
ಬೆಂಗಳೂರು: ಇನ್ನು ಆರು ತಿಂಗಳೊಳಗೆ ಉಚಿತ ವೈಫೈ ಸೇವೆಯನ್ನು ಬೆಂಗಳೂರು ನಗರದಾದ್ಯಂತ ಒದಗಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರ ಉಸ್ತುವಾರಿ ಸಚಿವ ಡಾ ಜಿ ಪರಮೇಶ್ವರ್ ತಿಳಿಸಿದ್ದಾರೆ.
ಗೋವಿಂದರಾಜನಗರ ವಾರ್ಡ್ ನಲ್ಲಿ ಉಚಿತ ವೈ ಫೈ ಸೇವೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಬೆಂಗಳೂರು ನಗರದ ಎಲ್ಲಾ 198 ವಾರ್ಡ್ ಗಳಿಗೆ ಉಚಿತ ವೈಫೈ ಸೇವೆ ನೀಡಲಾಗುವುದು. ಬೆಂಗಳೂರು ನಿರ್ಮಾತೃ ಕೆಂಪೇಗೌಡರು ದೂರದೃಷ್ಟಿ ಹೊಂದಿದವರಾಗಿದ್ದರು. ಅವರು ಬೇರೆ ಯಾವುದೇ ಉತ್ತಮ ಯೋಜನೆಕಾರರಿಗಿಂತ ಚೆನ್ನಾಗಿ ಬೆಂಗಳೂರು ನಗರವನ್ನು ನಿರ್ಮಿಸಿದರು. ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಬೆಂಗಳೂರು ನಗರದಲ್ಲಿ ಅಭಿವೃದ್ಧಿಪರ ಕೆಲಸಗಳು ಕೂಡ ವೇಗವಾಗಿ ನಡೆಯುತ್ತಿವೆ ಎಂದರು.
ನಗರದಲ್ಲಿರುವ ಹಲವು ಆಪ್ಟಿಕಲ್ ಫೈಬರ್ ಕೇಬಲ್ ಗಳು ಅಕ್ರಮವಾಗಿದ್ದು ಅವುಗಳನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ. ಬಿಬಿಎಂಪಿಯಿಂದ ಕಂದಾಯ ಸಂಗ್ರಹಿಸುವ ಕಾರ್ಯಕ್ಕೆ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಬಿಬಿಎಂಪಿ 2,500 ಕೋಟಿ ರೂಪಾಯಿ ಕಂದಾಯ ಸಂಗ್ರಹಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಹಲವು ಕ್ರಮಗಳಿಂದ ಸಂಪನ್ಮೂಲ ಹೆಚ್ಚಿಸಲು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
ನಗರದಾದ್ಯಂತ ಅಕ್ರಮ ಜಾಹಿರಾತು ಫಲಕಗಳನ್ನು ತೆರವುಗೊಳಿಸುವ ಕುರಿತು ಬಿಬಿಎಂಪಿ ಅಭಿಯಾನದ ಬಗ್ಗೆ ಮಾತನಾಡಿದ ಅವರು, ನಗರದ ಸೌಂದರ್ಯವನ್ನು ಹಾಳುಮಾಡುವ ಫ್ಲೆಕ್ಸ್ ಗಳನ್ನು ತೆರವುಗೊಳಿಸಲಾಗುತ್ತಿದೆ ಎಂದರು.
Advertisement