ಮತಗಟ್ಟೆಯ 100 ಮೀಟರ್ ವ್ಯಾಪ್ತಿಯಲ್ಲಿ ಮೊಬೈಲ್‌ ಬಳಕೆ ನಿಷೇಧ: ಮಂಜುನಾಥ್ ಪ್ರಸಾದ್‌

ಮತಗಟ್ಟೆಯ 100 ಮೀಟರ್ ವ್ಯಾಪ್ತಿಯೊಳಗೆ ಯಾವುದೇ ರೀತಿಯ ಮೊಬೈಲ್‌ ಬಳಕೆ, ವೀಡಿಯೋ ಚಿತ್ರೀಕರಣ ಮತ್ತು ಇತರೆ ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳ....
ಮಂಜುನಾಥ್ ಪ್ರಸಾದ್
ಮಂಜುನಾಥ್ ಪ್ರಸಾದ್
ಬೆಂಗಳೂರು: ಮತಗಟ್ಟೆಯ 100 ಮೀಟರ್ ವ್ಯಾಪ್ತಿಯೊಳಗೆ ಯಾವುದೇ ರೀತಿಯ ಮೊಬೈಲ್‌ ಬಳಕೆ, ವೀಡಿಯೋ ಚಿತ್ರೀಕರಣ ಮತ್ತು ಇತರೆ ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳ ಬಳಕೆಯ ಮೇಲೆ ನಿಷೇಧ ಹೇರಲಾಗಿದ್ದು, ಸಾರ್ವಜನಿಕರು ಕಡ್ಡಾಯವಾಗಿ ಇದನ್ನು ಪಾಲಿಸಬೇಕು ಎಂದು ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರು ಶನಿವಾರ ಹೇಳಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗಿರುವ ಮತದಾರರಿಗೆ ಮತದಾರರ ಚೀಟಿ ವಿತರಣಾ ಕಾರ್ಯ ಪ್ರಗತಿಯಲ್ಲಿದ್ದು, ಇದುವರೆಗೆ ಶೇಕಡಾ 77ರಷ್ಟು ಮಂದಿಗೆ ಚೀಟಿ ವಿತರಿಸಲಾಗಿದೆ. ಚುನಾವಣಾ ಸಿಬ್ಬಂದಿಗೆ ತರಬೇತಿಯನ್ನು ನೀಡಲಾಗಿದೆ ಎಂದು ತಿಳಿಸಿದರು.
ಬೆಂಗಳೂರು ನಗರ ವ್ಯಾಪ್ತಿಯಲ್ಲಿ ವಿಶಿಷ್ಟ ಚೇತನರಿಗೆ ಮತದಾನಕ್ಕೆ ಹಲವು ಸೌಲಭ್ಯಗಳನ್ನು ಒದಗಿಸಲಾಗಿದ್ದು, ಅವರು ಮನೆಯಿಂದ ಮತಗಟ್ಟೆಗೆ ಬರಲು ಉಚಿತ ಸಾರಿಗೆ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಓಲಾ ಮತ್ತು ಊಬರ್‌ ಕಂಪನಿಗಳೊಂದಿಗೆ ಈ ಸಂಬಂಧ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಸೌಲಭ್ಯವನ್ನು ವಿಶಿಷ್ಟ ಚೇತನ ಮತದಾರರು ಬಳಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಯಾವುದೇ ದೂರು, ಸಲಹೆ, ಆಕ್ಷೇಪಣೆಗಳನ್ನು ಸ್ವೀಕರಿಸಲು 1950 ಸಂಖ್ಯೆಯ ಉಚಿತ ಸಹಾಯವಾಣಿಯನ್ನು ತೆರೆಯಲಾಗಿದೆ. ಇದುವರೆಗೆ 34,005 ದೂರುಗಳು ಬಂದಿದ್ದು, ಅವುಗಳಲ್ಲಿ 33,955 ದೂರುಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ಮಂಜುನಾಥ್ ಪ್ರಸಾದ್‌ ಮಾಹಿತಿ ನೀಡಿದರು.
ವಿಶಿಷ್ಟ ಚೇತನರಿಗೆ ಮತಗಟ್ಟೆಯ ಮಾಹಿತಿಯನ್ನು ಒಳಗೊಂಡ ಬ್ರೈಲ್‌ ಲಿಪಿ ಗೈಡ್‌ ನೀಡಲಾಗುವುದು ಮತ್ತು ಮತಗಟ್ಟೆಯ ಎಲ್ಲಾ ಅಭ್ಯರ್ಥಿಗಳ ಹೆಸರನ್ನು ಬ್ರೈಲ್‌ ಲಿಪಿಯಲ್ಲಿ ಮುದ್ರಿಸಲಾಗುತ್ತದೆ ಎಂದು ಹೇಳಿದರು.
ಬೆಂಗಳೂರಿನ ಮೂರು ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ನಾಲ್ವರು ಪಕ್ಷೇತರ ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ. ಬೆಂಗಳೂರು ಉತ್ತರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಗಳಾದ ಜಗದೀಶ್‌, ಹನುಮೇಗೌಡ, ಬೆಂಗಳೂರು ಕೇಂದ್ರ ಕ್ಷೇತ್ರದ ಪ್ರಕಾಶ್‌ ರಾಜ್‌, ದಕ್ಷಿಣ ಕ್ಷೇತ್ರದ ಮಂಜುನಾಥ್‌ ಎಂಬವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಾಗಿವೆ. ಚುನಾವಣಾ ಆಯೋಗದ ಸೂಚನೆಯಂತೆ ಮೂರು ಬಾರಿ ಅವರು ಪತ್ರಿಕೆಗಳಲ್ಲಿ ಜಾಹೀರಾತು ನೀಡಬೇಕಾಗುತ್ತದೆ. ಪ್ರಕಾಶ್‌ ರಾಜ್‌ ಎರಡು ಬಾರಿ ಜಾಹೀರಾತು ನೀಡಿದ್ದು, ಇನ್ನು ಒಂದು ಬಾರಿ ನೀಡಬೇಕಿದೆ. ಆದರೆ ಉಳಿದ ಮೂವರು ಜಾಹೀರಾತು ನೀಡಿಲ್ಲ. ಈ ಬಗ್ಗೆ ಅವರಿಗೆ ನೋಟಿಸ್‌ ಜಾರಿ ಮಾಡಲಾಗುವುದು ಎಂದು ಚುನಾವಣಾಧಿಕಾರಿ ತಿಳಿಸಿದರು.
ಮತದಾರರಿಗೆ ಹಣ ನೀಡಿದವರ ಹಾಗೂ ಹಣ ಪಡೆದವರ ವಿರುದ್ಧವೂ ಎಫ್‌ಐಆರ್ ದಾಖಲಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಪ್ರತಿ ಮತಗಟ್ಟೆಯಲ್ಲಿ ಮೂಲಭೂತ ಸೌಕರ್ಯ ಒದಗಿಸುವಂತೆ ಸೂಚಿಸಲಾಗಿದೆ. ಈಗ ಬಹಳ ಸೆಕೆ ಇರುವುದರಿಂದ ಎಲ್ಲಾ ಮತಗಟ್ಟೆಯಲ್ಲಿಯೂ ಫ್ಯಾನ್‌ ಅಳವಡಿಸುವಂತೆ ಬಿಬಿಎಂಪಿ ಇಂಜಿನಿಯರ್‌ಗಳಿಗೆ ಸೂಚನೆ ನೀಡಲಾಗಿದೆ ಎಂದು ಮಂಜುನಾಥ್ ಪ್ರಸಾದ್ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com