ಜನಾರ್ಧನ ರೆಡ್ಡಿಗಾಗಿ ಸಿಸಿಬಿ ಹುಡುಕಾಟ: ಹೈದರಾಬಾದ್ ಕೋರ್ಟ್ ನಲ್ಲಿ ರೆಡ್ಡಿ ನಿರೀಕ್ಷಣಾ ಜಾಮೀನು ಅರ್ಜಿ

ರದ್ದಾದ ನೋಟುಗಳ ಅಕ್ರಮ ವರ್ಗಾವಣೆ ಹಾಗೂ 57 ಕೆಜಿ ಚಿನ್ನದ ಗಟ್ಟಿ ಖರೀದಿಸಿ ಡೀಲ್ ಮಾಡಿಕೊಂಡಿರುವ ಪ್ರಕರಣ ಸಂಬಂಧ...
ಜನಾರ್ಧನ ರೆಡ್ಡಿ
ಜನಾರ್ಧನ ರೆಡ್ಡಿ
ಬೆಂಗಳೂರು: ರದ್ದಾದ ನೋಟುಗಳ ಅಕ್ರಮ ವರ್ಗಾವಣೆ ಹಾಗೂ 57 ಕೆಜಿ ಚಿನ್ನದ ಗಟ್ಟಿ ಖರೀದಿಸಿ ಡೀಲ್ ಮಾಡಿಕೊಂಡಿರುವ ಪ್ರಕರಣ ಸಂಬಂಧ ಗಾಲಿ ಜನಾರ್ಧನ ರೆಡ್ಡಿ  ಬಂಧಿಸಲು ಸಿಸಿಬಿ ಪೊಲೀಸರು ಮುಂದಾಗಿದ್ದಾರೆ.
ಮಾರ್ಕೆಟಿಂಗ್ ಹೆಸರಲ್ಲಿ ಹಣ ದ್ವಿಗುಣ ಮಾಡುವುದಾಗಿ ಲಕ್ಷಾಂತರ ಜನರಿಗೆ ಬೆಂಗಳೂರಿನ ಅಂಬಿಡೆಂಟ್ ಮಾರ್ಕೆಟಿಂಗ್ ಪ್ರೈವೇಟ್ ಲಿಮಿಟೆಡ್ ವಂಚನೆ ಮಾಡಿತ್ತು. ಈ ಸಂಬಂಧ ಬೆಂಗಳೂರಿನ ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.  ಪ್ರಕರಣದ ಬಗ್ಗೆ ತಿಳಿದ ಸಿಎಂ ಕುಮಾರ ಸ್ವಾಮಿ ಕೇಸ್ ಅನ್ನು ಸಿಸಿಬಿ ಪೊಲೀಸರ ಹೆಗಲಿಗೆ ನೀಡಿದ್ದರು, ಈ ಕೇಸ್ ಮುಚ್ಚಿಹಾಕಲು ಕಂಪನಿ ಮಾಲೀಕ ಫರೀದ್ ಹಲವರ ಹಿಂದೆ ಸುತ್ತಿದ್ದರು. ಈ ವೇಳೆ ಫರೀದ್‍ಗೆ ಬಿಲ್ಡರ್ ಬ್ರಿಜೇಶ್, ರಮೇಶ್ ಕೊಠಾರಿ, ಅಲಿಖಾನ್ ಹಾಗೂ ಜನಾರ್ದನ ರೆಡ್ಡಿ ಸೇರಿ 25 ಕೋಟಿ ಡೀಲ್‍ಗೆ ಬೇಡಿಕೆಯಿಟ್ಟಿದ್ದರು ಎಂದು ಆರೋಪಿಸಲಾಗಿದೆ
ಈ ಸಂಬಂಧ ಇಡಿ ಅಧಿಕಾರಿಯೊಬ್ಬರನ್ನು ಕಳೆದ ಮಾರ್ಚ್ ನಲ್ಲಿ ತಾಜ್ ವೆಸ್ಟೆಂಡ್‍ನಲ್ಲಿ ಭೇಟಿಯಾಗಿ ಡೀಲ್ ಬಗ್ಗೆ ಮಾತುಕತೆ ನಡೆಸಿದ್ದು, 23 ಕೋಟಿಗೆ ಜನಾರ್ದನ ರೆಡ್ಡಿ ಡೀಲ್ ಒಪ್ಪಿಕೊಂಡಿದ್ದರು. ಇದೇ ವೇಳೆ ರೆಡ್ಡಿ ಹಣವನ್ನು ಬ್ಲಾಕ್ ಮನಿಯಾಗಿ ನೀಡುವಂತೆ ಬೇಡಿಕೆ ಇಟ್ಟಿದ್ದರು. ಆದರೆ ಅಂಬಿಡೆಂಟ್ ಕಂಪನಿ ಮಾಲೀಕ ಫರೀದ್ ಮಾತ್ರ ಬ್ಲಾಕ್ ಇಲ್ಲ ವೈಟ್ ಹಣವಾಗಿ ನೀಡಿದ್ದರು. ಹೀಗಾಗಿ ರೆಡ್ಡಿ ಅದನ್ನು ಎನೇಬಲ್ ಕಂಪನಿಗೆ ಆರ್‌ಟಿಜಿಎಸ್‌ ಮಾಡಿಸಿಕೊಂಡಿದ್ದರು. ಬಳಿಕ ಇಡಿ ಅಧಿಕಾರಿಗೆ 23 ಕೋಟಿ ಹಣ ನೀಡಿ, ರೆಡ್ಡಿ 57 ಕೆಜಿ ಚಿನ್ನ ಖರೀದಿ ಮಾಡಿದ್ದರು ಎಂದು ದೂರಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಈ ಮೂಲಕ ಜನಾರ್ದನ ರೆಡ್ಡಿ ರದ್ದಾದ 100 ಕೋಟಿ ಹಣವನ್ನು ವರ್ಗಾವಣೆ ಮಾಡಿಕೊಂಡಿದ್ದು, ಇದಕ್ಕೆ ಪಿಎ ಅಲಿಖಾನ್ ಸಹಾಯ ಮಾಡಿದ್ದ, ಹೀಗಾಗಿ ಪೊಲೀಸರು ರೆಡ್ಡಿ ಆಪ್ತಿ ಅಲಿಖಾನ್ ಗಾಗಿ ಹುಡುಕಾಟ ನಡೆಸಿದ್ದಾರೆ ಎನ್ನಲಾಗಿದೆ.
ಅಂಬಿಜೆಂಟ್ ಕಂಪನಿಯ ಮಾಲೀಕ ಫರೀದ್, ಬಿಲ್ಡರ್ ಬ್ರಿಜೇಶ್, ರಮೇಶ್ ಕೊಠಾರಿ ಸೇರಿ ಮೂವರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಜನಾರ್ಧನ ರೆಡ್ಡಿ ವಿಚಾರಣೆಗಾಗಿ ಸಿಸಿಬಿ ತಂಡವು ಏಕಕಾಲದಲ್ಲಿ  ಬೆಂಗಳೂರಿನ ಪಾರಿಜಾತ ಅಪಾರ್ಟ್ ಮೆಂಟ್, ಟ್ವಿನ್ ಟವರ್, ಮೊಳಕಾಲ್ಮೂರು ತೋಟದ ಮನೆ  ಹಾಗೂ ಬಳ್ಳಾರಿಯ ಮನೆ ಮೇಲೆ ದಾಳಿ ಮಾಡಿತ್ತು. ಆದರೆ ರೆಡ್ಡಿ ಎಲ್ಲಿಯೂ ಸಿಕ್ಕಲಿಲ್ಲ, ರೆಡ್ಡಿ ಹೈದರಾಬಾದ್ ಗೆ ಪರಾರಿಯಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. 
ಜನಾರ್ದನ ರೆಡ್ಡಿಗೆ 57 ಕೆ.ಜಿ ಚಿನ್ನದ ಗಟ್ಟಿ ಕೊಡಿಸಿದ್ದು ರಮೇಶ್ ಕೊಠಾರಿ ಎಂಬುದು ಈಗ ತಿಳಿದು ಬಂದಿದೆ. ಅಂಬೆಡೆಂಟ್ ಕಂಪನಿಯಿಂದ ಪಡೆದಿದ್ದ 23 ಕೋಟಿ ಡೀಲ್ ಹಣಕ್ಕಾಗಿ ಚಿನ್ನ ಖರೀದಿಸಲಾಗಿದೆ ಎಂದು ತಿಳಿದು ಬಂದಿದೆ. 
ಅಂಬಿಡೆಂಟ್ ಮಾರ್ಕೆಟಿಂಗ್ ಪ್ರೈವೇಟ್ ಲಿಮಿಟೆಡ್ ಕಂಪೆನಿಯನ್ನು ದುಬೈ ಮೂಲದ ಉದ್ಯಮಿಗಳು ಸ್ಥಾಪಿಸಿದ್ದಾರೆ. ಬೆಂಗಳೂರಿನ ಕನಕನಗರದ ಮುಖ್ಯರಸ್ತೆಯಲ್ಲಿ ಈ ಕಂಪನಿಯ ಕಚೇರಿಯಿದ್ದು, ನಿಮ್ಮ ಹಣವನ್ನ ಒಂದು ವರ್ಷದಲ್ಲಿ ದ್ವಿಗುಣ ಮಾಡಿಕೊಡುತ್ತೇವೆ ಎಂದು ಜನರಿಂದ ಹಣ ಪಡೆಯುತ್ತಿತ್ತು. ಪ್ರತಿ ಗ್ರಾಹಕರಿಂದ ಕನಿಷ್ಠ ಹೂಡಿಕೆ ಒಂದು ಲಕ್ಷ ರೂ. ಪಡೆಯುತ್ತಿತ್ತು. 1 ಲಕ್ಷ ಹೂಡಿಕೆ ಮಾಡಿದರೆ ಪ್ರತಿ ಮೂರು ತಿಂಗಳಿಗೊಮ್ಮೆ 40 ಸಾವಿರ ರೂ. ನಂತೆ ವರ್ಷಕ್ಕೆ 1.60 ಸಾವಿರ ವಾಪಸ್ಸು ಕೊಡುವುದಾಗಿ ಗ್ರಾಹಕರನ್ನು ನಂಬಿಸಿತ್ತು. ಹೀಗಾಗಿ ಇಲ್ಲಿ ಸಾವಿರಾರು ಜನರು ಹೂಡಿಕೆ ಮಾಡಿದ್ದರು. ಇದೇ ದೋಖಾ ಕಂಪೆನಿಯಲ್ಲಿ ಬೇನಾಮಿ ಹೆಸರಲ್ಲಿ ರೆಡ್ಡಿ ಆಪ್ತ ಅಲಿಖಾನ್ ಹಣ ಹೂಡಿದ್ದನು.
ಹೈದರಾಬಾದ್‍ನಲ್ಲಿ ರೆಡ್ಡಿ ಮನೆ ಇದೆ. ಹೀಗಾಗಿ ನಿರೀಕ್ಷಣಾ ಜಾಮೀನಿಗೆ ಅಲ್ಲಿಂದಲೇ ಅರ್ಜಿ ಸಲ್ಲಿಸಲಿದ್ದಾರೆ ಎನ್ನುವ ಮಾಹಿತಿಯೊಂದು ಮೂಲಗಳಿಂದ ಲಭಿಸಿದೆ.
ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಅವರ ಬಂಧನಕ್ಕಾಗಿ ಸಿಸಿಬಿ ಪೊಲೀಸರು ಬಲೆ ಬೀಸಿರುವ ಸಂಬಂಧ ಪ್ರತಿಕ್ರಿಯಿಸಿರುವ ಶ್ರೀರಾಮುಲು, ಕಾನೂನು ತನ್ನ ಕೆಲಸ ಮಾಡಲಿದೆ, ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ, ನಾನು ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ ಜನಾರ್ದನ ರೆಡ್ಡಿ ಅವರು ನನ್ನ ಸ್ನೇಹಿತರು ಹೌದು ಆದರೆ ಈ ಪ್ರಕರಣದ ಬಗ್ಗೆ ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com