ಪ್ರಧಾನಿ ಮೋದಿ ಭೇಟಿ ಮಾಡಿದ ಸಿಎಂ ಕುಮಾರಸ್ವಾಮಿ: ಅತಿವೃಷ್ಟಿ ಹಾನಿ ಪರಿಹಾರಕ್ಕೆ 1,199 ಕೋಟಿ ರೂ. ಮನವಿ

ಕೇಂದ್ರದ ತೈಲ ನೀತಿಯಿಂದಾಗಿ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಏರಿಕೆಯಾಗುತ್ತಿದ್ದು, ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಮೇಲಿನ ಸೆಸ್ ಇಳಿಸುವ ಸಂಬಂಧ ...
ಎಚ್.ಡಿ ಕುಮಾರಸ್ವಾಮಿ ಮತ್ತು ಪಿಎಂ ನರೇಂದ್ರ ಮೋದಿ ಭೇಟಿ
ಎಚ್.ಡಿ ಕುಮಾರಸ್ವಾಮಿ ಮತ್ತು ಪಿಎಂ ನರೇಂದ್ರ ಮೋದಿ ಭೇಟಿ
ನವದೆಹಲಿ: ಕೇಂದ್ರದ ತೈಲ ನೀತಿಯಿಂದಾಗಿ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಏರಿಕೆಯಾಗುತ್ತಿದ್ದು, ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಮೇಲಿನ ಸೆಸ್ ಇಳಿಸುವ ಸಂಬಂಧ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ. 
ಪ್ರಧಾನಿ ಮೋದಿ ಭೇಟಿ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ರಾಜ್ಯ ಸರ್ಕಾರದಿಂದ ಸೆಸ್ ಕಡಿಮೆ ಮಾಡುವ ಚಿಂತನೆ ಇದೆ. ನಮ್ಮ ಆರ್ಥಿಕ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿಕೊಂಡರೆ ನಮ್ಮಲ್ಲಿ ದರ ಕಡಿಮೆಯಿದೆ. ಕೇಂದ್ರ ಸರ್ಕಾರದ ತೈಲ ನೀತಿಗಳ ಬದಲಾವಣೆಯಿಂದಾಗಿ ಬೆಲೆ ಏರಿಕೆಯಾಗಿದೆ ಎಂದು ತಿಳಿಸಿದರು.
ಕೊಡಗು ಮತ್ತು ನೆರೆಯ ಮಲೆನಾಡು ಹಾಗೂ ಕರಾವಳಿ ಭಾಗದ ಜಿಲ್ಲೆಗಳಲ್ಲಿ ಅತಿವೃಷ್ಟಿಯಿಂದ ಸಂಭವಿಸಿದ ಹಾನಿಯನ್ನು ಸಮೀಕ್ಷೆ ಮಾಡಲು ಕೂಡಲೇ ಕೇಂದ್ರ ಸರ್ಕಾರವು ಅಧಿಕಾರಿಗಳ ಎರಡು ತಂಡಗಳನ್ನು ಕಳುಹಿಸುವುದಾಗಿ ಪ್ರಧಾನಿ ಮೋದಿ ಭರವಸೆ ನೀಡಿರುವುದಾಗಿ ಸಿಎಂ ತಿಳಿಸಿದ್ದಾರೆ, ರಾಜ್ಯದ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಅತಿವೃಷ್ಟಿ ಹಾಗೂ ಒಳನಾಡಿನಲ್ಲಿ ಬರ ಪರಿಸ್ಥಿತಿ ತಲೆದೋರಿರುವ ಬಗ್ಗೆ ಮನವರಿಕೆ ಮಾಡಿ, ಕೊಡಗು ಹಾಗೂ ನೆರೆಯ ಜಿಲ್ಲೆಗಳಿಗೆ ಪುನರ್ವಸತಿ ಹಾಗೂ ಪರಿಹಾರ ಕಾರ್ಯಗಳಿಗಾಗಿ 1,199 ಕೋಟಿ ರೂ. ಗಳ ಪ್ಯಾಕೇಜ್ ಘೋಷಿಸಿ, ಅನುದಾನ ಬಿಡುಗಡೆ ಮಾಡುವಂತೆ ಮಾಡಿದ ಮನವಿಗೆ ಪ್ರಧಾನ ಮಂತ್ರಿಯವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಸಿಎಂ ತಿಳಿಸಿದ್ದಾರೆ.
ಕೊಡಗು ಮತ್ತು ನೆರೆಯ ಕರಾವಳಿ ಹಾಗೂ ಮಲೆನಾಡು ಭಾಗದ ಜಿಲ್ಲೆಗಳಲ್ಲಿ ಸತತ ಭಾರಿ ಮಳೆಯಿಂದಾಗಿ ಪ್ರವಾಹ ಹಾಗೂ ಭೂಕುಸಿತ ಉಂಟಾಗಿ ಜನ-ಜಾನುವಾರುಗಳು ಜೀವ ಕಳೆದುಕೊಂಡಿದ್ದು, ಸಾವಿರಾರು ಜನ ನಿರಾಶ್ರಿತರಾಗಿದ್ದಾರೆ. ಆಗಸ್ಟ್ 2 ನೇ ವಾರದಲ್ಲಿ ಕಳೆದ 118 ವರ್ಷಗಳಲ್ಲೇ ದಾಖಲೆ ಮಳೆ ಸುರಿದಿದ್ದರಿಂದ ಅಪಾರ ನಷ್ಟ ಸಂಭವಿಸಿದ್ದು, ಕೃಷಿ, ತೋಟಗಾರಿಕೆ ಹಾಗೂ ವಾಣಿಜ್ಯ ಬೆಳೆಗಳಿಗೆ, ಮೂಲಸೌಕರ್ಯ, ಮನೆಗಳಿಗೆ ತೀವ್ರ ಹಾನಿಯುಂಟಾಗಿದೆ. ಅತಿವೃಷ್ಟಿಯಿಂದಾಗಿ ಈ ಜಿಲ್ಲೆಗಳಲ್ಲಿ ಒಟ್ಟು 3,705.87 ಕೋಟಿ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. .
ಅಂತೆಯೇ ಕರ್ನಾಟಕದ ಒಳನಾಡಿನಲ್ಲಿ 17 ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ ತಲೆದೋರಿದ್ದು, ಈ ಕುರಿತೂ ಸಹ ನಷ್ಟದ ಪ್ರಮಾಣ ಅಂದಾಜು ಮಾಡಲಾಗುತ್ತಿದ್ದು, ಈ ಕುರಿತು ನಾಳೆ ಸಂಪುಟ ಉಪಸಮಿತಿ ಸಭೆ ನಡೆಸಿ ಪ್ರಸ್ತಾವನೆಯನ್ನು  ಕೇಂದ್ರಕ್ಕೆ  ಸಲ್ಲಿಸುವುದಾಗಿ ಸಿಎಂ ತಿಳಿಸಿದ್ದಾರೆ. ಇನ್ನೂ ಮೇಕೆದಾಟು ಯೋಜನೆ ಬಗ್ಗೆಯೂ ಪ್ರಧಾನಿಗಳ ಜೊತೆ ಚರ್ಚಿಸಿರುವುದಾಗಿತಿಳಿಸಿದ್ದಾರೆ.
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್, ಕಂದಾಯ ಸಚಿವ ಆರ್. ವಿ.ದೇಶಪಾಂಡೆ, ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್, ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ, ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಮುಖ್ಯಮಂತ್ರಿ ಗಳೊಂದಿಗೆ ನಿಯೋಗದಲ್ಲಿ ಇದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com