ಎಕ್ಸ್ ಪ್ರೆಸ್ ವರದಿ ಫಲಶ್ರುತಿ: ಶೌಚಾಲಯದಲ್ಲಿ ವಾಸಿಸುತ್ತಿದ್ದ ವೃದ್ಧ ದಂಪತಿಗೆ ಅಧಿಕಾರಿಗಳಿಂದ ಮನೆ ನಿರ್ಮಿಸಿಕೊಡುವ ಭರವಸೆ

ಸರ್ಕಾರದ ವಸತಿಗೆ ಕಳೆದೊಂದು ವರ್ಷಗಳಿಂದ ಕಾಯುತ್ತಾ ನೆರೆಮನೆಯವರ ಶೌಚಾಲಯದಲ್ಲಿ ...
ತಾಲ್ಲೂಕು ಪಂಚಾಯತ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿರುವುದು
ತಾಲ್ಲೂಕು ಪಂಚಾಯತ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿರುವುದು

ತುಮಕೂರು: ಸರ್ಕಾರದ ವಸತಿಗೆ ಕಳೆದೊಂದು ವರ್ಷದಿಂದ ಕಾಯುತ್ತಾ ನೆರೆಮನೆಯವರ ಶೌಚಾಲಯದಲ್ಲಿ ವಾಸಿಸುತ್ತಿದ್ದ ಹಿರಿಯ ಜೀವಗಳಿಗೆ ಕೊನೆಗೂ ಆಶಾಕಿರಣ ಮೂಡಿದೆ. ಸರ್ಕಾರ ಅವರಿಗೆ ಮನೆ ನಿರ್ಮಸಿಕೊಡಲು ಮುಂದಾಗಿದೆ.

ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ಕಡಪಲಕೆರೆ ಗ್ರಾಮದಲ್ಲಿ ಇಳಿವಯಸ್ಸಿನ ಲಕ್ಷ್ಮೀನರಸಮ್ಮ ಮತ್ತು ಒಬಳಪ್ಪ ದಂಪತಿ ಶೌಚಾಲಯದಲ್ಲಿ ವಾಸಿಸುತ್ತಿದ್ದರು. ಇವರ ಪರಿಸ್ಥಿತಿ ಬಗ್ಗೆ ನಿನ್ನೆ ನ್ಯೂ ಸಂಡೆ ಎಕ್ಸ್ ಪ್ರೆಸ್ ವಿಸ್ತೃತ ವರದಿ ಮಾಡಿತ್ತು. ಇದನ್ನು ಗಮನಿಸಿದ ತಾಲ್ಲೂಕು ಮಟ್ಟದ ಅಧಿಕಾರಿಗಳು ದಂಪತಿ ನೆಲೆಸಿರುವ ಶೌಚಾಲಯ ಕಟ್ಟಡಕ್ಕೆ ಭೇಟಿ ನೀಡಿ ಆದಷ್ಟು ಬೇಗನೆ ಹಣ ಬಿಡುಗಡೆ ಮಾಡಿ ವಸತಿ ನಿರ್ಮಿಸಿಕೊಡುವ ಭರವಸೆ ನೀಡಿದ್ದಾರೆ.

ತುಂಡು ಭೂಮಿಯನ್ನು ಕೂಡ ಹೊಂದಿರದ ಲಕ್ಷ್ಮೀನರಸಮ್ಮ ಮತ್ತು ಓಬಳಪ್ಪ ದಂಪತಿಗೆ ಅಂಬೇಡ್ಕರ್ ಆವಾಸ್ ಯೋಜನೆಯಡಿ ಗ್ರಾಮ ಪಂಚಾಯತ್ ನಿಂದ ಒಂದೂವರೆ ವರ್ಷದ ಕೆಳಗೆ ವಸತಿ ಅನುಮೋದನೆಯಾಗಿತ್ತು. ಆದರೆ ವಿಪರ್ಯಾಸವೆಂದರೆ ಈ ವೃದ್ಧ ದಂಪತಿಗೆ ಸರ್ಕಾರದಿಂದ ಮನೆ ನಿರ್ಮಿಸಲು ಬಿಡುಗಡೆಯಾದ ಹಣ ಕೇವಲ ಒಂದು ರೂಪಾಯಿ. ಅವರ ಪರಿಸ್ಥಿತಿ ಬಗ್ಗೆ ವರದಿಯನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸದ್ಯದಲ್ಲಿಯೇ ನೀಡಿ, ತಮ್ಮ ಮನೆಯ ಅಡಿಪಾಯ ನಿರ್ಮಿಸಲು ಖರ್ಚಾದ 45 ಸಾವಿರ ರೂಪಾಯಿಗಳನ್ನು ಶೀಘ್ರವೇ ಬಿಡುಗಡೆ ಮಾಡಿಸುವುದಾಗಿ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ತಿಳಿಸಿದ್ದಾರೆ.

ಈ ಬಗ್ಗೆ ಜಿಲ್ಲಾ ಪಂಚಾಯತ್ ಸಿಇಒ ಅನ್ನಿ ಕಣ್ಮಣಿ ಜೊಯ್ ಅವರನ್ನು ಸಂಪರ್ಕಿಸಿದಾಗ, ನಾನು ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮಕ್ಕೆ ಪತ್ರ ಬರೆದಿದ್ದು ಆದಷ್ಟು ಶೀಘ್ರವೇ ಹಣ ಬಿಡುಗಡೆ ಮಾಡುವಂತೆ ಕೋರಿದ್ದೇನೆ. ಅಲ್ಲಿನ ವ್ಯವಸ್ಥಾಪಕ ನಿರ್ದೇಶಕ ಅಂಬು ಕುಮಾರ್ ಅವರನ್ನು ಕೂಡ ದೂರವಾಣಿ ಮೂಲಕ ಸಂಪರ್ಕಿಸಿ ವೃದ್ಧ ದಂಪತಿಯ ಪರಿಸ್ಥಿತಿಯನ್ನು ತಿಳಿಸಿದ್ದೇನೆ. ತಾಲ್ಲೂಕು ಕಚೇರಿ ಅಧಿಕಾರಿಗಳ ತಂಡ ಶೌಚಾಲಯ ತೊರೆದು ಹೋಗುವಂತೆ ಮನವೊಲಿಸಿದ್ದೇವೆ ಎಂದರು. ಶೌಚಾಲಯ ಮತ್ತೊಬ್ಬ ಫಲಾನುಭವಿ ನರಸಮ್ಮ ಎಂಬುವವರಿಗೆ ಸೇರಿದ್ದಾಗಿದೆ ಎಂದರು.

ಆದರೆ ದಂಪತಿ ಒಪ್ಪದಿದ್ದಾಗ ಅವರನ್ನು ಅವರ ಸಂಬಂಧಿಕರಾದ ಪಟಣ್ಣ ಅವರ ಮನೆಯ ವರಾಂಡದಲ್ಲಿ ನೆಲೆಸುವಂತೆ ಮನವೊಲಿಸಿದ್ದೇವೆ. ಪಟಣ್ಣಾ ಅವರ ಕುಟುಂಬ ಬೆಂಗಳೂರಿಗೆ ಹೋಗಿ ನೆಲೆಸಿರುವುದರಿಂದ ಮನೆ ಖಾಲಿಯಿದೆ.  ವರಾಂಡದಲ್ಲಿ ಬಾಗಿಲುಗಳಿಲ್ಲದಿರುವುದರಿಂದ ವೃದ್ಧ ದಂಪತಿಗೆ ಸುರಕ್ಷಿತವಲ್ಲ ಎಂದು ಗ್ರಾಮಸ್ಥರು ಹೇಳಿದ್ದು, ಬಾಗಿಲು ನಿರ್ಮಿಸಿಕೊಡುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

ನರಸಮ್ಮನಿಗೆ ಸ್ವಚ್ಛ ಭಾರತ ಅಭಿಯಾನದಡಿ ಶೌಚಾಲಯ ನಿರ್ಮಿಸಿಕೊಟ್ಟಿರುವುದರಿಂದ ನೊಟೀಸ್ ನೀಡಲಾಗುವುದು ಎಂದು ಅನ್ನಿ ಕಮ್ಮಣಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com