2025ರ ವೇಳೆಗೆ ಬೆಂಗಳೂರು ನಗರ ಶೇ.95ರಷ್ಟು ಕಾಂಕ್ರೀಟ್ ಕಾಡು: ತಜ್ಞರು

ಉದ್ಯಾನನಗರಿ ಎಂದು ಹೆಸರು ಪಡೆದಿರುವ ಬೆಂಗಳೂರು ನಗರ ಇನ್ನು 10 ವರ್ಷದೊಳಗೆ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಉದ್ಯಾನನಗರಿ ಎಂದು ಹೆಸರು ಪಡೆದಿರುವ ಬೆಂಗಳೂರು ನಗರ ಇನ್ನು 10 ವರ್ಷದೊಳಗೆ ಸಂಪೂರ್ಣ ಕಾಂಕ್ರೀಟ್ ಕಾಡಿನಂತಾಗುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರಿನಲ್ಲಿ ಬೆಳೆಯುತ್ತಿರುವ ಅವ್ಯಾಹತ ನಗರೀಕರಣವನ್ನು ಪರಿಶೀಲಿಸಿ ತಡೆಯೊಡ್ಡದಿದ್ದರೆ ಶೇಕಡಾ 95ರಷ್ಟು ಭಾಗ ಕಾಂಕ್ರೀಟೀಕರಣವಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ನಗರದಲ್ಲಿ ಹಸಿರು ಭಾಗ ಕಡಿಮೆಯಾಗುತ್ತಿದ್ದು, ಘನತ್ಯಾಜ್ಯ ನಿರ್ವಹಣೆಯಲ್ಲಿ ಅಸಮರ್ಥತೆ, ನಗರದ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ರೇರಾ ಕಾಯ್ದೆ ವಿಫಲ ಮೊದಲಾದವುಗಳು ಇದಕ್ಕೆ ಕಾರಣವಾಗಿದೆ ಎನ್ನಲಾಗುತ್ತದೆ.

ನಗರದಲ್ಲಿರುವ ಹಲವು ಸಮಸ್ಯೆಗಳು, ಸವಾಲುಗಳು ಮೊದಲಾದ ವಿಷಯಗಳ ಕುರಿತ ಕಾರ್ಯಕ್ರಮದಲ್ಲಿ ವಿವಿಧ ನಿವಾಸಿಗಳ ಅಭಿವೃದ್ಧಿ ಸಂಘಟನೆಗಳು ಸುಮಾರು 500ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು. ಬೆಂಗಳೂರಿನ ಹಲವು ಕೆರೆಗಳು ಇಂದು ಮಾಯವಾಗಿ ಅದರ ಜಾಗದಲ್ಲಿ ಅಪಾರ್ಟ್ ಮೆಂಟ್ ಗಳು ಅಣಬೆಗಳು ತಲೆಯೆತ್ತುತ್ತಿವೆ. ಬಿಲ್ಡರ್ ಗಳು ಮತ್ತು ಸರ್ಕಾರ ನಗರದ ಸುತ್ತಮುತ್ತ ಇರುವ ಸಣ್ಣಪುಟ್ಟ ಕೆರೆಗಳನ್ನು ಒತ್ತುವರಿ ಮಾಡಿಕೊಳ್ಳುತ್ತಿವೆ ಎನ್ನುತ್ತಾರೆ ಭಾರತೀಯ ವಿಜ್ಞಾನ ಸಂಸ್ಥೆಯ ಜೈವಿಕ ವಿಜ್ಞಾನ ಕೇಂದ್ರದ ಟಿ ವಿ ರಾಮಚಂದ್ರ.

ಬೆಂಗಳೂರು ನಗರದ ಪರಿಸರ ಸಂರಕ್ಷಣೆ ಗುಂಪು ಫ್ರೆಂಡ್ಸ್ ಆಫ್ ಲೇಕ್ಸ್ ನ ಸಹ ಸ್ಥಾಪಕ ವಿ ರಾಮಪ್ರಸಾದ್, ಬಿಬಿಎಂಪಿಯಲ್ಲಿ ಸರಿಯಾದ ಘನತ್ಯಾಜ್ಯ ನಿರ್ವಹಣೆಯಿಲ್ಲದಿರುವುದರಿಂದ ಕೆರೆಗಳು ಇಂದು ತ್ಯಾಜ್ಯ ಎಸೆಯುವ ಸ್ಥಳವಾಗಿದೆ. ಈ ವರ್ಷದ ಸ್ವಚ್ಛ ಸರ್ವೇಕ್ಷಣ ಆರಂಭವಾಗಿದ್ದರೂ ಬಿಬಿಎಂಪಿ ಆ ಬಗ್ಗೆ ನಿರ್ಲಕ್ಷ್ಯ ಹೊಂದಿದೆ ಎನ್ನುತ್ತಾರೆ.

ಕಾರ್ಪೊರೇಟರ್ ಗಳು ಸಾಮಾಜಿಕ ಜವಬ್ದಾರಿಯಡಿ ಕೆರೆಗಳನ್ನು ದತ್ತು ತೆಗೆದುಕೊಂಡು ಅಭಿವೃದ್ಧಿಪಡಿಸುವಂತೆ ಮಲ್ಲೇಶ್ವರಂ ಕ್ಷೇತ್ರದ ಶಾಸಕ ಸಿಎನ್ ಅಶ್ವಥ ನಾರಾಯಣ ಒತ್ತಾಯಿಸಿದ್ದಾರೆ. ಇಂದು ಹಲವು ಸಂಘಟನೆಗಳಿವೆ, ಅವರಲ್ಲಿ ಪ್ರತಿಯೊಬ್ಬರೂ ಎರಡು ಕೆರೆಗಳಂತೆ ದತ್ತು ತೆಗೆದುಕೊಂಡರೆ ನಾವು ಕೆರೆಗಳಿಗೆ ಮರುಜೀವ ನೀಡಿ ನಗರದ ಸೌಂದರ್ಯವನ್ನು ಅಭಿವೃದ್ಧಿಪಡಿಸಬಹುದು ಎನ್ನುತ್ತಾರೆ ಅವರು.

ಇಂದು ಬೆಂಗಳೂರಿನಲ್ಲಿ ತಿಂಗಳಿಗೆ 30 ಸಾವಿರದಿಂದ 1 ಲಕ್ಷದವರೆಗೆ ಬ್ಯಾಂಕಿಗೆ ಇಎಂಐ ಪಾವತಿಸಿ ಆಸ್ತಿ ಖರೀದಿಸಲು ಸಿದ್ಧರಿದ್ದಾರೆ. ಆದರೆ ಅವರಲ್ಲಿ ಬಹುತೇಕ ಮಂದಿಗೆ ಆ ಜಮೀನು ಸ್ವಂತವಾಗುವುದಿಲ್ಲ ಎನ್ನುತ್ತಾರೆ ವಕೀಲ ಹಾಗೂ ರೇರಾ ತಜ್ಞೆ ಹೆಚ್ ಶಾರದಾ. ಅಪಾರ್ಟ್ ಮೆಂಟ್ ಗಳ ಖರೀದಿದಾರರು ಬಿಲ್ಡರ್ ಗಳು ಮತ್ತು ಕಾಂಟ್ರಾಕ್ಟರ್ ಗಳ ಮೋಸಕ್ಕೆ ಸಿಕ್ಕಿಹಾಕಿಕೊಳ್ಳುತ್ತಾರೆ. ರೇರಾ ಕಾಯ್ದೆ ದಕ್ಷವಾಗಿದ್ದರೆ ಇಂತಹ ಮೋಸ, ವಂಚನೆಯನ್ನು ನಿಲ್ಲಿಸಬಹುದು ಎನ್ನುತ್ತಾರೆ.

ಇನ್ನಾದರೂ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ರೇರಾ ಸಮಿತಿಯನ್ನು ಸ್ಥಾಪಿಸಿ ವಂಚನೆಯನ್ನು ತಡೆಗಟ್ಟಬೇಕು ಎನ್ನುತ್ತಾರೆ ಶಾರದಾ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com