ಬೆಂಗಳೂರು: ನಗರದಲ್ಲಿ ಶೇ.100ರಷ್ಟು ಕಸ ವಿಂಗಡಣೆಯ ಗುರಿ ಸಾಧಿಸುತ್ತೇವೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯ ನೂತನ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಅವರು ಶುಕ್ರವಾರ ಹೇಳಿದ್ದಾರೆ.
ಇಂದು ಮಹಾನಗರ ಪಾಲಿಕೆಯಲ್ಲಿ ನಡೆದ ಭಾರಿ ಹೈಡ್ರಾಮಾಗಳ ಮಧ್ಯೆ ಬೆಂಗಳೂರಿನ 52ನೇ ಮೇಯರ್ ಆಗಿ ಆಯ್ಕೆಯಾದ ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಗಂಗಾಂಬಿಕೆ ಅವರು, ಸ್ವಚ್ಛತೆ, ಆರೋಗ್ಯ, ಉತ್ತಮ ಪರಿಸರ ಮತ್ತು ರಾಜಕಾಲುವೆ ಒತ್ತುವರಿ ತೆರವಿಗೆ ಹೆಚ್ಚು ಒತ್ತುಕೊಡುವುದಾಗಿ ಭರವಸೆ ನೀಡಿದ್ದಾರೆ.
ನಗರದಲ್ಲಿ ಕಸದ್ದೇ ಅತಿದೊಡ್ಡ ಸಮಸ್ಯೆಯಾಗಿದ್ದು, ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವುದಾಗಿ ಹಾಗೂ ನಗರನ್ನು ಕಸಮುಕ್ತ ಮಾಡುವುದಾಗಿ ಹೇಳಿದರು. ಅಲ್ಲದೆ ಮೂಲದಲ್ಲೇ ಕಸ ವಿಂಗಡಣೆ ಮಾಡಿದರೆ ಈ ಸಮಸ್ಯೆಯನ್ನು ಸುಲಭವಾಗಿ ಪರಿಹರಿಸಬಹುದು. ಈ ವಿಚಾರದಲ್ಲಿ ಜನರ ಸಹಕಾರ ಅಗತ್ಯ ಎಂದರು.
ಬೆಂಗಳೂರು ಅಭಿವೃದ್ಧಿ ಎಂದರೆ ಆದಾಯ ಕ್ರೋಢೀಕರಣ ಮುಖ್ಯವಾಗಿದ್ದು, ಆ ನಿಟ್ಟಿನಲ್ಲಿ ಗಮನ ಹರಿಸುತ್ತೇನೆ. ಬಿಬಿಎಂಪಿ ಮಾರುಕಟ್ಟೆಗಳಿಂದ ಶುಲ್ಕ ಸಂಗ್ರಹಕ್ಕೆ ಆದ್ಯತೆ ನೀಡುತ್ತೇನೆ ಎಂದರು.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಬಿಬಿಎಂಪಿಗೆ ಸಾಕಷ್ಟು ಅನುದಾನ ನೀಡಿದ್ದಾರೆ. ಈಗ ಉಪ ಮುಖ್ಯಮಂತ್ರಿ ಪರಮೇಶ್ವರ್ ಅವರೂ ನೆರವು ಕೊಡುವ ಭರವಸೆ ಕೊಟ್ಟಿದ್ದಾರೆ. ಎಲ್ಲವನ್ನೂ ಬಳಸಿಕೊಂಡು ನಗರದ ಅಭಿವೃದ್ಧಿಗೆ ಯೋಜನೆ ರೂಪಿಸುತ್ತೇವೆ ಎಂದು ನೂತನ ಮೇಯರ್ ಗಂಗಾಂಬಿಕೆ ಹೇಳಿದ್ದಾರೆ.