ಬೆಂಗಳೂರು: ವೇತನ ಹೆಚ್ಚಳ ಸೇರಿ ವಿವಿಧ ಬೇಡಿಕೆಗೆ ಒತ್ತಾಯಿಸಿ ಮೆಟ್ರೋ ನೌಕರರ ಸಂಘ ಜೂನ್ 4ಕ್ಕೆ ನಮ್ಮ ಮೆಟ್ರೋ ರೈಲು ಮುಷ್ಕರಕ್ಕೆ ಕರೆ ನೀಡಿದೆ.
ಹೈಕೋರ್ಟ್ ಆದೇಶದ ಹೊರತಾಗಿಯ್ತೂ ಬೆಂಗಳೂರು ಮೆಟ್ರೋ ರೈಲು ಕಾರ್ಪೋರೆಷನ್ ಲಿಮಿಟೆಡ್ (ಬಿಎಂಆರ್ ಸಿಎಲ್) ಸಮಸ್ಯೆಯನ್ನು ಬಗೆಹರಿಸದ ಕಾರಣ ಮುಷ್ಕರ ಕೈಗೊಳ್ಳುವುದಾಗಿ ಮೆಟ್ರೋ ನೌಕರರು ಹೇಳಿದ್ದಾರೆ.
ವೇತನ ಪರಿಷ್ಕರಣೆ, ಹುದ್ದೆ ಖಾಯಮಾತಿ, ಭಾಷಾವಾರು ನೌಕರರ ನಡುವಿನ ತಾರತಮ್ಯ ತಡೆ ಸೇರಿ ಅನೇಕ ಬೇಡಿಕೆಗಳನ್ನು ಮುಂದಿಟ್ಟು ಈ ಮುಷ್ಕರ ಆಯೋಜಿಸಲಾಗಿದೆ.
ತಿಂಗಳ ಹಿಂದೆಯೇ ಮುಷ್ಕರ ಕೈಗೊಳ್ಳಬೇಕೆಂದು ನಿರ್ಧರಿಸಿದ್ದ ಮೆಟ್ರೋ ರೈಲು ನೌಕರರ ಸಂಘ ಹೈಕೋರ್ಟ್ ಸೂಚನೆ ಮೇರೆಗೆ ಎರಡು ಬಾರಿ ಮುಷ್ಕರವನ್ನು ಮುಂದೂಡಿತ್ತು.
ಬಿಎಂಆರ್ ಸಿಎಲ್ ಹಾಗೂ ನೌಕರರ ನಡುವೆ ಯಾವ ಮಾತುಕತೆ ಫಲಪ್ರದವಾಗದ ಕಾರಣ ಇದೀಗ ಮತ್ತೆ ಮುಷ್ಕರ ಕೈಗೊಳ್ಳುವ ನಿರ್ಧಾರಕ್ಕೆ ಬರಲಾಗಿದೆ ಎಂದು ಮೆಟ್ರೋ ನೌಕರರ ಸಂಘದ ಅಧ್ಯಕ್ಷ ಸೂರ್ಯನಾರಾಯಣ್ ತಿಳಿಸಿದ್ದಾರೆ.