ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಂಗಳವಾರ ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಮೊದಲ ಜನತಾ ದರ್ಶನ ನಡೆಸಿ, ನಾಗರಿಕರ ಸಮಸ್ಯೆಗಳನ್ನು ಆಲಿಸಿದರು.
ಇಂದು ಜನತಾ ದರ್ಶನಕ್ಕೆ ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಜನ ಬೆಳಗ್ಗೆ 8 ಗಂಟೆಯಿಂದಲೇ ಕಾಯುತ್ತಿದ್ದರು.
ಹಿರಿಯ ನಾಗರಿಕರು ನಿವೇಶನ, ಮಾಸಾಶನಕ್ಕಾಗಿ ಮನವಿ ಸಲ್ಲಿಸಿದರು. ಯುವ ವರ್ಗ ಉದ್ಯೋಗಕ್ಕಾಗಿ ಮನವಿ ಸಲ್ಲಿಸಿತು. ಇನ್ನು ಕುಮಾರಸ್ವಾಮಿ ಅವರು ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ನಡೆಸಿದ್ದ ಜನತಾ ದರ್ಶನದಲ್ಲಿ ಪರಿಹಾರ ಕಂಡು ಕೊಂಡವರು ಅವರನ್ನು ಭೇಟಿಯಾಗಿ ಅಭಿನಂದನೆಗಳನ್ನೂ ಸಲ್ಲಿಸಿದರು.
ಕುಮಾರಸ್ವಾಮಿ 2006ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಆರಂಭಿಸಿದ್ದ ಜನತಾ ದರ್ಶನ ಕಾರ್ಯಕ್ರಮ ಭಾರಿ ಜನಪ್ರಿಯತೆ ಪಡೆದಿತ್ತು.
ಚಿಕಿತ್ಸೆ ವೆಚ್ಚ ನೋಡಿಕೊಳ್ಳುತ್ತೇನೆ
ರಾಜಾಜಿನಗರದಿಂದ ಬಂದ ಮಹಿಳೆಯೊಬ್ಬರು ತಮ್ಮ ಪತಿಗೆ ಕ್ಯಾನ್ಸರ್ ಬಂದಿರುವುದಾಗಿಯೂ, ನೆರವು ನೀಡಬೇಕಾಗಿಯೂ ಕೋರಿದರು. ಕುಮಾರಸ್ವಾಮಿ ಅವರು ನಾನು ನೆರವು ಕಲ್ಪಿಸುತ್ತೇನೆ ಎಂದು ಭರವಸೆ ನೀಡಿದರು. ಇದರಿಂದ ಮಹಿಳೆ ಮುನಿಯಮ್ಮ ಸಂತಸಪಟ್ಟರು.