57 ಕೆಜಿ ಚಿನ್ನದ ಗಟ್ಟಿ ಡೀಲ್: ಜನಾರ್ದನ ರೆಡ್ಡಿ ಮನೆ ಮೇಲೆ ಸಿಸಿಬಿ ದಾಳಿ, ದಾಖಲೆಗಳ ಪರಿಶೀಲನೆ

ರದ್ದಾದ ನೋಟುಗಳ ಅಕ್ರಮ ವರ್ಗಾವಣೆ ಹಾಗೂ 57 ಕೆಜಿ ಚಿನ್ನದ ಗಟ್ಟಿ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ....
ಜನಾರ್ದನ ರೆಡ್ಡಿ
ಜನಾರ್ದನ ರೆಡ್ಡಿ
ಬೆಂಗಳೂರು: ರದ್ದಾದ ನೋಟುಗಳ ಅಕ್ರಮ ವರ್ಗಾವಣೆ ಹಾಗೂ 57 ಕೆಜಿ ಚಿನ್ನದ ಗಟ್ಟಿ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಬೆಂಗಳೂರಿನ ನಿವಾಸದ ಮೇಲೆ ಬುಧವಾರ ಸಿಸಿಬಿ ದಾಳಿ ನಡೆಸಿದೆ.
ಇಂದು ಮಧ್ಯಾಹ್ನ ಸಿಸಿಬಿ ಡಿಸಿಪಿ ಗಿರೀಶ್ ನೇತೃತ್ವದ ಅಧಿಕಾರಿಗಳ ತಂಡ ನಗರದ ಚಾಲುಕ್ಯ ವೃತ್ತದಲ್ಲಿರುವ ಪಾರಿಜಾತ ಅಪಾರ್ಟ್‌ಮೆಂಟ್‌ನಲ್ಲಿರುವ ಜನಾರ್ದನ ರೆಡ್ಡಿ ಅವರ ಫ್ಲ್ಯಾಟ್‌ ಮೇಲೆ ದಾಳಿ ನಡೆಸಿದ್ದು ಹಲವು ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ.
ದಾಳಿ ಬಳಿಕ ಮಾತನಾಡಿದ ಡಿಸಿಪಿ ಗಿರೀಶ್ ಅವರು, ವಾರಂಟ್ ಪಡೆದು ರೆಡ್ಡಿಯವರ ಮನೆಯಲ್ಲಿ ಶೋಧ ನಡೆಸಿದ್ದೇವೆ. ಅಲ್ಲಿ ದೊರೆತಿರುವ ಕೆಲವು ದಾಖಲೆಗಳನ್ನು ಪರಿಶೀಲನೆ ನಡೆಸಬೇಕಿದೆ. ಈಗಲೇ ಏನನ್ನು ಹೇಳಲಾಗದು. ಪರಿಶೀಲನೆ ನಡೆಸಿದ ಬಳಿಕ ಹೆಚ್ಚಿನ ಮಾಹಿತಿ ನೀಡಲಾಗುವುದು ಎಂದರು. 
ಇನ್ನು ಆರ್ ಟಿ ನಗರದಲ್ಲಿರುವ ಜನಾರ್ದನ ರೆಡ್ಡಿ ಆಪ್ತ ಅಲಿಖಾನ್ ಅವರ ಮನೆ ಮೇಲೂ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
ಇದಕ್ಕು ಮುನ್ನ ಸುದ್ದಿಗೋಷ್ಠಿ ನಡೆಸಿದ್ದ ನಗರ ಪೊಲೀಸ್ ಆಯುಕ್ತ ಟಿ ಸುನೀಲ್ ಕುಮಾರ್ ಅವರು, 57 ಕೆಜಿ ಚಿನ್ನದ ಗಟ್ಟಿ ಖರೀದಿ ಪ್ರಕರಣದ ಜನಾರ್ದನ ರೆಡ್ಡಿ ಮತ್ತು ಅವರ ಆಪ್ತ ಆಲಿಖಾನ್ ಪಾತ್ರವಿದ್ದು, ಅವರನ್ನು ವಿಚಾರಣೆಗೆ ಒಳಪಡಿಸಬೇಕಿದೆ ಎಂದು ಹೇಳಿದ್ದರು. ಅಲ್ಲದೆ ತಲೆಮರೆಸಿಕೊಂಡಿರುವ ಜನಾರ್ದನ ರೆಡ್ಡಿ ಮತ್ತು ಆಲಿಖಾನ್‌ ಪತ್ತೆಗಾಗಿ ಡಿಸಿಪಿ ಮಂಜುನಾಥ್ ಚೌಧರಿ ಅವರ ನೇತೃತ್ವದಲ್ಲಿ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ತಿಳಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com