ಮಣ್ಣಲ್ಲಿ ಮಣ್ಣಾದ ಜಾಫರ್ ಷರೀಫ್

ಹೃದಯಾಘಾತದಿಂದ ಭಾನುವಾರ ನಿಧನರಾಗಿದ್ದ ಕಾಂಗ್ರೆಸ್ ನ ಹಿರಿಯ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಸಿಕೆ ಜಾಫರ್...
ಜಾಫರ್ ಷರೀಫ್ ಪಾರ್ಥಿವ ಶರೀರ
ಜಾಫರ್ ಷರೀಫ್ ಪಾರ್ಥಿವ ಶರೀರ
ಬೆಂಗಳೂರು: ಹೃದಯಾಘಾತದಿಂದ ಭಾನುವಾರ ನಿಧನರಾಗಿದ್ದ ಕಾಂಗ್ರೆಸ್ ನ ಹಿರಿಯ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಸಿಕೆ ಜಾಫರ್ ಷರೀಫ್ ಅವರ ಅಂತ್ಯಕ್ರಿಯೆ ಸೋಮವಾರ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.
ಇಂದು ಮಧ್ಯಾಹ್ನ ನಂದಿದುರ್ಗ ರಸ್ತೆಯಲ್ಲಿರುವ ರುದ್ರಭೂಮಿಯಲ್ಲಿ ಮುಸ್ಲಿಂ ಸಂಪ್ರದಾಯದಂತೆ ಜಾಫರ್ ಷರೀಫ್ ಅವರ ಅಂತ್ಯ ಸಂಸ್ಕಾರ ನಡೆಸಲಾಯಿತು.
ಕಳೆದ ಶುಕ್ರವಾರ ನಮಾಜ್‌ಗೆ ತೆರಳುವ ವೇಳೆ ಹೃದಯಾಘಾತಕ್ಕೆ ಒಳಗಾಗಿದ್ದ ಜಾಫರ್ ಶರೀಫ್ ಅವರನ್ನು ಪೋರ್ಟಿಸ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಮಧ್ಯಾಹ್ನ ಕೊನೆಯುಸಿರೆಳೆದಿದ್ದರು.
ಜಾಫರ್ ಶರೀಫ್ ಅವರ ಪಾರ್ಥಿವ ಶರೀರವನ್ನು ನಗರದ ಕೋಲ್ಸ್ ಪಾರ್ಕ್ ಸಮೀಪವಿರುವ ಅವರ ನಿವಾಸದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ನಿನ್ನೆಯಿಂದ ಇಡಲಾಗಿತ್ತು. ಇಂದು ಬೆಳಿಗ್ಗೆ ಪಾರ್ಥಿವ ಶರೀರವನ್ನು ಹಜ್ ಭವನಕ್ಕೆ ತಂದು ಅಲ್ಲೂ ಪಕ್ಷದ ನಾಯಕರು ಹಾಗೂ  ಕಾರ್ಯಕರ್ತರ ದರ್ಶನಕ್ಕೆ ಇಡಲಾಗಿತ್ತು. ಅಲ್ಲದೆ, ಕಾಂಗ್ರೆಸ್ ಕಚೇರಿಗೆ ಪಾರ್ಥಿವ ಶರೀರವನ್ನು ತಂದು ಸಾರ್ವಜನಿಕರ ಮತ್ತು ಕಾರ್ಯಕರ್ತರ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಅದಾದ ನಂತರ ನಂದಿದುರ್ಗ ರಸ್ತೆಯಲ್ಲಿರುವ ರುದ್ರಭೂಮಿಯಲ್ಲಿ ಮುಸ್ಲಿಂ ಸಂಪ್ರದಾಯದಂತೆ ದಫನ್ ಮಾಡಲಾಯಿತು.
ಹಿರಿಯ ಕಾಂಗ್ರೆಸ್ ನಾಯಕರಾದ ಗುಲಾಂ ನಬಿ ಅಜಾದ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಡಾ. ಜಿ. ಪರಮೇಶ್ವರ್ ಸೇರಿದಂತೆ, ಪಕ್ಷದ ಅನೇಕ ಗಣ್ಯರು ಹಾಗೂ ಕಾರ್ಯಕರ್ತರು ಜಾಫರ್ ಷರೀಫ್ ಅಂತ್ಯ ಕ್ರಿಯೆಯಲ್ಲಿ ಭಾಗವಹಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com