ಸ್ಥಳದಲ್ಲಿಯೇ ಹಣ ಹಂಚಿ ನೆರೆದಿದ್ದವರ ಹುಬ್ಬೇರಿಸಿದ ಸಚಿವ ಜಮೀರ್ ಅಹ್ಮದ್ ಖಾನ್

ಆಹಾರ ಮತ್ತು ಪೂರೈಕೆ ಖಾತೆ ಸಚಿವ ಜಮೀರ್ ಅಹ್ಮದ್ ಖಾನ್ ಮಂಗಳೂರಿಗೆ ಹಲವು ಸರ್ಕಾರಿ ...
ಆಹಾರ ಖಾತೆ ಸಚಿವ ಜಮೀರ್ ಅಹ್ಮದ್ ಖಾನ್
ಆಹಾರ ಖಾತೆ ಸಚಿವ ಜಮೀರ್ ಅಹ್ಮದ್ ಖಾನ್

ಮಂಗಳೂರು: ಆಹಾರ ಮತ್ತು ಪೂರೈಕೆ ಖಾತೆ ಸಚಿವ ಜಮೀರ್ ಅಹ್ಮದ್ ಖಾನ್ ಮಂಗಳೂರಿಗೆ ಹಲವು ಸರ್ಕಾರಿ ಮತ್ತು ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಬಂದವರು ಕೆಲವು ಕಾರ್ಯಕ್ರಮಗಳಲ್ಲಿ  ಹಣವನ್ನು ಹಂಚಿ ಹಲವರಿಗೆ ಅಚ್ಚರಿಯನ್ನುಂಟುಮಾಡಿದ್ದಾರೆ.

ಸುಳ್ಯದ ಟೆಕ್ಕಿಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಾಲ್ವರು ವಿದ್ಯಾರ್ಥಿಗಳಿಗೆ ತಾವೇ ಖುದ್ದಾಗಿ ಶಾಲೆಯ ಟ್ರೋಫಿ ಜೊತೆಗೆ ನಗದು ವಿತರಿಸಿದ್ದಾರೆ. ಇಬ್ಬರು ವಿದ್ಯಾರ್ಥಿಗಳಿಗೆ ತಲಾ 26 ಸಾವಿರ ಮತ್ತು ಮತ್ತಿಬ್ಬರಿಗೆ ತಲಾ 10 ಸಾವಿರ ರೂಪಾಯಿ ವಿತರಿಸಿದ್ದಾರೆ. ಅಷ್ಟೇ ಅಲ್ಲದೆ ಶಾಲೆಗೆ 8 ಲಕ್ಷ ರೂಪಾಯಿ ದೇಣಿಗೆ ಘೋಷಿಸಿ ಸ್ಥಳದಲ್ಲಿಯೇ 5 ಲಕ್ಷ ರೂಪಾಯಿ ನಗದು ನೀಡಿ ಅಲ್ಲಿ ನೆರೆದಿದ್ದವರ ಹುಬ್ಬೇರುವಂತೆ ಮಾಡಿದರು.

ಪೇರಡ್ಕ ಎಂಬಲ್ಲಿ ಇನ್ನೊಂದು ಕಾರ್ಯಕ್ರಮದಲ್ಲಿ, ಜೋಡುಪಾಳದ ವ್ಯಕ್ತಿ ಇತ್ತೀಚಿನ ಪ್ರವಾಹ ಮತ್ತು ಭೂಕುಸಿತದಲ್ಲಿ ಭೂಮಿ ಕಳೆದುಕೊಂಡಿದ್ದರು. ಸಚಿವರ ಬಳಿ ಬಂದು ತಮ್ಮ ಕಷ್ಟ ಹೇಳಿಕೊಂಡು ಸಹಾಯ ಮಾಡುವಂತೆ ಮನವಿ ಮಾಡಿದರು. ಆಗ ಸ್ಥಳದಲ್ಲಿಯೇ ಸಚಿವರು ಆ ಹಿರಿಯ ವ್ಯಕ್ತಿಗೆ 50 ಸಾವಿರ ರೂಪಾಯಿ ನೀಡಿದರು. ಮತ್ತೊಂದು ಸಮಾರಂಭದಲ್ಲಿ 12 ಮುಸ್ಲಿಂ ಯುವಕರು ಹೋಗುವ ಉಮ್ರಾ ತೀರ್ಥಯಾತ್ರೆಯ ವೆಚ್ಚವನ್ನು ತಾವೇ ಭರಿಸುವುದಾಗಿ ಘೋಷಿಸಿದರು. ನಾಲ್ಕು ಭಜರಂಗ ದಳ ಕಾರ್ಯಕರ್ತರಿಗೆ  ಯಾವುದಾದರೂ ತೀರ್ಥಕ್ಷೇತ್ರಗಳಿಗೆ ಅಥವಾ ವಿದೇಶದ ಸ್ಥಳಕ್ಕೆ ಕುಟುಂಬ ಪ್ರವಾಸ ಮಾಡುವುದಾದರೇ ತಾವೇ ವೆಚ್ಚ ಭರಿಸುವುದಾಗಿ ಘೋಷಿಸಿದರು. ಈ 16 ಮಂದಿ ಯುವಕರು ಇತ್ತೀಚೆಗೆ ಜೋಡುಪಾಳದಲ್ಲಿ ಪ್ರವಾಹ ಪೀಡಿತರಿಗೆ ಸ್ವಯಂಪ್ರೇರಿತವಾಗಿ ಸಹಾಯ ಮಾಡಿದ್ದರು.

ಸಂಘಟನೆಯೊಂದಕ್ಕೆ ಆಂಬ್ಯುಲೆನ್ಸ್ ನೀಡುವುದಾಗಿ ಭರವಸೆ ನೀಡಿದರು. ನೇಪಾಳದಲ್ಲಿ ನಡೆದ ದಕ್ಷಿಣ ಏಷ್ಯಾ ಐಟಿಎಫ್ ಚಾಂಪಿಯನ್ ಷಿಪ್ ನಲ್ಲಿ ಚಿನ್ನ ಗೆದ್ದ ರಿನ್ಶಾ ಮರಿಯಮ್ ಗೆ 20 ಸಾವಿರ ರೂಪಾಯಿ ಧನಸಹಾಯ ನೀಡಿದ್ದಾರೆ. ನಂತರ ಪೇರಡ್ಕದಲ್ಲಿ ಮೊಹಿದ್ದಿನ್ ಜುಮ್ಮಾ ಮಸೀದಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಲ್ಲಿನ ರಸ್ತೆ ಕಾಮಗಾರಿಗೆ 70 ಲಕ್ಷ ರೂಪಾಯಿ ನೀಡುವುದಾಗಿ ಘೋಷಿಸಿದರು. ನಂತರ ಇಂಟರ್ ಲಾಕ್ ಟೈಲ್ಸ್ ಗೆ 10 ಲಕ್ಷ ಹಾಗೂ ವಿವಿಧ ಅಬಿವೃದ್ಧಿ ಕಾರ್ಯಗಳಿಗೆ 25 ಲಕ್ಷ ರೂಪಾಯಿ ಘೋಷಿಸಿದರು. ಒಂದು ವಾರದೊಳಗೆ ಹಣ ಬಿಡುಗಡೆಮಾಡುವುದಾಗಿ ಕೂಡ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com