ಬೆಂಗಳೂರು: ಆನ್ ಲೈನ್ ನಲ್ಲಿ ವಿದ್ಯುತ್ ಬಿಲ್ ಪಾವತಿ ಮಾಡುವುದಕ್ಕೆ ವಿಧಿಸಲಾಗುತ್ತಿದ್ದ ಹೆಚ್ಚುವರಿ ಶುಲ್ಕಕ್ಕೆ ಜೂನ್ ನಿಂದ ಮುಕ್ತಿ ಸಿಗಲಿದೆ. ಆನ್ ಲೈನ್ ನಲ್ಲಿ ವಿದ್ಯುತ್ ಬಿಲ್ ಪಾವತಿ ಮಾಡುವುದಕ್ಕೆ ವಿಧಿಸಲಾಗುತ್ತಿದ್ದ ಮರ್ಚೆಂಟ್ ಡಿಸ್ಕೌಂಟ್ ರೇಟ್ (ಎಂಡಿಆರ್) ನ್ನು ಮುಂದಿನ ತಿಂಗಳಿನಿಂದ ರದ್ದುಗೊಳಿಸಲಾಗುತ್ತದೆ.
ಬಿಲ್ ಪಾವತಿ ಮಾಡಲು ನೀಡಲಾಗಿರುವ ಅಂತಿಮ ದಿನಾಂಕಕ್ಕೂ ಮುನ್ನವೇ ಆನ್ ಲೈನ್ ನಲ್ಲಿ ವಿದ್ಯುತ್ ಬಿಲ್ ಪಾವತಿ ಮಾಡಿದರೆ ಈ ಹೆಚ್ಚುವರಿ ಶುಲ್ಕ ಪಾವತಿ ಮಾಡಬೇಕಿರುವುದಿಲ್ಲ. ಆನ್ ಲೈನ್ ನಲ್ಲಿ ಬಿಲ್ ಪಾವತಿ ಮಾಡುವುದನ್ನು ಉತ್ತೇಜಿಸುವುದಕ್ಕಾಗಿ ಬೆಸ್ಕಾಂ ಎಂಡಿಆರ್ ಶುಲ್ಕವನ್ನು ರದ್ದುಗೊಳಿಸಲು ರಾಜ್ಯ ವಿದ್ಯುತ್ ನಿಯಂತ್ರಣ ಆಯೋಗದಿಂದ ಅನುಮತಿ ಪಡೆದಿದೆ.
ಈಗ ಆನ್ ಲೈನ್ ನಲ್ಲಿ ವಿದ್ಯುತ್ ಬಿಲ್ ಪಾವತಿ ಮಾಡುವುದಕ್ಕಾಗಿ ಶೇ.1 ರಷ್ಟು ಎಂಡಿಆರ್ ನ್ನು ವಿಧಿಸಲಾಗುತ್ತಿತ್ತು. ಡೆಬಿಟ್ ಕಾರ್ಡ್ ಮೂಲಕ 2,000 ರೂ ವರೆಗಿನ ಬಿಲ್ ಪಾವತಿಗೆ ಶೇ.0.25-0.5 ವರೆಗೆ ಶುಲ್ಕ ವಿಧಿಸಲಾಗುತ್ತಿತ್ತು.