ಕಬ್ಬಿಣದ ಕಡಲೆಯಾಗಿದ್ದ ಇಂಗ್ಲಿಷ್ ಈಗ ಈ ಶಾಲೆ ಮಕ್ಕಳಿಗೆ ಸುಲಲಿತ; ಶಿಕ್ಷಕಿಗೆ ಸಲಾಂ

ಎರಡು ವರ್ಷಗಳ ಹಿಂದೆ ಬೆಂಗಳೂರಿನ ಶಿವಾಜಿನಗರದ ಬಿಬಿಎಂಪಿ ಉನ್ನತ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ...
ತರಗತಿಯಲ್ಲಿ ಪಾಠ ಮಾಡುತ್ತಿರುವ ರಾಧಾ ಕುಮಾರಿ ಕೆ ಎಸ್
ತರಗತಿಯಲ್ಲಿ ಪಾಠ ಮಾಡುತ್ತಿರುವ ರಾಧಾ ಕುಮಾರಿ ಕೆ ಎಸ್

ಬೆಂಗಳೂರು: ಎರಡು ವರ್ಷಗಳ ಹಿಂದೆ ಬೆಂಗಳೂರಿನ ಶಿವಾಜಿನಗರದ ಬಿಬಿಎಂಪಿ ಉನ್ನತ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ ಮಕ್ಕಳು ಇಂಗ್ಲಿಷ್ ನಲ್ಲಿ ವರ್ಣಮಾಲೆ ಮತ್ತು ತಮ್ಮ ಹೆಸರುಗಳನ್ನು ಬರೆಯಲು ಕಷ್ಟಪಡುತ್ತಿದ್ದರು. ಇಂದು ಅವರು ಕಷ್ಟದ ಶಬ್ದಗಳನ್ನು ಬರೆಯುವುದು, ಓದುವುದು ಮಾತ್ರವಲ್ಲದೆ ಅವುಗಳನ್ನು ಸರಿಯಾದ ಉಚ್ಛಾರದಲ್ಲಿ ಓದಲು ಕಲಿತುಕೊಂಡಿದ್ದಾರೆ. ಇದಕ್ಕೆ ಕಾರಣ ಅವರ  ಶಿಕ್ಷಕಿ.

ಶಿವಾಜಿನಗರ ಟಾಸ್ಕರ್ ಟೌನ್ ನಲ್ಲಿರುವ ಬಿಬಿಎಂಪಿ ಉನ್ನತ ಪ್ರಾಥಮಿಕ ಶಾಲೆಯ ಇಂಗ್ಲಿಷ್ ಶಿಕ್ಷಕಿ ರಾಧಾ ಕುಮಾರಿ ಕೆ ಎಸ್ ಅವರನ್ನು ಮಾತನಾಡಿಸಿದಾಗ ಹಲವು ವಿಷಯಗಳು ತಿಳಿದುಬಂತು. ಈ ಶಾಲೆಯಲ್ಲಿ ಒಂದರಿಂದ 7ನೇ ತರಗತಿಯವರೆಗೆ 121 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಈ ಮಕ್ಕಳಿಗೆ ರಾಧಾ ಅವರು ಕೇವಲ ಪಠ್ಯಪುಸ್ತಕದಲ್ಲಿರುವುದನ್ನು ಮಾತ್ರ ಹೇಳಿಕೊಡುವುದಲ್ಲ, ಅದರಾಚೆಗೆ ಕೂಡ ಸಾಮಾನ್ಯ ಜ್ಞಾನ ಹೇಳಿಕೊಡುತ್ತಾರೆ, ಇಂಗ್ಲಿಷ್ ನ ಕಠಿಣ ಶಬ್ದಗಳು ಮತ್ತು ವಾಕ್ಯಗಳನ್ನು ಮಕ್ಕಳಿಗೆ ಪರಿಚಯಿಸುತ್ತಾರೆ.

ಇಂಗ್ಲಿಷ್ ಸಾಹಿತ್ಯದಲ್ಲಿ ಬಿ ಎ ಪದವಿ ಮುಗಿಸಿರುವ ರಾಧಾ ಡಿಎಡ್ ಮಾಡಿದ್ದಾರೆ. ಪಿಯುಸಿವರೆಗೆ ಕನ್ನಡ ಮಾಧ್ಯಮದಲ್ಲಿ ಓದಿದವರು. ನಂತರ ಕೋಲಾರದಲ್ಲಿ ಸರ್ಕಾರಿ ಶಾಲೆ ಮತ್ತು ಕಾಲೇಜುಗಳಲ್ಲಿ ಶಿಕ್ಷಣ ಪೂರೈಸಿದರು.

ಬಿ.ಎಯಲ್ಲಿ ಇಂಗ್ಲಿಷ್ ಸಾಹಿತ್ಯ ತೆಗೆದುಕೊಂಡಾಗ ನನಗೆ ಭಯವಾಯಿತು. ಆರಂಭದಲ್ಲಿ ತರಗತಿಯಲ್ಲಿ ಉಪನ್ಯಾಸಕರು ಪಾಠ ಮಾಡುವಾಗ ಅರ್ಥ ಮಾಡಿಕೊಳ್ಳಲು ಕಷ್ಟವಾಗುತ್ತಿತ್ತು. ಆದರೆ ನಂತರ ನಿಧಾನವಾಗಿ ಅರ್ಥಕೋಶದ ಸಹಾಯದಿಂದ ಓದುತ್ತಾ ಇಂಗ್ಲಿಷ್ ಭಾಷೆಯನ್ನು ಇಷ್ಟಪಡಲು ಆರಂಭಿಸಿದೆ ಎನ್ನುತ್ತಾರೆ. ತಾವು ಡಿಎಡ್ ಓದುವಾಗ ದೀಪಾ ಟೀಚರ್ ಸಹಾಯ ಮಾಡಿದ್ದರು ಎಂದು ನೆನೆಯುತ್ತಾರೆ ರಾಧಾ.

ದೀಪಾ ಅವರು ನಮಗೆ ಇಂಗ್ಲಿಷ್ ಬೋಧನೆಯ ವಿಧಾನವನ್ನು ಹೇಳಿಕೊಟ್ಟರು. ಅದರಂತೆ ನಾನು ಅವರಿಂದ ಕೆಲವು ಸಲಹೆಗಳನ್ನು ಪಡೆದುಕೊಂಡೆ. ಬಿಬಿಎಂಪಿ ಶಾಲೆಯಲ್ಲಿ ಇದು ನನ್ನ 7ನೇ ವರ್ಷದ ಸೇವೆ. ಮಕ್ಕಳು ನನ್ನನ್ನು ಮೊದಲು ಪ್ರೀತಿಸಬೇಕು, ಶಿಕ್ಷಕರನ್ನು ಮಕ್ಕಳು ಪ್ರೀತಿಸಲು ಆರಂಭಿಸಿದರೆ ನಂತರ ಅವರಿಗೆ ಅತ್ಯಂತ ಕಷ್ಟವೆನಿಸುವ ವಿಷಯಗಳು ಕೂಡ ಇಷ್ಟವಾಗುತ್ತದೆ ಎನ್ನುತ್ತಾರೆ ರಾಧಾ.

ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ವರದಿಗಾರ್ತಿ ಈ ಶಾಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ರಾಧಾ ಅವರು 6ನೇ ತರಗತಿ ಮಕ್ಕಳಿಗೆ ''How do Bees make Honey'' ಎಂಬ ಪಾಠ ಮಾಡುತ್ತಿದ್ದರು. ಪಾಠ ಓದಿ ಅದರ ಸಾರಾಂಶ ಮತ್ತು ಅರ್ಥ ಹೇಳುವ ಬದಲು ತರಗತಿಯ ಕಪ್ಪು ಹಲಗೆ ಮೇಲೆ ಜೇನು, ಜೇನುಹುಳಗಳ ಚಿತ್ರ ಬಿಡಿಸಿ ಅವುಗಳ ಜೀವನಚಕ್ರ ಹೇಗೆ, ಜೇನುತುಪ್ಪ ಹೇಗೆ ತಯಾರಿಸುತ್ತವೆ, ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂದು ವಿವರವಾಗಿ ಹೇಳುತ್ತಿದ್ದರು. ಅದು ಕೂಡ ಇಂಗ್ಲಿಷ್ ನಲ್ಲಿ. ಮಕ್ಕಳಿಗೆ ಹೆಚ್ಚು ಅರ್ಥವಾಗುತ್ತಿತ್ತು ಮತ್ತು ಕೇಳಲು ಆಸಕ್ತಿ ತೋರಿಸುತ್ತಿದ್ದರು.

ಮಕ್ಕಳ ಕನಸು ಈಡೇರಿಸಲು ವೃತ್ತಿ ಆಯ್ಕೆ: ಕನ್ನಡ ಮಾಧ್ಯಮ ಸರ್ಕಾರಿ ಶಾಲೆಯ ಮಕ್ಕಳಿಗೆ ಇಂಗ್ಲಿಷ್ ಭಾಷೆ ಸುಲಭವಾಗಲು ರಾಧಾ ಸರಳ ಕ್ರಮಗಳನ್ನು ಅನುಸರಿಸುತ್ತಾರೆ, ಇಂಗ್ಲಿಷ್ ಶಬ್ದಗಳಿಗೆ ಕನ್ನಡದಲ್ಲಿ ಅರ್ಥ ಹೇಳುತ್ತಾರೆ. ಅವರಿಗೆ ಪ್ರಾಸಬದ್ಧ ಪದಗಳು ಮತ್ತು ಅವುಗಳ ಉಚ್ಛಾರವನ್ನು ಹೇಳಿಕೊಡುತ್ತಾರೆ.

ಈ ಶಾಲೆಗೆ ಬರುವ ಮಕ್ಕಳು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಂದ ಬರುವವರಾಗಿದ್ದು ವಿವಿಧ ಮಾತೃ ಭಾಷೆಗಳನ್ನು ಮಾತನಾಡುವವರಾಗಿದ್ದಾರೆ. ಅವರ ಉಚ್ಛಾರಣೆ ಬೇರೆ ಬೇರೆ ರೀತಿ ಇರುತ್ತದೆ. ಅವರಿಗೆ ಹೇಳಿಕೊಡುವುದು ನಿಜಕ್ಕೂ ಸವಾಲಿನ ಕೆಲಸ, ಆದರೆ ಅದನ್ನು ಇಷ್ಟಪಟ್ಟು ಮಾಡುತ್ತೇನೆ ಎನ್ನುತ್ತಾರೆ ರಾಧಾ ಕುಮಾರಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com