಈ ಧ್ವನಿ ಮುದ್ರಿಕೆಯಲ್ಲಿ ರೆಡ್ಡಿಯವರ ಧ್ವನಿ ಹೋಲುವ ವ್ಯಕ್ತಿಯೊಬ್ಬರು ಆಮಿಷವೊಡ್ಡುತ್ತಿರುವ ಹಾಗೂ ತನ್ನ ಮಾತು ಕೇಳಿದರೆ, ಹಾಲಿ ಇರುವ ಆಸ್ತಿಯ ನೂರು ಪಟ್ಟು ಆಸ್ತಿ ಮಾಡಬಹುದು ಎಂಬ ಆಸೆ ತೋರಿಸುತ್ತಿರುವುದು ಕೇಳಿಬರುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com