ಸಾಂದರ್ಭಿಕ ಚಿತ್ರ
ರಾಜ್ಯ
ಬೆಂಗಳೂರು: ಕಾರು ಅಪಘಾತದಲ್ಲಿ 21 ವರ್ಷದ ವಿದ್ಯಾರ್ಥಿನಿ ಸಾವು
ಕುಡಿದ ಅಮಲಿನಲ್ಲಿ ಕಾರು ಚಲಾಯಿಸಿದ ಪರಿಣಾಮ ಕಾರು ಗೋಡೆಗೆ ಡಿಕ್ಕಿ ಹೊಡೆದು 21 ವರ್ಷದ ಇಂಟಿರಿಯರ್...
ಬೆಂಗಳೂರು: ಕುಡಿದ ಅಮಲಿನಲ್ಲಿ ಕಾರು ಚಲಾಯಿಸಿದ ಪರಿಣಾಮ ಕಾರು ಗೋಡೆಗೆ ಡಿಕ್ಕಿ ಹೊಡೆದು 21 ವರ್ಷದ ಇಂಟಿರಿಯರ್ ಡಿಸೈನಿಂಗ್ ವಿದ್ಯಾರ್ಥಿನಿಯೊಬ್ಬರು ಮೃತಪಟ್ಟಿದ್ದು, ಆಕೆಯ ನಾಲ್ವರು ಸ್ನೇಹಿತರು ಗಾಯಗೊಂಡಿದ್ದಾರೆ.
ಹಳೆ ಏರ್ ಪೋರ್ಟ್ ರಸ್ತೆಯಲ್ಲಿ ಶುಕ್ರವಾರ ತಡ ರಾತ್ರಿ ಈ ಅಪಘಾತ ಸಂಭವಿಸಿದ್ದು, ಕುಡಿದು ಕಾರು ಚಲಾಯಿಸುತ್ತಿದ್ದ ಶಶಾಂಕ್ ಚೌಹ್ವಾಣ್ ವಿರುದ್ಧ ಹಲಸೂರು ಪೊಲೀಸರು ಕೇಸ್ ದಾಖಲಿಸಿದ್ದಾರೆ.
ಅಪಘಾತದಲ್ಲಿ ಮೃತ ವಿದ್ಯಾರ್ಥಿನಿಯನ್ನು ದೇವಂಶಿ ರಾಜಗುರು ಎಂದು ಗುರುತಿಸಲಾಗಿದ್ದು, ಗಾಯಗೊಂಡವರನ್ನು ಭೂಮಿಕಾ ದೇವಂಶಿ, ರಘುನಂದನ್, ಆದಿತ್ಯ ಅಡಿಗ ಹಾಗೂ ಅಮಿಶಾ ಪಟೇಲ್ ಎಂದು ಗುರುತಿಸಲಾಗಿದೆ. ಇವರೆಲ್ಲರೂ ಕೊರಮಂಗಲದ ಖಾಸಗಿ ಕಾಲೇಜ್ ವಿದ್ಯಾರ್ಥಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ನಿನ್ನೆ ರಾತ್ರಿ ಪಾರ್ಟಿ ಮಾಡಲು ಇಂದಿರಾ ನಗರಕ್ಕೆ ಆಗಮಿಸಿದ್ದೇವೆ. ವಾಪಸ್ ಹೋಗುವ ವೇಳೆ ಕುಡಿದು ಕಾರು ಚಲಾಯಿಸುತ್ತಿದ್ದ ಶಶಾಂಕ್ ನ ನಿಯಂತ್ರಣ ತಪ್ಪಿ ಗೋಡೆಗೆ ಡಿಕ್ಕಿ ಹೊಡೆಯಿತು ಎಂದು ಗಾಯಾಳು ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ