ಇನ್ನೂ ಪತ್ತೆಯಾಗದ ಬಳ್ಳಾರಿ 'ಗಣಿಧಣಿ' ಜನಾರ್ದನ ರೆಡ್ಡಿ: ಮುಂದುವರಿದ ಪೊಲೀಸರ ಶೋಧ

ಚಲಾವಣೆ ರದ್ದಾದ ನೋಟುಗಳ ಅಕ್ರಮ ವರ್ಗಾವಣೆ ಹಾಗೂ 57 ಕೆಜಿ ಚಿನ್ನದ ಗಟ್ಟಿ ಡೀಲ್ ಪ್ರಕರಣಕ್ಕೆ...
ಜನಾರ್ದನ ರೆಡ್ಡಿ
ಜನಾರ್ದನ ರೆಡ್ಡಿ

ಬೆಂಗಳೂರು: ಚಲಾವಣೆ ರದ್ದಾದ ನೋಟುಗಳ ಅಕ್ರಮ ವರ್ಗಾವಣೆ ಹಾಗೂ 57 ಕೆಜಿ ಚಿನ್ನದ ಗಟ್ಟಿ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಬೆಂಗಳೂರಿನ ನಿವಾಸದ ಮೇಲೆ ದಾಳಿ ನಡೆಸಿದ ಬೆಂಗಳೂರು ಕೇಂದ್ರ ಅಪರಾಧ ವಿಭಾಗದ ಪೊಲೀಸರಿಗೆ ಯಾವುದೇ ಪ್ರಯೋಜನವಾಗಿಲ್ಲ, ಜನಾರ್ದನ ರೆಡ್ಡಿಯ ಪತ್ತೆ ಇದುವರೆಗೆ ಆಗಿಲ್ಲ. ಇದೀಗ ಪೊಲೀಸರು ರೆಡ್ಡಿ ಪತ್ತೆಗೆ ನೆರೆ ರಾಜ್ಯದ ಪೊಲೀಸರ ಸಹಾಯವನ್ನು ಕೋರಿದ್ದಾರೆ.

ತಮ್ಮ ಮೇಲೆ ಗಂಭೀರ ಆರೋಪ ಕೇಳಿಬಂದು ಪೊಲೀಸರು ತನಿಖೆ ನಡೆಸಲು ಆರಂಭಿಸುತ್ತಿದ್ದಂತೆ ಜನಾರ್ದನ ರೆಡ್ಡಿ ಕಳೆದ ಕೆಲ ದಿನಗಳಿಂದ ತಲೆಮರೆಸಿಕೊಂಡಿದ್ದಾರೆ. ಅವರ ಕುಟುಂಬ ಸದಸ್ಯರ ಜೊತೆ ಕೂಡ ಸಂಪರ್ಕದಲ್ಲಿಲ್ಲ. ಅವರ ಮೊಬೈಲ್ ಫೋನ್ ಸಿಗ್ನಲ್ ಮೂಲಕ ಪತ್ತೆ ಹಚ್ಚಲು ಪ್ರಯತ್ನಿಸಿದ ಪೊಲೀಸರಿಗೆ ಯಾವುದೇ ಸುಳಿವು ಸಿಕ್ಕಿಲ್ಲ. ಬಹುಕೋಟಿ ರೂಪಾಯಿ ವಂಚನೆ ಆರೋಪ ರೆಡ್ಡಿ ವಿರುದ್ಧ ಕೇಳಿಬರುತ್ತಿದ್ದು, ಜಾರಿ ನಿರ್ದೇಶನಾಲಯದ ತನಿಖೆಯಿಂದ ಮುಕ್ತಿ ನೀಡುವುದಾಗಿ ಭರವಸೆ ನೀಡಿ ಉದ್ಯಮಿಯೊಬ್ಬರಿಂದ 18 ಕೋಟಿ ರೂಪಾಯಿ ಮೌಲ್ಯದ 57 ಕೆಜಿ ಚಿನ್ನದ ಗಟ್ಟಿಯನ್ನು ಪಡೆದುಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಜನಾರ್ದನ ರೆಡ್ಡಿಯ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದ್ದು, ಇತ್ತೀಚೆಗೆ ಕೊನೆಯ ಬಾರಿ ಅವರ ಮೊಬೈಲ್ ಫೋನ್ ಚಾಲನೆಯಲ್ಲಿ ಇದ್ದುದು ಹೈದರಾಬಾದ್ ನಲ್ಲಿ ಎಂದು ಪೊಲೀಸರಿಗೆ ತಿಳಿದುಬಂದಿದೆ. ಹಲವರನ್ನು ಈ ಸಂಬಂಧ ತನಿಖೆ ಮಾಡುತ್ತಿದ್ದೇವೆ, ಆದರೆ ಯಾವುದೇ ಸುಳಿವು ಸಿಕ್ಕಿಲ್ಲ ಎನ್ನುತ್ತಾರೆ ಪೊಲೀಸ್ ಅಧಿಕಾರಿಗಳು.

ಈ ಮಧ್ಯೆ ನಿನ್ನೆ ಸುದ್ದಿಗಾರರ ಜೊತೆ ಮಾತನಾಡಿದ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್, ನಮ್ಮ ತಂಡ ಜನಾರ್ದನ ರೆಡ್ಡಿ ಪತ್ತೆಗಾಗಿ ರಾಜ್ಯ ಮತ್ತು ಹೊರ ರಾಜ್ಯದಲ್ಲಿ ಹುಡುಕಾಟ ನಡೆಸುತ್ತಿದ್ದಾರೆ. ಪಕ್ಕದ ರಾಜ್ಯದ ಪೊಲೀಸರಿಗೆ ಯಾವುದೇ ಸುಳಿವು ಸಿಕ್ಕರೆ ಮಾಹಿತಿ ನೀಡುವಂತೆ ಕೋರಿದ್ದೇವೆ ಎಂದು ಹೇಳಿದರು.

ಸಿಸಿಬಿ ಪೊಲೀಸರು ಜನಾರ್ದನ ರೆಡ್ಡಿಯ ಬಳ್ಳಾರಿ ಮನೆಯಲ್ಲಿ ನಿನ್ನೆ ಶೋಧಕಾರ್ಯ ನಡೆಸಿ ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ದಾಖಲೆಗಳು ತನಿಖೆಗೆ ಪೂರಕವಾಗಿದೆಯೇ ಎಂದು ಪರಿಶೀಲನೆ ನಡೆಸುತ್ತಿದ್ದಾರೆ.

ಈ ಮಧ್ಯೆ ಜಾರಿ ನಿರ್ದೇಶನಾಲಯ, ಅಧಿಕಾರಿಗಳಿಗೆ ಎಲ್ಲಾ ಎಫ್ಐಆರ್ ಗಳ ನಕಲು ಪ್ರತಿಯನ್ನು ನೀಡುವಂತೆ ಕೋರಿದೆ. ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಪ್ರತ್ಯೇಕ ತನಿಖೆ ನಡೆಸುವ ಅಗತ್ಯವಿದೆಯೇ ಎಂದು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ರೆಡ್ಡಿ ಆಪ್ತ ಆಲಿಖಾನ್ ಗೆ ಬೆಂಗಳೂರು ಸಿಟಿ ಕೋರ್ಟ್ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿದ್ದು, ಅದನ್ನು ವಿರೋಧಿಸಿ ಅರ್ಜಿ ಹಾಕಲು ಹಿರಿಯ ಪೊಲೀಸ್ ಅಧಿಕಾರಿಗಳು ನಿರ್ಧರಿಸಿದ್ದಾರೆ. ಇದೇ 14ರಂದು ನಡೆಯಲಿರುವ ಕೇಸಿನ ವಿಚಾರಣೆಯಲ್ಲಿ,  ಆಲಿಖಾನ್ ಜಾಮೀನನ್ನು ರದ್ದುಪಡಿಸಬೇಕೆಂದು ನಾವು ಮನವಿ ಮಾಡಲಿದ್ದೇವೆ ಎಂದು ಸಿಸಿಬಿ ಅಧಿಕಾರಿಗಳು ಹೇಳಿದ್ದಾರೆ.

ಬೆಂಗಳೂರಿನ ಆರ್ ಟಿ ನಗರದಲ್ಲಿರುವ ಆಲಿ ಖಾನ್ ನಿವಾಸದಲ್ಲಿ ನಿನ್ನೆ ಪೊಲೀಸರು ತನಿಖೆ ನಡೆಸಿದಾಗ 5 ಜೀವಂತ ಸಿಡಿಮದ್ದುಗಳು ಸಿಕ್ಕಿದ್ದು ಅದನ್ನು ವಶಪಡಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com