

ಪಾವಗಡ : ಪಾವಗಡ ತಾಲೂಕಿಗೆ ಕುಡಿಯುವ ನೀರಿನ ಯೋಜನೆಗೆ ಸರ್ಕಾರ 2 ಸಾವಿರದ 300 ಕೋಟಿ ರೂ. ಅನುದಾನ ಮಂಜೂರು ಮಾಡಿದ್ದು, ಬಹುಕೋಟಿ ಭದ್ರಾ ಮೇಲ್ದಂಡೆ ಯೋಜನೆಗೆ ಅಕ್ಟೋಬರ್ ತಿಂಗಳಿನಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಕಾರ್ಮಿಕ ಸಚಿವ ಎಂ. ವೆಂಕಟರಮಣಪ್ಪ ಹೇಳಿದ್ದಾರೆ.
ಇಂದಿರಾ ಕ್ಯಾಂಟೀನ್ ಉದ್ಘಾಟನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೈಪ್ ಲೈನ್ ಕಾಮಗಾರಿ ಮುಗಿದ ಕೂಡಲೇ ಪಾವಗಡಕ್ಕೆ ನೀರು ದೊರೆಯಲಿದ್ದು, ಡಿಸೆಂಬರ್ ಅಂತ್ಯದೊಳಗೆ ಭದ್ರಾ ಮೇಲ್ದಂಡೆಯ ನೀರು ಚಿತ್ರದ ಜಿಲ್ಲೆಯ ವಾಣಿ ವಿಲಾಸ ಸಾಗರ ತಲುಪಲಿದೆ ಎಂದರು.
ಜೆಡಿಎಸ್ - ಕಾಂಗ್ರೆಸ್ ಸಂಮ್ಮಿಶ್ರ ಸರ್ಕಾರ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಆದ್ಯತೆ ನೀಡಿದ್ದು, 30 ರಿಂದ 35 ಕೆರೆಗಳನ್ನು ತುಂಬಿಸುವ ಬಗ್ಗೆ ಸರ್ವೇ ನಡೆಸಲಾಗಿದೆ. ವೆಂಕಟಪುರ ಮತ್ತು ದೊಮ್ಮತಮರಿ ಕೆರೆಗಳನ್ನು ಎತ್ತಿನಹೊಳೆ ನೀರಿನಿಂದ ತುಂಬಲಾಗುವುದು ಎಂದು ತಿಳಿಸಿದರು.