ಸಾಲಮನ್ನಾಗೆ 15 ದಿನ ಕಾಲಾವಕಾಶ ಬೇಕು: ರೈತರೊಂದಿಗೆ ಸಭೆ ನಂತರ ಮುಖ್ಯಮಂತ್ರಿ ಕುಮಾರಸ್ವಾಮಿ

ಇನ್ನು 15 ದಿನಗಳಲ್ಲಿ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಭರವಸೆ ...
ರೈತಮುಖಂಡರೊಂದಿಗೆ ಸಭೆಯಲ್ಲಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮತ್ತು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್
ರೈತಮುಖಂಡರೊಂದಿಗೆ ಸಭೆಯಲ್ಲಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮತ್ತು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್

ಬೆಂಗಳೂರು: ರೈತರ ಸಾಲ ಮನ್ನಾ ಮಾಡಲು ರಾಜ್ಯ ಸರ್ಕಾರ ಬದ್ಧವಾಗಿದ್ದು, ಇನ್ನು 15 ದಿನಗಳಲ್ಲಿ ರೂಪುರೇಷೆಗಳನ್ನು ಸಿದ್ಧಪಡಿಸಲಾಗುವುದು ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ತಿಳಿಸಿದರು.

ಅವರು ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಾಲ ಮನ್ನಾ ಕುರಿತು ರೈತಪರ ಸಂಘಟನೆಗಳು, ಪ್ರಗತಿಪರ ಕೃಷಿಕರೊಂದಿಗೆ ಸಮಾಲೋಚನೆ ನಡೆಸಿ, ಮಾತನಾಡುತ್ತಿದ್ದರು.

ಮೊದಲ ಹಂತದಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರ 1-4-2009 ರಿಂದ 31-12-2017ರ ಅವಧಿಯ ನಡುವಣ ಸಂಪೂರ್ಣ ಸಾಲ ಮನ್ನಾ ಮಾಡಲು ಉದ್ದೇಶಿಸಲಾಗಿದೆ.

ಈಗಾಗಲೇ ಹಣಕಾಸು ಇಲಾಖೆ ಮತ್ತು ಇತರ ಸಂಬಂಧ ಪಟ್ಟ ಇಲಾಖೆಗಳ ಅಧಿಕಾರಿಗಳೊಂದಿಗೆ ಎರಡು ಮೂರು ಸುತ್ತಿನ ಚರ್ಚೆ ನಡೆಸಿದ್ದು, ರಾಷ್ಟ್ರೀಕೃತ ಬ್ಯಾಂಕುಗಳ ಪ್ರತಿನಿಧಿಗಳ ಸಭೆ ನಡೆಸಿ, ಅವರಿಂದಲೂ ಮಾಹಿತಿ ಪಡೆದು ಸಾಲ ಮನ್ನಾ ಸ್ವರೂಪ, ಯಾರು ಯಾರನ್ನು ಸಾಲ ಮನ್ನಾ ವ್ಯಾಪ್ತಿಗೆ ತರಬೇಕು ಮುಂತಾದ ವಿಷಯಗಳನ್ನು ಕೂಲಂಕುಷವಾಗಿ ಪರಿಶೀಲಿಸಿ, ರಾಜ್ಯದ ಆರ್ಥಿಕ ಶಿಸ್ತನ್ನು ಗಮನದಲ್ಲಿರಿಸಿಕೊಂಡು ಹಂತ ಹಂತವಾಗಿ ಸಾಲ ಮನ್ನಾ ಮಾಡುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಇದರೊಂದಿಗೆ ಕೃಷಿ ಕ್ಷೇತ್ರದ ಸಮಗ್ರ ಬೆಳವಣಿಗೆಗೆ ರಾಜ್ಯದಲ್ಲಿ ಮಾದರಿ ಕೃಷಿ ನೀತಿರೂಪಿಸಲು ಸರ್ಕಾರ ಉತ್ಸುಕವಾಗಿದ್ದು, ರೈತರು ಇದಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.



‘ರಾಜ್ಯದ ಬಜೆಟ್‌ ₹2 ಲಕ್ಷ ಕೋಟಿ. ಇದರಲ್ಲಿಯೇ ಸಾಲಮನ್ನಾ ಮಾಡಿ, ಸಮಾಜ ಕಲ್ಯಾಣ ಇಲಾಖೆ, ನೀರಾವರಿ, ಶಿಕ್ಷಣ ಕ್ಷೇತ್ರ ಸೇರಿ ಎಲ್ಲ ಕ್ಷೇತ್ರಗಳ ಯೋಜನೆಗಳಿಗೂ ಅನುದಾನ ನೀಡಬೇಕಿದೆ’ ಎಂದರು.

ರೈತರು ಹಲವು ಕೆಲಸಗಳಿಗೆ ಸಂಬಂಧಪಟ್ಟಂತೆ ಸಾಲ ಪಡೆದುಕೊಂಡಿದ್ದಾರೆ. ಅವರ ಸಾಲವನ್ನು ಮನ್ನಾ ಮಾಡುವ ಬಗ್ಗೆ ಏಕಾಏಕಿ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ರೈತಮುಖಂಡರು, ಕೃಷಿ ತಜ್ಞರ ಜೊತೆ ಚರ್ಚೆ ನಡೆಸಿ ಇನ್ನು 10-15 ದಿನಗಳಲ್ಲಿ ತೀರ್ಮಾನಕ್ಕೆ ಬರಲಾಗುವುದು ಎಂದರು.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇನ್ನೆರಡು ದಿನಗಳಲ್ಲಿ ದೆಹಲಿಗೆ ವಾಪಸ್ಸಾಗುತ್ತಾರೆ. ಅವರ ಜೊತೆ ಕೂಡ ಚರ್ಚೆ ನಡೆಸಲಿದ್ದೇನೆ ಎಂದು ಹೇಳಿದರು.

ಈಗಾಗಲೇ ಕೆಲವು ರಾಜ್ಯಗಳು ಸಾಲ ಮನ್ನಾ ಮಾಡಿದ್ದು, ಆ ಬಗ್ಗೆಯೂ ಮಾಹಿತಿ ತೆಗೆದುಕೊಂಡಿದ್ದೇನೆ. ಈ ಹಿನ್ನೆಲೆಯಲ್ಲಿ ರೈತರು ಸಲಹೆ ನೀಡಬೇಕು, ಈ ಬಗ್ಗೆ ಚರ್ಚಿಸಿ ಅಂತಿಮ ನಿರ್ಧಾರ ಪ್ರಕಟಿಸುವುದಾಗಿ ಸಿಎಂ ತಿಳಿಸಿದರು.

‘ಚುನಾವಣೆ ಪೂರ್ವದಲ್ಲಿ ನೀಡಿದ ಮಾತಿನಂತೆ ನಡೆಯುತ್ತೇವೆ, ಹಿಂದೆ ಸರಿಯುವ ಮಾತಿಲ್ಲ. ಡಿಸಿಎಂ ಪರಮೇಶ್ವರ ಮತ್ತು ನಾನು ಇಬ್ಬರೂ ಈ ಕುರಿತು ಚರ್ಚಿಸಿದ್ದೇವೆ’ ಎಂದು ಸಿಎಂ ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

‘ನಗರ ಪ್ರದೇಶದ ಅಭಿವೃದ್ಧಿಯ ಹಣವನ್ನು ರೈತರ ಸಾಲ ಮನ್ನಾಗಾಗಿ ಬಳಕೆಯಾಗಲಿದೆ. ಅದರಿಂದ ಬೆಂಗಳೂರಿನ ನಾಗರಿಕರ ಅಭಿವೃದ್ಧಿಗೆ ಹಿನ್ನಡೆಯಾಗಲಿದೆ ಎಂಬುದು ಸರಿಯಲ್ಲ. ಖಜಾನೆಯೂ ಭದ್ರವಾಗಿರಲಿದೆ ಹಾಗೂ ರೈತರ ಸಾಲ ಮನ್ನಾ ಕೂಡ ಆಗಲಿದೆ’ ಎಂದು ಭರವಸೆ ವ್ಯಕ್ತಪಡಿಸಿದರು.

ಇದಕ್ಕೂ ಮುನ್ನ ಮಾತನಾಡಿದ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಅವರು ರಾಜ್ಯ ಸರ್ಕಾರ ರೈತರ ಸಮಸ್ಯೆ ಬಗೆಹರಿಸಲು ಸಿದ್ಧವಿದ್ದು, ಯಾರೂ ಆತ್ಮಹತ್ಯೆಗೆ ಶರಣಾಗಬಾರದು ಎಂದು ಮನವಿ ಮಾಡಿದರು.

ಸರ್ಕಾರ ರೈತರ ಸಮಸ್ಯೆಗಳೊಂದಿಗೆ ಇತರ ಆದ್ಯತಾ ವಲಯಗಳಿಗೂ ಗಮನ ಕೊಡಬೇಕಾಗಿದೆ. ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಹೊಸ ವೈಜ್ಞಾನಿಕ ವಿಧಾನಗಳನ್ನು ಕಂಡುಕೊಳ್ಳೋಣ. ಇದಕ್ಕಾಗಿ ತಜ್ಞರ ಸಮಿತಿ ರಚನೆ ಅಗತ್ಯವಿದೆ ಎಂದು ಅಭಿಪ್ರಾಯ ಪಟ್ಟರು.

 ಸಭೆಯಲ್ಲಿ ವಿರೋಧ ಪಕ್ಷದ ಉಪ ನಾಯಕ ಗೋವಿಂದ ಎಂ.ಕಾರಜೋಳ, ಸರ್ಕಾರದ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭ, ಅಪರ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್, ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತ ಡಿ.ವಿ. ಪ್ರಸಾದ್, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಎಂ.ಲಕ್ಷ್ಮೀನಾರಾಯಣ ಮತ್ತಿತರ ಹಿರಿಯ ಅಧಿಕಾರಿಗಳು, ವಿವಿಧ ರೈತ ಸಂಘಟನೆಗಳ ಮುಖಂಡರು, ಪ್ರಗತಿಪರ ರೈತರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com