28 ವರ್ಷಗಳ ನಂತರ, ಕಾಲೇಜುಗಳಲ್ಲಿ ವಿದ್ಯಾರ್ಥಿ ಚುನಾವಣೆ ಮರು ಜಾರಿಗೆ ಸರ್ಕಾರ ಚಿಂತನೆ

ಸುದೀರ್ಘ 28 ವರ್ಷಗಳ ನಂತರ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಮತ್ತೆ ಚುನಾವಣೆ ಕಣ ...
ಜಿ ಟಿ ದೇವೇಗೌಡ
ಜಿ ಟಿ ದೇವೇಗೌಡ
Updated on: 

ಬೆಂಗಳೂರು: ಸುದೀರ್ಘ 28 ವರ್ಷಗಳ ನಂತರ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಮತ್ತೆ ಚುನಾವಣೆ ಕಣ ರಂಗೇರಲಿದೆ. ವಿದ್ಯಾರ್ಥಿ ಸಂಘಟನೆ ಚುನಾವಣೆಯನ್ನು ಈ ವರ್ಷದಿಂದ ಮತ್ತೆ ಜಾರಿಗೆ ತರಲು ಉನ್ನತ ಶಿಕ್ಷಣ ಸಚಿವಾಲಯ ನಿರ್ಧರಿಸಿದೆ.

ವಿದ್ಯಾರ್ಥಿಗಳಿಂದ ಬರುತ್ತಿರುವ ಬೇಡಿಕೆ ಮತ್ತು ಕೆಲವು ರಾಜಕೀಯ ನಾಯಕರ ಸಲಹೆಗಳಿಂದ ಶಿಕ್ಷಣ ಇಲಾಖೆ ವಿದ್ಯಾರ್ಥಿ ಚುನಾವಣೆಯನ್ನು ಮರು ಜಾರಿಗೆ ತರಲು ನಿರ್ಧರಿಸಿದೆ.
ಮೈಸೂರಿನಲ್ಲಿ ಇದೇ ತಿಂಗಳ 28ರಂದು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರೊಂದಿಗೆ ಚರ್ಚಿಸಲಾಗುವುದು. ಆ ದಿನ ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳ ಉಪ ಕುಲಪತಿಗಳು ಉಪಸ್ಥಿತರಿರುತ್ತಾರೆ ಎಂದು ಉನ್ನತ ಶಿಕ್ಷಣ ಸಚಿವ ಜಿ ಟಿ ದೇವೇಗೌಡ ತಿಳಿಸಿದರು.

ಯುವಜನತೆಯಲ್ಲಿ ಧನಾತ್ಮಕ ನಾಯಕತ್ವ ಗುಣಗಳನ್ನು ಬೆಳೆಸಬೇಕಾದ ಅಗತ್ಯವಿದೆ. ಹೀಗಾಗಿ ಕ್ಯಾಂಪಸ್ ಗಳಲ್ಲಿ ವಿದ್ಯಾರ್ಥಿ ಚುನಾವಣೆಯನ್ನು ಜಾರಿಗೊಳಿಸುವ ಬಗ್ಗೆ ನನ್ನ ಸಹಮತವಿದೆ ಎಂದರು ಸಚಿವರು.

ಶಿಕ್ಷಣ ಸಂಸ್ಥೆಗಳಲ್ಲಿ ಚುನಾವಣೆ ಹೆಸರಿನಲ್ಲಿ ಗಲಾಟೆಗಳು, ಹಿಂಸೆಗಳು, ಜಾತಿ ರಾಜಕೀಯ ನಡೆಯುತ್ತವೆ ಎಂದು ಹೈಕೋರ್ಟ್ 1989-90ರಲ್ಲಿ ವಿದ್ಯಾರ್ಥಿ ಸಂಘಟನೆ ಚುನಾವಣೆಯನನು ನಿಷೇಧಿಸಿತ್ತು.

ಪ್ರೊ ಎನ್ ಆರ್ ಶೆಟ್ಟಿ ನೇತೃತ್ವದ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಕಾಯ್ದೆ (2000) ಪರಿಶೀಲನಾ ಸಮಿತಿ ಕಾಲೇಜು ಕ್ಯಾಂಪಸ್ ಗಳಲ್ಲಿ ಚುನಾವಣೆಯನ್ನು ಮರು ಜಾರಿಗೊಳಿಸಲು ಶಿಫಾರಸು ಮಾಡಿದೆ. ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಮತ್ತು ವಿದ್ಯಾರ್ಥಿ ಸಂಘಟನೆಗಳು ಕೂಡ ಚುನಾವಣೆಯನ್ನು ಬೆಂಬಲಿಸಿವೆ.

ಈ ಬಗ್ಗೆ ಮಾತನಾಡಿದ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಮಂಜುನಾಥ್ ಗೌಡ ಎಚ್ ಎಸ್, ಕಳೆದ 5 ವರ್ಷಗಳಿಂದ ಈ ಬಗ್ಗೆ ಸರ್ಕಾರಕ್ಕೆ ಮನವಿ ಮಾಡುತ್ತಿದ್ದೇವೆ. ಕಾಲೇಜುಗಳಲ್ಲಿ ಚುನಾವಣೆ ನಡೆಸುವುದರಿಂದ ಯುವಜನತೆಯಲ್ಲಿ ಧನಾತ್ಮಕ ನಾಯಕತ್ವ ಭಾವನೆ ಬೆಳೆಯುತ್ತದೆ. ಇದು ಕೇವಲ ರಾಜಕೀಯಕ್ಕೆ ಪ್ರವೇಶ ಎಂದು ತಿಳಿಯುವುದು ಮಾತ್ರವಲ್ಲದೆ ಪ್ರತಿ ವೃತ್ತಿಯಲ್ಲಿಯೂ ನಾಯಕರ ಅಗತ್ಯವಿದೆ ಎಂದರು.

ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ನ ರಾಜ್ಯ ಕಾರ್ಯದರ್ಶಿ ಹರ್ಷ ನಾರಾಯಣ ಮಾತನಾಡಿ, ಈ ಬಗ್ಗೆ ನಾವು ಕೂಡ ಉನ್ನತ ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಿದ್ದೇವೆ. ಹಿಂದಿನ ಸರ್ಕಾರಕ್ಕೆ ಕೂಡ ಮನವಿ ಮಾಡಿದ್ದೆವು ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com